22 ವರ್ಷ ದೇಶ ಸೇವೆ, ಮುಂದಿನ ವರ್ಷ ನಿವೃತ್ತಿ- ಕನಸಿನ ಮನೆಗೆ ಬರೋ ಮುನ್ನ ಯೋಧ ಹುತಾತ್ಮ

Public TV
2 Min Read

– ಕುಟುಂಬಕ್ಕಾಗಿ 18ನೇ ವಯಸ್ಸಿಗೆ ಸೇನೆ ಸೇರಿದ್ರು
– ಜೂನ್ 3ರಂದು ಕನಸಿನ ಮನೆಯ ಗೃಹಪ್ರವೇಶ

ಚೆನ್ನೈ: ಲಡಾಖ್‍ನ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರ ಅಟ್ಟಹಾಸಕ್ಕೆ ಹುತಾತ್ಮರಾದ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕಡುಕಲೂರು ಗ್ರಾಮದ 40 ವರ್ಷದ ಭಾರತೀಯ ಸೇನಾ ಸೈನಿಕ ಕೆ.ಪಳನಿ ಮುಂದಿನ ವರ್ಷ ಸೇನೆಯಿಂದ ನಿವೃತ್ತಿಯಾಗಬೇಕಿತ್ತು.

ಕೆ.ಪಳನಿ ಅವರು 22 ವರ್ಷಗಳ ಕಾಲ ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿದ್ದು, ಮುಂದಿನ ವರ್ಷ ಸೇನೆಯಿಂದ ನಿವೃತ್ತಿ ಹೊಂದಲು ಯೋಜಿಸಿದ್ದರು. ಆದರೆ ಸೋಮವಾರ ರಾತ್ರಿ ಲಡಾಖ್‍ನ ಇಂಡೋ-ಚೀನೀ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಲ್ಲಿ ಇವರು ಒಬ್ಬರಾಗಿದ್ದಾರೆ.

ಯೋಧ ಪಳನಿ:
ಕಡುಕಲೂರು ಗ್ರಾಮದಲ್ಲಿ ರೈತ ದಂಪತಿಯಾದ ಕಾಲಿಮುತ್ತು ಮತ್ತು ಲೋಗಂಬಲ್ ಅವರ ಹಿರಿಯ ಪುತ್ರರಾಗಿದ್ದರು. ಇವರು ಪತ್ನಿ ವನತಿ ದೇವಿ (35) ಮತ್ತು 10 ವರ್ಷದ ಮಗ ಮತ್ತು 8 ವರ್ಷದ ಮಗಳನ್ನು ಅಗಲಿದ್ದಾರೆ. ಪಳನಿ ಅವರು ಬಡಕುಟುಂಬದಿಂದ ಬಂದವರಾಗಿದ್ದು, 12ನೇ ತರಗತಿವರೆಗೂ ಹಳ್ಳಿಯ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ನಂತರ ಪಳನಿ ತಮ್ಮ ಶಾಲಾ ದಿನಗಳಲ್ಲಿ ಕ್ರೀಡಾಪಟುವಾಗಿದ್ದು, 18 ವಯಸ್ಸಿನಲ್ಲೇ ಸಶಸ್ತ್ರ ಪಡೆಗೆ ಸೇರಲು ನಿರ್ಧರಿಸಿದ್ದರು.

ಪಳನಿ ತನ್ನ ಬಡತನ ಕುಟುಂಬವನ್ನು ಉನ್ನತ ಮಟ್ಟಗೇರಿಸಲು ಸೇನೆಗೆ ಸೇರಲು ತೀರ್ಮಾನಿಸಿದ್ದರು. ಅದರಂತೆಯೇ 18ನೇ ವಯಸ್ಸಿನಲ್ಲಿ ಸೇನೆಗೆ ಸೇರಿದರು. ಪಳನಿ ತಮ್ಮ ಸಹೋದರ ಮತ್ತು ತಂಗಿಗೆ ತಂದೆಯಾಗಿ ಅವರನ್ನು ನೋಡಿಕೊಳ್ಳುತ್ತಿದ್ದರು. ಪಳನಿ ಸಹೋದರನಿಗೆ ಶಿಕ್ಷಣ ಕೊಡಿಸಲು ಮತ್ತು ಸಹೋದರಿಯನ್ನು ಮದುವೆ ಮಾಡಲು ತುಂಬಾ ಕಷ್ಟಪಟ್ಟಿದ್ದಾರೆ. ಅವರ ಸಹೋದರ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ರಾಜಸ್ಥಾನದಲ್ಲಿ ಸೇವೆ ಮಾಡುತ್ತಿದ್ದಾರೆ ಎಂದು ಸಂಬಂಧಿಯೊಬ್ಬರು ಹೇಳಿದರು.

