ಮ್ಯಾನ್ಮಾರ್‌ನಲ್ಲಿ ಬೌದ್ಧ ವಿಹಾರದ ಮೇಲೆ ವೈಮಾನಿಕ ದಾಳಿಗೆ 23 ಮಂದಿ ಬಲಿ

Public TV
1 Min Read

ನೇಪಿಡಾವ್: ಮ್ಯಾನ್ಮಾರ್‌ನ ಮಧ್ಯ ಸಾಗೈಂಗ್ ಪ್ರದೇಶದ ಬೌದ್ಧ ಮಠವೊಂದರ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ 23 ಜನರು ಸಾವನ್ನಪ್ಪಿದ್ದು, 30 ಜನರು ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ 10 ಜನರ ಸ್ಥಿತಿ ಗಂಭೀರವಾಗಿದೆ ಎಂದು ಪ್ರತಿರೋಧ ಗುಂಪಿನ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಪ್ರದೇಶದ ಹತ್ತಿರದ ಹಳ್ಳಿಗಳ 150 ಕ್ಕೂ ಹೆಚ್ಚು ಜನರು ಆಶ್ರಯ ಪಡೆಯುತ್ತಿದ್ದ ಗ್ರಾಮದ ಮಠದ ಕಟ್ಟಡದ ಮೇಲೆ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಜೆಟ್ ಫೈಟರ್ ಬಾಂಬ್ ದಾಳಿ ನಡೆಸಲಾಗಿದೆ. ನಾಲ್ಕು ಮಕ್ಕಳು ಸೇರಿದಂತೆ 23 ನಾಗರಿಕರು ಸಾವನ್ನಪ್ಪಿದ್ದಾರೆ.

ಮ್ಯಾನ್ಮಾರ್‌ನ ಸ್ವತಂತ್ರ ಡೆಮಾಕ್ರಟಿಕ್ ವಾಯ್ಸ್ ಆಫ್ ಬರ್ಮಾ ಆನ್‌ಲೈನ್ ಮಾಧ್ಯಮವು ಸಾವಿನ ಸಂಖ್ಯೆ 30 ಇರಬಹುದು ಎಂದು ವರದಿ ಮಾಡಿದೆ. ಅದನ್ನು ತಕ್ಷಣಕ್ಕೆ ದೃಢಪಡಿಸಲು ಸಾಧ್ಯವಿಲ್ಲ. ದೇಶದ ಎರಡನೇ ಅತಿದೊಡ್ಡ ನಗರವಾದ ಮಂಡಲೆಯಿಂದ ವಾಯುವ್ಯಕ್ಕೆ ಸುಮಾರು 35 ಕಿ.ಮೀ ದೂರದಲ್ಲಿರುವ ಮಠದಲ್ಲಿ ನಡೆದ ಘಟನೆಯ ಬಗ್ಗೆ ಸೇನೆಯು ತಕ್ಷಣ ಪ್ರತಿಕ್ರಿಯಿಸಲಿಲ್ಲ.

2021 ರ ಫೆಬ್ರವರಿಯಲ್ಲಿ ಆಂಗ್ ಸಾನ್ ಸೂಕಿ ಅವರ ಚುನಾಯಿತ ಸರ್ಕಾರದಿಂದ ಸೇನೆಯು ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ ಮ್ಯಾನ್ಮಾರ್ ಪ್ರಕ್ಷುಬ್ಧತೆಯಲ್ಲಿದೆ. ಇದು ಅಂತರ್ಯುದ್ಧಕ್ಕೆ ನಾಂದಿ ಹಾಡಿತು.

Share This Article