ಏ.1 ರಿಂದ ವಾರ್ಷಿಕ ಟೋಲ್‌ ಪಾಸ್‌ ದರ ಏರಿಕೆ – ಅರ್ಧದಷ್ಟು ವಿನಾಯ್ತಿ ಯಾವಾಗ ಸಿಗುತ್ತೆ?

4 Min Read

– ಹಣಕಾಸು ವರ್ಷದಿಂದ FASTTag ನಿಯಮದಲ್ಲಿ ಏನೆಲ್ಲಾ ಬದಲಾವಣೆ?

ಖಾಸಗಿ ಕಾರು, ಜೀಪ್, ವ್ಯಾನ್‌ ಹೊಂದಿದ್ದವರು ದೇಶಾದ್ಯಂತ ಪ್ರಯಾಣಸಬೇಕಾದ್ರೆ ಹಿಂದೆಲ್ಲಾ ಟೋಲ್‌ ಬೂತ್‌ಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿತ್ತು. ಆ ಪರಿಸ್ಥಿತಿ ತಪ್ಪಿಸಲು ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಆರಂಭಿಸಲಾಯಿತು. ಇದರೊಂದಿಗೆ ಗ್ರಾಹಕರು ಆರ್ಥಿಕ ಉಳಿತಾಯ ಪಡೆಯಲು ವಾರ್ಷಿಕ ಟೋಲ್‌ ಪಾಸ್‌ ವ್ಯವಸ್ಥೆಯನ್ನ ಆರಂಭಿಸಲಾಯಿತು. ಇದೀಗ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ದರ ಏರಿಕೆ ಶಾಕ್ ಕೊಟ್ಟಿದೆ. 2026 – 27ನೇ ಹಣಕಾಸು ವರ್ಷದಿಂದ ಅನ್ವಯವಾಗುವಂತೆ ಫಾಸ್ಟ್‌ಟ್ಯಾಗ್‌ ವಾರ್ಷಿಕ ಪಾಸ್ ದರವನ್ನು ಪರಿಷ್ಕರಿಸಲಾಗಿದ್ದು, ಏಪ್ರಿಲ್ 1 ರಿಂದ ಹೊಸ ದರಗಳು ಜಾರಿಗೆ ಬರಲಿವೆ.

ಎನ್‌ಹೆಚ್‌ಎಐ ಹೊರಡಿಸಲಾದ ಅಧಿಕೃತ ಆದೇಶದ ಪ್ರಕಾರ, ವಾಣಿಜ್ಯೇತರ ವಾಹನಗಳ ವಾರ್ಷಿಕ ಪಾಸ್ ದರದಲ್ಲಿ ಅಲ್ಪ ಏರಿಕೆ ಮಾಡಲಾಗಿದೆ. ಒಂದಕ್ಕಿಂತ ಹೆಚ್ಚು ಬಾರಿ ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗಾಗಿ 2025ರ ಆಗಸ್ಟ್ 15ರಂದು ಈ ಯೋಜನೆಯನ್ನ ಜಾರಿಗೆ ತರಲಾಗಿತ್ತು. ಪದೇ ಪದೇ ಟೋಲ್ ಪಾವತಿಸುವ ಕಿರಿಕಿರಿ ತಪ್ಪಿಸುವುದು ಮತ್ತು ಡಿಜಿಟಲ್ ಪಾವತಿ ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ವಾರ್ಷಿಕ ಟೋಲ್‌ ಪಾಸ್‌ ದರ ಎಷ್ಟು ಹೆಚ್ಚಾಗಲಿದೆ? ಯಾವ ಸಂದರ್ಭದಲ್ಲಿ ಟೋಲ್‌ ಶುಲ್ಕ ಅರ್ಧದಷ್ಟು ವಿನಾಯ್ತಿ ಸಿಗುತ್ತದೆ? ಫಾಸ್ಟ್‌ ಟ್ಯಾಗ್‌ ಅಂದ್ರೆ ಏನು? ಹಣಕಾಸು ವರ್ಷದಿಂದ ಫಾಸ್ಟ್‌ ಟ್ಯಾಗ್‌ ನಿಯಮದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ? ಎಂಬುದನ್ನ ತಿಳಿಬೇಕಿದ್ದರೆ ಮುಂದೆ ಓದಿ…

ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಎಂದರೇನು?
ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ಈ ಪ್ರಿಪೇಯ್ಡ್ ಪಾಸ್ ಅನ್ವಯವಾಗುತ್ತದೆ. ಈಗ ಟೋಲ್‌ ಪಾವತಿಗಳಿಗಾಗಿ ಫಾಸ್ಟ್‌ಟ್ಯಾಗ್ ಕಾರ್ಡ್‌ಗಳಲ್ಲಿರುವ ಹಣ ಖಾಲಿಯಾದರೆ ಪದೇ ಪದೇ ರೀಚಾರ್ಜ್ ಮಾಡಬೇಕಾಗುತ್ತದೆ. ಆದರೆ ವಾರ್ಷಿಕ ಟೋಲ್‌ ಪಾಸ್‌ ತಗೆದುಕೊಂಡರೆ ಪದೇ ಪದೇ ರಿಚಾರ್ಜ್‌ ಮಾಡುವ ಅಗತ್ಯವಿಲ್ಲ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಪ್ರಯಾಣ ಅನುಮತಿಸುತ್ತದೆ.

ವಾರ್ಷಿಕ ಟೋಲ್‌ ಪಾಸ್ ಎಲ್ಲಿ ಬಳಸಬಹುದು?
ಇದು ರಾಷ್ಟ್ರೀಯ ಹೆದ್ದಾರಿ (NH) ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ (National Express Way)ನಲ್ಲಿನ ಟೋಲ್‌ ಪ್ಲಾಜಾಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ರಾಜ್ಯ ಸರ್ಕಾರದ ನಿರ್ಮಿಸಿದ ಎಕ್ಸ್‌ಪ್ರೆಸ್‌ವೇ ಅಥವಾ ಖಾಸಗಿಯಾಗಿ ನಿರ್ಮಿಸಿದ ರಸ್ತೆಯಲ್ಲಿ (ಉದಾಹರಣೆ ಬೆಂಗಳೂರಿನ ನೈಸ್‌ ರಸ್ತೆ) ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್‌ನೊಂದಿಗೆ ಉಚಿತ ಪ್ರವೇಶ ಪಡೆಯಲು ಸಾಧ್ಯವಿಲ್ಲ.

ಹೊಸ ದರ ಎಷ್ಟು? ಎಷ್ಟು ಟ್ರಿಪ್‌ಗಳನ್ನು ಮಾಡಬಹುದು?
ಖಾಸಗಿ ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳ ಮಾಲೀಕರು ಮೊದಲು ವಾರ್ಷಿಕ ಪಾಸ್‌ಗಾಗಿ ಏಪ್ರಿಲ್‌ 1 ರಿಂದ 3,075 ರೂ. ಪಾವತಿಸಬೇಕಾಗುತ್ತದೆ. ಈ ಹಿಂದೆ ಈ ಪಾಸ್‌ನ ದರ 3,000 ರೂ. ಇತ್ತು. ಈಗಿನ ದರದಲ್ಲಿ 75 ರೂ. ಹೆಚ್ಚಳ ಮಾಡಲಾಗಿದೆ. ಫಾಸ್ಟ್‌ಟ್ಯಾಗ್‌ ವಾರ್ಷಿಕ ಪಾಸ್‌ ಪಡೆದ 1 ವರ್ಷ ಅಥವಾ 200 ಟ್ರಿಪ್‌ಗಳನ್ನ ಅನ್ವಯಿಸುತ್ತದೆ. ಒಂದು ಖಾಸಗಿ ಬಳಕೆಯ ಕಾರು, ಜೀಪ್ ಅಥವಾ ವ್ಯಾನ್ ಹೊಂದಿರುವವರು ಈ ಪಾಸ್ ಪಡೆಯಬಹುದು.

ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ದತ್ತಾಂಶದ ಪ್ರಕಾರ, ಈ ಯೋಜನೆಯು ವಾಹನ ಸವಾರರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಪ್ರಸ್ತುತ ಭಾರತದಾದ್ಯಂತ 50 ಲಕ್ಷಕ್ಕೂ ಹೆಚ್ಚು ಬಳಕೆದಾರರು ಈ ವಾರ್ಷಿಕ ಪಾಸ್ ಬಳಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಖಾಸಗಿ ಕಾರುಗಳು ಮಾಡುವ ಒಟ್ಟು ಟೋಲ್ ವಹಿವಾಟಿನಲ್ಲಿ ಸುಮಾರು ಶೇ. 28 ರಷ್ಟು ವಹಿವಾಟು ಈ ವಾರ್ಷಿಕ ಪಾಸ್ ಮೂಲಕವೇ ನಡೆಯುತ್ತಿದೆ.

ದೇಶಾದ್ಯಂತ ಒಟ್ಟು 11.86 ಕೋಟಿ ಫಾಸ್ಟ್‌ಟ್ಯಾಗ್‌ಗಳನ್ನ ವಿತರಿಸಲಾಗಿದ್ದು, ಈ ಪೈಕಿ 5.9 ಕೋಟಿ ಟ್ಯಾಗ್‌ಗಳು ಸಕ್ರಿಯವಾಗಿವೆ. ಹೆದ್ದಾರಿಗಳಲ್ಲಿ ಸಂಗ್ರಹವಾಗುವ ಟೋಲ್ ಮೊತ್ತದಲ್ಲಿ ಶೇ. 98 ರಷ್ಟು ಡಿಜಿಟಲ್ ರೂಪದಲ್ಲೇ (ಫಾಸ್ಟ್‌ಟ್ಯಾಗ್ ಮೂಲಕ) ಸಂಗ್ರಹವಾಗುತ್ತಿದೆ. ಫಾಸ್‌ಟ್ಯಾಗ್‌ಗಳಲ್ಲಿ ಟೋಲ್‌ ಸಂದಾಯವಾಗುತ್ತಿದ್ದಂತೆ ಬಳಕೆದಾರರ ಮೊಬೈಲ್‌ ಸಂಖ್ಯೆಗೆ ಅಧಿಕೃತ ಸಂದೇಶ ಬರುತ್ತದೆ.

ಅರ್ಧದಷ್ಟು ಟೋಲ್‌ ವಿನಾಯ್ತಿ ಯಾವಾಗ ಸಿಗುತ್ತೆ?
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯಾವುದೇ ನಿರ್ವಹಣಾ ಕಾಮಗಾರಿಗಳು ನಡೆಯುತ್ತಿದ್ದು, ಅದರಿಂದ ನೀವು ವಿಳಂಬ ಅನುಭವಿಸಿದ್ರೆ, ಅಂತಹ ಸ್ಥಳಗಳಲ್ಲಿ ಟೋಲ್‌ ಶುಲ್ಕವನ್ನು ಅರ್ಧದಷ್ಟು ಮಾತ್ರ ಪಾವತಿಸಬೇಕಾಗುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಸ್ತೆಯನ್ನು 2 ಪಥಗಳಿಂದ 4, 6 ಅಥವಾ ಹೆಚ್ಚಿನ ಪಥಗಳಿಗೆ ಮೇಲ್ದರ್ಜೆಗೇರಿಸುತ್ತಿದ್ದರೆ, ನಿರ್ಮಾಣದ ಸಮಯದಲ್ಲಿ ಟೋಲ್ ಶುಲ್ಕವನ್ನ ಅರ್ಧಕ್ಕೆ ಇಳಿಸಲಾಗುತ್ತದೆ.

2 ಪಟ್ಟು ಪಾವತಿ ಮಾಡೋದು ಯಾವಾಗ?
ನಿಮ್ಮ ಕಾರು, ಜೀಪ್‌ ಅಥವಾ ವ್ಯಾನ್‌ಗಳಲ್ಲಿ FASTTag ಅನ್ನು ಸರಿಯಾಗಿ ಸ್ಥಾಪಿಸದೇ ನೇರ ಪಾವತಿ ಮಾಡಿದ್ರೆ 2 ಪಟ್ಟು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಜೊತೆಗೆ ಟ್ರಾಫಿಕ್‌ ಇರುವ ಸಂದರ್ಭಗಳಲ್ಲಿ ಟೋಲ್‌ ಪ್ಲಾಜಾಗಳಲ್ಲಿ ಕಾಯಬೇಕಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?
ವಾಹನ ಸವಾರರು ‘ರಾಜಮಾರ್ಗ ಯಾತ್ರಾ ಆ್ಯಪ್’ ಅಥವಾ ಎನ್‌ಹೆಚ್‌ಎಐ ಮತ್ತು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಪಾಸ್‌ಗೆ ಅರ್ಜಿ ಸಲ್ಲಿಸಬಹುದು ಅಥವಾ ನವೀಕರಿಸಬಹುದು.

ಹಂತಗಳು
* ಫಾಸ್ಟ್‌ಟ್ಯಾಗ್ ಲಿಂಕ್ ಆಗಿರುವ ಖಾತೆಗೆ ಲಾಗಿನ್ ಆಗಿ.
* ವಾಹನದ ನೋಂದಣಿ ವಿವರ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
* ಯುಪಿಐ, ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಿ.
* ಪಾವತಿ ಪೂರ್ಣಗೊಂಡ 24 ಗಂಟೆಗಳ ಒಳಗೆ ಪಾಸ್ ಸಕ್ರಿಯಗೊಳ್ಳುತ್ತದೆ.
* ಹೆದ್ದಾರಿಗಳಲ್ಲಿ ಸುಗಮ ಪ್ರಯಾಣ ಬಯಸುವವರು ಈ ವಾರ್ಷಿಕ ಪಾಸ್ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.

ವಾರ್ಷಿಕ ಪಾಸ್ ಕಡ್ಡಾಯವೇ?
ವಾರ್ಷಿಕ ಪಾಸ್ ಕಡ್ಡಾಯವಿಲ್ಲ. ಒಂದು ವೇಳೆ ವಾರ್ಷಿಕ ಪಾಸ್‌ ಪಡೆಯದವರು ಈಗ ಇರುವಂತೆ ಫಾಸ್ಟ್‌ಟ್ಯಾಗ್‌ ಬಳಸಿ ಟೋಲ್‌ ದಾಟಬಹುದು.

ಫಾಸ್ಟ್‌ಟ್ಯಾಗ್‌ಗೆ ಸಂಬಂಧಿಸಿದ ಯಾವುದೇ ದೂರುಗಳಿಗಾಗಿ, ಸಹಾಯವಾಣಿ ಸಂಖ್ಯೆ 1033 ಗೆ ಕರೆ ಮಾಡಬಹುದಾಗಿದೆ.

Share This Article