22 ತಿಂಗಳ ಬಳಿಕ ಭಕ್ತರಿಗೆ ಸುಳ್ವಾಡಿ ಮಾರಮ್ಮನ ದರ್ಶನ

Public TV
3 Min Read

ಚಾಮರಾಜನಗರ: ವಿಷಪ್ರಸಾದ ದುರಂತದ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಕಿಚ್ ಗುತ್ ಮಾರಮ್ಮ ದೇವಾಲಯ 22 ತಿಂಗಳ ನಂತರ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ.

2018ರ ಡಿಸೆಂಬರ್ 14 ರಂದು ಈ ದೇವಾಲಯದಲ್ಲಿ ನಡೆದ ವಿಷಪ್ರಸಾದ ಘಟನೆಯಲ್ಲಿ 17 ಮಂದಿ ಮೃತಪಟ್ಟು 120ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಅಂದಿನಿಂದ ದೇಗುಲಕ್ಕೆ ಬೀಗ ಜಡಿದು ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ಮಾರಮ್ಮನ ದರ್ಶನ ಪಡೆಯಲು ಚಾತಕ ಪಕ್ಷಿಗಳಂತೆ ಕಾದಿದ್ದ ಭಕ್ತ ಸಮೂಹದಲ್ಲಿ ಸಂತಸ ಮನೆ ಮಾಡಿದೆ.

ಜಿಲ್ಲೆಯ ಹನೂರು ತಾಲೂಕು ಕಿಚ್ ಗುತ್ ಮಾರಮ್ಮ ದೇವಾಲಯಕ್ಕೆ, ಅಪಾರ ಭಕ್ತ ಸಮೂಹವಿದೆ. ಕಿಚ್ ಗುತ್ ಮಾರಮ್ಮ ನಂಬಿದವರನ್ನು ಕೈಬಿಡುವುದಿಲ್ಲ. ಕಿಚ್ ಗುತ್ ಮಾರಮ್ಮನಿಗೆ ಹರಕೆ ಹೊತ್ತರೆ ತಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ.

ಖಾಸಗಿ ಟ್ರಸ್ಟ್ ಒಡೆತನದಲ್ಲಿದ್ದ ಈ ದೇಗುಲಕ್ಕೆ ಅಪಾರ ಪ್ರಮಾಣದ ಆದಾಯವೂ ಹರಿದುಬರುತ್ತಿತ್ತು. ಟ್ರಸ್ಟ್ ನಲ್ಲಿ ಅದಿಪತ್ಯ ಸ್ಥಾಪಿಸುವ ಹುನ್ನಾರ ನಡೆಸಿದ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ ಹಾಗೂ ಇತರ ಮೂವರು ಸೇರಿ ಟ್ರಸ್ಟ್ ನ ಇತರ ಸದಸ್ಯರಿಗೆ ಕೆಟ್ಟ ಹೆಸರು ತರಲು ಯೋಜನೆ ರೂಪಿಸಿದ್ದರು. ದೇಗುಲದ ಗೋಪುರ ನಿರ್ಮಾಣ ಶಂಕುಸ್ಥಾಪನಾ ಸಮಾರಂಭದಲ್ಲಿ ದೇವರ ಪ್ರಸಾದಕ್ಕೆ ವಿಷಬೆರೆಸಿದ್ದರು. ಇದನ್ನು ಅರಿಯದೆ ಪ್ರಸಾದ ಸೇವಿಸಿದ ಮುಗ್ಧ ಭಕ್ತರ ಪೈಕಿ 17 ಮಂದಿ ಮೃತಪಟ್ಟು, 120ಕ್ಕು ಹೆಚ್ಚು ಮಂದಿ ಅಸ್ವಸ್ಥರಾದ ಘೋರ ದುರಂತವೇ ನಡೆದುಹೋಗಿತ್ತು.

2018ರ ಡಿಸೆಂಬರ್ 14 ರಂದು ಈ ದುರ್ಘಟನೆ ನಡೆದು ಅಂದಿನಿಂದ ಈ ದೇವಾಲಯಕ್ಕೆ ಬೀಗ ಜಡಿಯಲಾಗಿತ್ತು. ನಂತರ ಮುಜರಾಯಿ ಇಲಾಖೆ ಈ ದೇವಾಲಯವನ್ನು ತನ್ನ ವಶಕ್ಕೆ ಪಡೆದಿತ್ತು. ಇಷ್ಟೆಲ್ಲಾ ಆದರು ಈ ಭಾಗದ ಜನರಿಗೆ ಕಿಚ್ ಗುತ್ ಮಾರಮ್ಮನ ಮೇಲೆ ಭಕ್ತಿ ಒಂದಿನಿತು ಕಡಿಮೆಯಾಗಲಿಲ್ಲ. ದೇಗುಲವನ್ನು ತೆರೆದು ದರ್ಶನಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದರು. ಭಕ್ತರ ಬೇಡಿಕೆ ಮೇರೆಗೆ ದೇವಾಲಯವನ್ನು ತೆರೆಯಲು ನಿರ್ಧರಿಸಿದ ದೇವಾಲಯ ಕಳೆದ ಮೂರು ದಿನಗಳಿಂದ ಇಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನು ನಡೆಸಿ ಇಂದು ಪೂರ್ಣಾಹುತಿ, ದೇವಾಲಯ ಸಂಪ್ರೋಕ್ಷಣೆ ಪ್ರಾಯಶ್ಚಿತ್ತ ಮತ್ತು ಕುಂಭಾಭಿಷೇಕ ನಡೆಸಿ ಬೆಳಿಗ್ಗೆ 11.20 ರಿಂದ 12.15ರೊಳಗೆ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ದೇಗುಲದ ಬಾಗಿಲು ತೆರೆದು ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯ್ತು.

ದೇವಿಯ ದರ್ಶನಕ್ಕೆ ಜಾತಕ ಪಕ್ಷಿಗಳಂತೆ ಕಳೆದ ಇಪ್ಪತ್ತೆರಡು ತಿಂಗಳಿಂದ ಕಾದಿದ್ದ ಭಕ್ತರು ಮೊದಲ ದಿನವೇ ಅಪಾರ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು. ಕೋವಿಡ್-19 ಹಿನ್ನೆಲೆಯಲ್ಲಿ ಭಕ್ತರನ್ನು ಸಾಮಾಜಿಕ ಅಂತರದೊಂದಿಗೆ ಸರತಿ ಸಾಲಿನಲ್ಲಿ ನಿಲ್ಲಿಸಿ ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ಯಾನಿಂಗ್ ಮಾಡಿ ದೇಗುಲದ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಹನೂರು ಶಾಸಕ ಆರ್.ನರೇಂದ್ರ, ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ಮೊದಲ ದಿನವೇ ಕಿಚ್ ಗುತ್ ಮಾರಮ್ಮ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ಈ ಹಿಂದೆ ನಡೆಯುತ್ತಿದ್ದ ಪ್ರಾಣಿಬಲಿ ಹಾಗು ಪರು ನಿಷೇಧಸಿಲಾಗಿದೆ. ಭಕ್ತರು ದೇವರ ದರ್ಶನ ಪಡೆದು ಸಹಪಂಕ್ತಿ ಭೋಜನಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಕೊರೊನಾ ಹಿನ್ನಲೆಯಲ್ಲಿ ತಮಿಳುನಾಡಿನ ಭಕ್ತರ ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನೊಂದೆಡೆ ಜಿಲ್ಲಾಡಳಿತ ದೇವಾಲಯ ತೆರೆಯಲು ತೋರಿದ ಆಸಕ್ತಿಯನ್ನು ಸಂತ್ರಸ್ಥರಿಗೆ ನ್ಯಾಯ ಕೊಡಿಸುವುದಕ್ಕು ತೋರಬೇಕು,ವಿಷಪ್ರಸಾದ ದುರಂತದ ಬಗ್ಗೆ ತ್ವರಿತವಾಗಿ ವಿಚಾರಣೆ ನಡೆಸಬೇಕು, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು, ಸಂತ್ರಸ್ಥರಿಗೆ ಸರ್ಕಾರ ನೀಡಿರುವ ತಲಾ ಎರಡು ಎಕರೆ ಜಮೀನು, ನಿವೇಶನದ ಭರವಸೆ ಈಡೇರಿಸಬೇಕು ನೀಡಬೇಕು ಎಂಬುದು ಸಂತ್ರಸ್ಥರ ಆಗ್ರಹವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *