21 ವರ್ಷದ ಯುವತಿಗೆ ಸರ್ಕಾರ ಹೆದರಿತಾ?- ಪ್ರಿಯಾಂಕಾ ಗಾಂಧಿ ಪ್ರಶ್ನೆ

Public TV
3 Min Read

– ಅಜ್ಮಲ್ ಕಸಬ್ 21 ವರ್ಷದವನಿದ್ದ ಅಂದ್ರು ಬಿಜೆಪಿ ನಾಯಕರು
– ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಯ್ತು At 21

ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಸರ್ಕಾರ 21 ವರ್ಷದ ಯುವತಿಗೆ ಹೆದರಿದೆಯಾ ಎಂದು ಪ್ರಶ್ನೆ ಮಾಡಿದ್ದರು. ಪ್ರಿಯಾಂಕಾ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಉಗ್ರ ಅಜ್ಮಲ್ ಕಸಬ್ ಸಹ 21 ವರ್ಷದವನಿದ್ದನು ಎಂದು ಹೇಳಿದೆ. ಟ್ವಿಟ್ಟರ್ ನಲ್ಲಿಯೂ ಸದ್ಯ ಆ್ಯಟ್ 21 ಟ್ರೆಂಡ್ ಆಗಿದೆ.

ದೆಹಲಿ ಪೊಲೀಸರು ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‍ಬರ್ಗ್ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಪರಿಸರ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಬೆಂಗಳೂರಿನ ದಿಶಾ ರವಿಯನ್ನ ಬಂಧಿಸಿ ಐದು ದಿನದ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ದಿಶಾ ರವಿ ಬಂಧನವನ್ನ ಖಂಡಿಸಿರುವ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ಮೀನಾ ಹ್ಯಾರಿಸ್, ಚಿದಂಬರಂ ಪ್ರಶ್ನೆ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ಕೇಂದ್ರ ಸಚಿವ ಶಶಿ ತರೂರ್ ಸೇರಿದಂತೆ ಹಲವು ನಾಯಕರು ದಿಶಾ ರವಿ ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೋದರ ಸೊಸೆ ಮೀನಾ ಹ್ಯಾರಿಸ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಸರ್ಕಾರ ಕಾರ್ಯಕರ್ತರನ್ನ ಯಾಕೆ ಟಾರ್ಗೆಟ್ ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ರೈತರನ್ನು ಸಮರ್ಥಿಸಿದ ಟೂಲ್ ಕಿಟ್, ಭಾರತದ ಗಡಿಯಲ್ಲಿ ಚೀನಾ ಒಳನುಸುಳವಿಕೆಗಿಂತಾ ಅಪಾಯಕಾರಿ ಆಯ್ತಾ ಎಂದು ಮಾಜಿ ಕೇಂದ್ರ ಸಚಿವ ಚಿದಂಬರಂ ಪ್ರಶ್ನೆ ಮಾಡಿದ್ದಾರೆ.

ಕೇಂದ್ರದ ವಿರುದ್ಧ ವಾಗ್ದಾಳಿ: ಭಾರತ ದೇಶವನ್ನ ಸುಮ್ಮನೆ ಕೂರಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ರೆ, 21 ವರ್ಷದ ದಿಶಾ ರವಿಯ ಬಂಧನ ಪ್ರಜಾಪ್ರಭುತ್ವದ ಮೇಲೆ ದಾಳಿ. ನಮ್ಮ ರೈತರನ್ನ ಸಮರ್ಥಿಸಿಕೊಳ್ಳುವುದು ಅಪರಾಧವಾಗಲ್ಲ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಿ.ಸಿ.ಮೋಹನ್ ತಿರುಗೇಟು: ದಿಶಾ ರವಿ ಬಂಧನಕ್ಕೆ ವಿರೋಧ ವಿರೋಧ ವ್ಯಕ್ತಪಡಿಸಿರುವ ಎಡಪಕ್ಷಗಳಿಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ತಿರುಗೇಟು ನೀಡಿದ್ದಾರೆ. ಬುರ್ಹಾನ್ ವಾನಿ, ಅಜ್ಮಲ್ ಕಸಬ್ 21 ವರ್ಷದವರಿದ್ದರು. ವಯಸ್ಸು ಜಸ್ಟ್ ನಂಬರ್. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ. ಅಪರಾಧ ಯಾವಾಗಲೂ ಅಪರಾಧವೇ ಎಂದು ಟ್ವೀಟ್ ಮಾಡಿದ್ದಾರೆ.

ಯಾರು ಈ ದಿಶಾ ರವಿ?: 21 ವರ್ಷದ ದಿಶಾ ರವಿ ಓರ್ವ ಪರಿಸರ ಹೋರಾಟಗಾರ್ತಿ. ಫ್ರೈಡೆ ಫಾರ್ ಫ್ಯೂಚರ್ ಎಂಬ ಕಂಪನಿಯ ಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ನಗರ ಪ್ರಸಿದ್ಧ ಕಾಲೇಜಿನಲ್ಲಿ ಎಂಬಿಎ ಪದವಿ ಓದಿರುವ ದಿಶಾ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಮೈಸೂರಿನಲ್ಲಿ ಅಥ್ಲೆಟಿಕ್ಸ್ ಕೋಚ್ ಆಗಿದ್ದು ತಾಯಿ ಗೃಹಿಣಿಯಾಗಿದ್ದಾರೆ. ಟೂಲ್ ಟ್ವೀಟ್ ಮಾಡಿ ಬೆಂಬಲ ನೀಡಲು ಹಣ ಪಡೆದ ಆರೋಪ ದಿಶಾ ರವಿ ಮೇಲಿದೆ.

ದೇಶದಲ್ಲಿ ನಡೆಯುತ್ತಿರುವ ಕೃಷಿ ಆಂದೋಲನವನ್ನು ಬೆಂಬಲಿಸಿ ಗ್ರೇಟಾ ಥನ್‍ಬರ್ಗ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಇದರ ಜೊತೆ ಇನ್ನೊಂದು ಟ್ವೀಟ್ ಮಾಡಿ ಒಂದು ಡಾಕ್ಯುಮೆಂಟ್ ರಿಲೀಸ್ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಹೇಗೆ ಚಳವಳಿ ನಡೆಸಬೇಕು ಎಂಬ ಕಾರ್ಯಯೋಜನೆ ಟೂಲ್ ಕಿಟ್ ನಲ್ಲಿತ್ತು. ಆ ಟ್ವೀಟ್ ಭಾರತದಲ್ಲಿನ ಕೃಷಿ ಚಳವಳಿಯಲ್ಲಿ ವಿದೇಶಿ ಶಕ್ತಿಗಳ ಕೈವಾಡವನ್ನು ಬಯಲಿಗೆಳೆದಿದೆ ಎಂದು ಬಿಜೆಪಿ ಆಪಾದಿಸಿತ್ತು. ಈ ಆರೋಪಗಳ ಬೆನ್ನಲ್ಲೇ ಗ್ರೇಟಾ ಥನ್‍ಬರ್ಗ್ ಟೂಲ್ ಕಿಟ್ ತನ್ನ ಟ್ವೀಟ್ ಡಿಲೀಟ್ ಮಾಡಿದ್ದರು. ನಂತರ ಹೊಸ ಟ್ವೀಟ್ ಮಾಡಿ ಹೊಸ ಟೂಲ್ ಕಿಟ್ ಬಿಡುಗಡೆ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *