2,250ರೂ. ಪಿಂಚಣಿ ಹಣಕ್ಕಾಗಿ ಪತ್ನಿಯನ್ನು ಕೊಲೆಗೈದ 92ರ ವೃದ್ಧ!

Public TV
1 Min Read

– ವಾಕಿಂಗ್ ಸ್ಟಿಕ್ ನಲ್ಲಿ ಹೊಡೆದು ಕೊಂದ
– ಕೊಲೆಯ ಬಳಿಕ ಮಕ್ಕಳಿಗೆ ತಿಳಿಸಿದ

ಹೈದರಾಬಾದ್: ಪತ್ನಿಯನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 92 ವರ್ಷದ ವೃದ್ಧನನ್ನು ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವೃದ್ಧನನ್ನು ಎಂ. ಸ್ಯಾಮ್ಯುಯೆಲ್ ಎಂದು ಗುರುತಿಸಲಾಗಿದ್ದು, ಈತ ಪತ್ನಿ ಅಪ್ರಾಯಮ್ಮ(90)ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆ ಗುಂಟೂರು ಜಿಲ್ಲೆಯ ಅಮೃತಲೂರು ಬ್ಲಾಕ್ ನ ಯಲವರ್ರು ಗ್ರಾಮದಲ್ಲಿ ಸೋಮವಾರ ನಡೆದಿದೆ.

ಆಂಧ್ರ ಸರ್ಕಾರದ ನಿಯಮದ ಪ್ರಕಾರ, ಪ್ರತಿ ಕುಟುಂಬದ ಒಬ್ಬ ಹಿರಿಯ ಸದಸ್ಯ 2,250 ರೂ. ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಸ್ಯಾಮ್ಯುಯೆಲ್ ಪತ್ನಿ ಅಪ್ರಾಯಮ್ಮ ಅವರು ಪ್ರತಿ ತಿಂಗಳ ಮೊದಲ ವಾರದಲ್ಲಿ ಹಣವನ್ನು ಸ್ವೀಕರಿಸಲು ನೋಂದಾವಣೆ ಮಾಡಿದ್ದರು.

ಇತ್ತ ಹಣದ ವಿಚಾರವಾಗಿ ಸ್ಯಾಮ್ಯುಯೆಲ್ ಹಾಗೂ ಅಪ್ರಾಯಮ್ಮ ನಡುವೆ ಜಗಳ ಉಂಟಾಗಿತ್ತು. ಹೀಗಾಗಿ ದಂಪತಿ 10 ವರ್ಷಗಳಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಆದರೆ ಕಾನೂನುಬದ್ಧವಾಗಿ ಇವರಿಬ್ಬರು ವಿಚ್ಛೇದನ ಪಡೆದುಕೊಂಡಿರಲಿಲ್ಲ.

ನವೆಂಬರ್ 1ರಂದು ಸ್ಯಾಮ್ಯುಯೆಲ್ ತನ್ನ ಪಾಲನ್ನು ತೆಗೆದುಕೊಳ್ಳುವ ಸಲುವಾಗಿ ಅಪ್ರಾಯಮ್ಮನ ಭೇಟಿ ಮಾಡಲು ಹೋಗಿದ್ದನು. ಈ ವೇಳೆ ತನಗೆ ಬರುತ್ತಿರುವ ಪಿಂಚಣಿ ಹಣದಿಂದ ಸ್ವಲ್ಪ ಹಣ ಕೊಟ್ಟಿದ್ದರಿಂದ ಸಿಟ್ಟಾದ ಸ್ಯಾಮ್ಯುಯೆಲ್ ಅಲ್ಲಿಂದ ಕೋಪಗೊಂಡು ಹೊರಟು ಹೋಗಿದ್ದನು. ಹೀಗೆ ಹೋದವನು ಮರುದಿನ ಮುಂಜಾನೆಯೇ ವಾಪಸ್ ಬಂದು ಅಪ್ರಾಯಮ್ಮನನ್ನು ವಾಕಿಂಕ್ ಸ್ಟಿಕ್ ನಲ್ಲಿ ಹೊಡೆದು ಕೊಂದಿದ್ದಾನೆ.

ಪತ್ನಿ ಸಾವನ್ನಪ್ಪಿದ್ದನ್ನು ಖಚಿತಪಡಿಸಿಕೊಂಡ ಕೆಲ ಹೊತ್ತಿನ ಬಳಿಕ ಸ್ಯಾಮ್ಯುಯೆಲ್ ತನ್ನ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಕೊಲೆಗೆ ಬಗ್ಗೆ ತಿಳಿಸಿದ್ದಾನೆ. ಮೊದಲು ಯಾರೂ ಸ್ಯಾಮ್ಯುಯೆಲ್ ಮಾತನ್ನು ನಂಬಿರಲಿಲ್ಲ. ನೆರೆಹೊರೆಯವರು ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ ಅಪ್ರಾಯಮ್ಮನನ್ನು ಕಂಡು ಸುದ್ದಿ ಹಬ್ಬಿಸಿದರು. ಈ ವಿಚಾರ ಅಪ್ರಾಪಯಮ್ಮನ ಕುಟುಂಬಕ್ಕೆ ತಲುಪಿತ್ತು.

ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಪ್ರಾಯಮ್ಮ ಕುಟುಂಬಸ್ಥರು, ಸ್ಯಾಮ್ಯುಯೆಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಸ್ಯಾಮ್ಯುಯೆಲ್ ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *