ಪರೀಕ್ಷೆಯಲ್ಲಿ ಕಳಪೆ ಅಂಕ ಬಂತೆಂದು MBBS ವಿದ್ಯಾರ್ಥಿನಿ ಆತ್ಮಹತ್ಯೆ

Public TV
1 Min Read

ಜೈಪುರ: ಪರೀಕ್ಷೆಯಲ್ಲಿ ಕಳಪೆ ಅಂಕ (Poor Grades) ಬಂದಿದೆ ಅನ್ನೋ ಕಾರಣಕ್ಕೆ ಕೋಟ ಸರ್ಕಾರಿ ವೈದ್ಯಕೀಯ ಕಾಲೇಜಿನ ತೃತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ (MBBS Student) ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವ ಘಟನೆ ನಡೆದಿದೆ.

ಪ್ರಾಚಿ ಮೀನಾ (21) ಮೃತ ದುರ್ದೈವಿ. ಕಾಲೇಜು ಪರೀಕ್ಷೆಯಲ್ಲಿ ಕಳಪೆ ಅಂಕ ಗಳಿಸಿದ್ದರಿಂದ ಖಿನ್ನತೆಯಿಂದ ಬಳಲುತ್ತಿದ್ದ ಪ್ರಾಚಿ ಕೋಟದ ಆಕಾಶವಾಣಿ ಕಾಲೋನಿಯಲ್ಲಿರುವ ತನ್ನ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯನ್ನ ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಕೆಯನ್ನು ಸತ್ತಿರುವುದಾಗಿ ಘೋಷಿಸಿದರು.

ಮೃತ ವಿದ್ಯಾರ್ಥಿನಿ ಮೂಲತಃ ರಾಜಸ್ಥಾನದ ದೌಸಾದವರು. ತಂದೆ ಆಲ್ ಇಂಡಿಯಾ ರೇಡಿಯೋ ದಲ್ಲಿ ಕೆಲಸ‌ ನಿರ್ವಹಿಸುತ್ತಿದ್ದಾರೆ. ಪೋಷಕರು ಮೂವರು ಸಹೋದರರೊಂದಿಗೆ ಸರ್ಕಾರಿ ಕ್ವಾರ್ಟಸ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ನಯಾಪುರ ಸರ್ಕಲ್ ಇನ್ಸ್‌ಪೆಕ್ಟರ್ ವಿನೋದ್ ಕುಮಾರ್ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸೋದಾಗಿ ಪೊಲೀಸರು ತಿಳಿಸಿದ್ದಾರೆ.

Share This Article