24 ಗಂಟೆಯ ಒಳಗಡೆ ಆಕ್ಷೇಪಾರ್ಹ ವಿಷಯಗಳನ್ನು ತೆಗೆಯಲೇಬೇಕು – ಕೇಂದ್ರ ಸರ್ಕಾರ

Public TV
2 Min Read

– ಸಾಮಾಜಿಕ ಜಾಲತಾಣ, ಒಟಿಟಿ ವೇದಿಕೆಗಳಿಗೆ ನಿಯಮ
– ಕಂಪನಿಗಳು 72 ಗಂಟೆಯ ಒಳಗಡೆ ಮಾಹಿತಿ ನೀಡಬೇಕು

ನವದೆಹಲಿ: ಇನ್ನು ಮುಂದೆ ಆಕ್ಷೇಪಾರ್ಹ ಫೋಟೋ, ವಿಷಯ, ವಿಡಿಯೋಗಳನ್ನು ದೂರು ನೀಡಿದ 24 ಗಂಟೆಯ ಒಳಗಡೆ ಸಾಮಾಜಿಕ ಜಾಲತಾಣಗಳು ಮತ್ತು ಒಟಿಟಿ ವೇದಿಕೆಗಳು ತೆಗೆಯಬೇಕೆಂದು ಕೇಂದ್ರ ಸರ್ಕಾರ ಖಡಕ್‌ ಆಗಿ ಸೂಚಿಸಿದೆ.

ಡಿಜಿಟಲ್‌ ಮೀಡಿಯಾದಲ್ಲಿ ದ್ವೇಷ ಮತ್ತು ನಕಲಿ ಸುದ್ದಿಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ರೂಪಿಸಿದೆ. ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್‌ ಜಾವಡೇಕರ್‌ ಸುದ್ದಿಗೋಷ್ಠಿ ನಡೆಸಿ ಜಾರಿಗೆ ತರಲಾದ ಹೊಸ ನಿಯಮಗಳನ್ನು ತಿಳಿಸಿದರು.

ಡಿಜಿಟಲ್‌ ಮೀಡಿಯಾಗಳಲ್ಲಿ ಸುಳ್ಳು ಸುದ್ದಿಗಳು ಮತ್ತು ದ್ವೇಷ ಭಾಷಣಗಳನ್ನು ಹರಡಲಾಗುತ್ತದೆ. ಇವುಗಳನ್ನು ನಿಯಂತ್ರಿಸಬೇಕೆಂದು ಜನರಿಂದ ಆಗ್ರಹ ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಈಗ ನಿಯಮ ರೂಪಿಸಿದೆ.

ನಿಯಮದಲ್ಲಿ ಏನಿದೆ?
ಅಶ್ಲೀಲ, ಮಾನಹಾನಿಕರ, ಆಕ್ಷೇಪಾರ್ಹ, ಅಪ್ರಾಪ್ತ ವಯಸ್ಕರಿಗೆ ಹಾನಿಕಾರಕವಾದ ವಿಷಯ, ಭಾರತದ ಏಕತೆ, ಸಮಗ್ರತೆ, ರಕ್ಷಣೆ, ಭದ್ರತೆ ಅಥವಾ ಸಾರ್ವಭೌಮತ್ವ ಮತ್ತು ಇತರ ದೇಶಗಳೊಂದಿಗಿನ ಸಂಬಂಧಕ್ಕೆ ಧಕ್ಕೆ ತರುವ ವಿಷಯಗಳನ್ನು ನಿಷೇಧಿಸಬೇಕು.

ಸಾಮಾಜಿಕ ಜಾಲತಾಣಗಳು ಸೂಚನೆ ನೀಡಿದ ಅಥವಾ ಕೋರ್ಟ್‌ ಆದೇಶದ 36 ಗಂಟೆಯ ಒಳಗಡೆ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಬೇಕು ಅಥವಾ ನಿಷ್ಕ್ರಿಯಗೊಳಿಸಬೇಕು.

ಸೋಶಿಯಲ್ ಮೀಡಿಯಾ ಮತ್ತು ಮೆಸೇಜಿಂಗ್ ಸೈಟ್‌ಗಳು ಮಾಹಿತಿಯನ್ನು ಮೊದಲ ಹಾಕಿದವರ ಟ್ರ್ಯಾಕಿಂಗ್‌ ಮಾಡಬೇಕು.

ಕಾನೂನು ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಲು ಅಧಿಕಾರ ಹೊಂದಿರುವ ಸರ್ಕಾರಿ ಸಂಸ್ಥೆಗೆ ಕಂಪನಿಗಳು 72 ಗಂಟೆಯ ಒಳಗಡೆ ಮಾಹಿತಿಯನ್ನು ಒದಗಿಸಬೇಕು.

ದೂರು ನೀಡಿದ 24 ಗಂಟೆಗಳ ಒಳಗಡೆ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಬೇಕು ಅಥವಾ ನಿಷ್ಕ್ರಿಯಗೊಳಿಸಬೇಕು.

ದೂರುಗಳನ್ನು ಸ್ವೀಕರಿಸಲು, ಅಂಗೀಕರಿಸಲು ಮತ್ತು ಒಂದು ತಿಂಗಳೊಳಗೆ ಪರಿಹರಿಸಲು ಕಂಪನಿಗಳು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕು.

ನಿಯಮವನ್ನು ಜಾರಿಗೊಳಿಸಲು ಮೂರು ಹಂತದ ಕಾರ್ಯವಿಧಾನ ಜಾರಿಯಾಗಬೇಕು. ಸ್ವಯಂ ನಿಯಂತ್ರಣ, ಸ್ವಯಂ-ನಿಯಂತ್ರಿಸುವ ಸಂಸ್ಥೆಗಳಿಂದ ಸ್ವಯಂ ನಿಯಂತ್ರಣ, ಸರ್ಕಾರದ ಮೇಲ್ವಿಚಾರಣೆ. ನೀತಿ ಸಂಹಿತೆಯ ಯಾವುದೇ ಉಲ್ಲಂಘನೆಯ ಕುರಿತು ಸಾರ್ವಜನಿಕರಿಂದ ಎಲ್ಲ ಕುಂದುಕೊರತೆಗಳನ್ನು ಸ್ವೀಕರಿಸಲು ಮತ್ತು ಪ್ರಕ್ರಿಯೆಗೊಳಿಸಲು ಆನ್‌ಲೈನ್‌ ಪೋರ್ಟಲ್‌ ತೆರೆಯಬೇಕು. ಕುಂದುಕೊರತೆಯನ್ನು 15 ದಿನಗಳ ಒಳಗಡೆ ಪರಿಹರಿಸಬೇಕು.

ಈ ಸೇವೆ ನೀಡುವ ಟೆಕ್ ಕಂಪನಿಗಳು ಕುಂದುಕೊರತೆಯನ್ನು ನಿವಾರಿಸಲು ಅಧಿಕಾರಿಗಳನ್ನು ನೇಮಿಸಬೇಕು.

ಕುಂದುಕೊರತೆಯನ್ನು ನಿವಾರಿಸುವ ಅಧಿಕಾರಿ ಭಾರತದಲ್ಲಿ ವಾಸಿಸಬೇಕು ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ವರದಿ ನೀಡಬೇಕು.

Share This Article
Leave a Comment

Leave a Reply

Your email address will not be published. Required fields are marked *