ದೇಶ ಸೇವೆ ಮಾಡುವ ಬಗ್ಗೆ ಪಳನಿ ತುಂಬಾ ಹೆಮ್ಮೆ ಪಡುತ್ತಿದ್ದರು. ಅವರ ಮಕ್ಕಳು ದೊಡ್ಡವರಾದ ಮೇಲೆ ಸೇನೆಗೆ ಸೇರುವಂತೆ ಮಾಡುವ ಬಗ್ಗೆ ಕನಸು ಕಂಡಿದ್ದರು. ಪಳನಿ ಅವರು ಪಿಯುಸಿ ಮುಗಿಯುತ್ತಿದ್ದಂತೆ ಸೇನೆಗೆ ಸೇರಿದ್ದರು. ಹೀಗಾಗಿ ದೂರ ಶಿಕ್ಷಣದ ಮೂಲಕ ಇತಿಹಾಸದಲ್ಲಿ ಬಿಎ ಪೂರ್ಣಗೊಳಿಸಿದರು. ಮದುವೆಯ ನಂತರ ಅವರ ಪತ್ನಿಗೆ ಬಿ.ಎಡ್ ಕೋರ್ಸ್ ಪೂರ್ಣಗೊಳಿಸಲು ಪ್ರೋತ್ಸಾಹ ನೀಡಿದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಪಳನಿ ರಜಾದಿನದಲ್ಲಿ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದರು. ಅವರೇ ಅಡುಗೆ ಮಾಡಿಕೊಡುತ್ತಿದ್ದರು. ಮಕ್ಕಳೊಂದಿಗೆ ಆಟವಾಡುವ ಮೂಲಕ ತುಂಬಾ ಆನಂದದಿಂದ ಇರುತ್ತಿದ್ದರು. ಭಾರತದ ಗಡಿಯಲ್ಲಿ 22 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಜೂನ್ 3 ರಂದು ಅವರ ಕನಸಿನ ಮನೆಗೆ ಗೃಹ ಪ್ರವೇಶ ಕೂಡ ಮಾಡಿದ್ದರು.

 

ಪಳನಿ ಜನವರಿ ಬಳಿಕ ಕುಟುಂಬದ ಜೊತೆ ಇರಲು ಬರಲಿದ್ದರು. ಆದರೆ ಹೋರಾಟಗಳಿಂದ ತುಂಬಿದ ಜೀವನವನ್ನು ನಡೆಸಿ, ಸ್ವಂತ ಮನೆಯನ್ನು ನಿರ್ಮಿಸಿಕೊಂಡಿದ್ದರು. ಇನ್ನೂ ಮುಂದೆ ಪಳನಿ ಅವರಿಗೆ ಒಳ್ಳೆಯದಾಗುತ್ತದೆ ಎಂದು ನಾವು ಭಾವಿಸಿದ್ದೇವು. ಮುಂದಿನ ವರ್ಷ ನಿವೃತ್ತಿಯಾಗುತ್ತಿದ್ದರು. ಆದರೆ ಅಷ್ಟರಲ್ಲಿಯೇ ಹುತಾತ್ಮರಾಗಿದ್ದಾರೆ. ಇದರಿಂದ ಕುಟುಂಬಕ್ಕೆ ಶಕ್ತಿ, ಆಧಾರಸ್ತಂಭವಾಗಿದ್ದ ಅವರನ್ನು ಕಳೆದುಕೊಂಡು ಕುಟುಂಬದವರು ದುಃಖ ಪಡುತ್ತಿದ್ದಾರೆ ಎಂದು ಗ್ರಾಮಸ್ಥರು ನೋವಿನಿಂದ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *