2021-22ರಲ್ಲಿ ಭಾರತದ ಜಿಡಿಪಿ ಶೇ.9ರಷ್ಟು ದಾಖಲು – ಎಡಿಬಿ

Public TV
2 Min Read

ಮನೀಲಾ: ಕೋವಿಡ್‌ 19ನಿಂದಾಗಿ ಭಾರತದ ಆಂತರಿಕ ಉತ್ಪಾದನೆ(ಜಿಡಿಪಿ) ಈ ಹಣಕಾಸು ವರ್ಷದಲ್ಲಿ ಕುಸಿತ ಕಂಡರೂ 2021-22ರ ಹಣಕಾಸು ವರ್ಷದಲ್ಲಿ ಶೇ.9ರಷ್ಟು ಜಿಡಿಪಿ ದಾಖಲಿಸಲಿದೆ ಎಂದು ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌(ಎಡಿಬಿ) ಅಂದಾಜಿಸಿದೆ.

ಭಾರತ ಬಹಳ ಕಠಿಣವಾದ ಲಾಕ್‌ಡೌನ್‌ ಜಾರಿ ಮಾಡಿದೆ. ಪರಿಣಾಮ ಹಲವು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿರುವ ಕಾರಣ ಈ ಬಾರಿಯ ಜಿಡಿಪಿಯ ಮೇಲೆ ಹೊಡೆತ ಬಿದ್ದಿದೆ. ಆದರೆ ಕೊರೊನಾ ಲಾಕ್‌ಡೌನ್‌ ತೆರೆದ ಬಳಿಕ ವ್ಯವಹಾರಗಳು ಆರಂಭವಾಗಿದೆ ಎಂದು ಹೇಳಿದೆ.

ಕೊರೊನಾದಿಂದ ಹೊಡೆತ ತಿಂದಿರುವ ಉದ್ಯಮಗಳ ಚೇತರಿಕೆ ಸರ್ಕಾರ ಕೆಲ ಆರ್ಥಿಕ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. ಉದ್ಯೋಗ ಸೃಷ್ಟಿಗೆ ಸರ್ಕಾರ ಮುಂದಾಗುತ್ತಿದೆ. ಈ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ನಿಧಾನವಾಗಿ ಪ್ರಗತಿ ಕಾಣಬಹುದು ಎಂದು ತಿಳಿಸಿದೆ.

ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಹೂಡಿಕೆಗಳು ಆಗುತ್ತಿದೆ. ಉತ್ಪದನಾ ಮತ್ತು ಮೂಲಸೌಕರ್ಯ ಕ್ಷೇತ್ರದ ಹಬ್‌ ಆಗಲು ಸರ್ಕಾರ ಸಿದ್ಧತೆ ನಡೆಸಿದೆ. ಇದರಿಂದಾಗಿ ಉದ್ಯೋಗ ಸೃಷ್ಟಿ ಆಗಲಿದೆ ಎಂದು ಹೇಳಿದೆ.

ಜಿಡಿಪಿ ಕುಸಿತ:
ಕೋವಿಡ್‌ 19 ನಿಯಂತ್ರಣ ಸಂಬಂಧ ಘೋಷಿಸಲಾದ ಲಾಕ್‌ಡೌನ್‌ನಿಂದಾಗಿ ಮೊದಲ ಏಪ್ರಿಲ್ ನಿಂದ ಜೂನ್ ವರೆಗಿನ ಮೊದಲ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ ದರ (ಜಿಡಿಪಿ) ಬೆಳವಣಿಗೆ ದರ ಶೇ. 23.9 ಕ್ಕೆ ಕುಸಿದಿದೆ. ಮುಂದುವರಿದ ರಾಷ್ಟ್ರಗಳ ಪೈಕಿ ಅಮೆರಿಕದ ಜಿಡಿಪಿ ಶೇ.12.4ರಷ್ಟು, ಇಟಲಿಯ ಜಿಡಿಪಿ ಶೇ.9.5ರಷ್ಟು ಕುಸಿತ ಕಂಡಿದೆ.

 

2019-20ರ ಮೊದಲ ತ್ರೈಮಾಸಿಕದಲ್ಲಿ ಶೇ 5.2ರಷ್ಟು ಬೆಳವಣಿಗೆ ದಾಖಲಿಸಲಾಗಿತ್ತು. 2020-21ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ 26.90 ಲಕ್ಷ ಕೋಟಿ ರೂ. ಆಗಿದೆ. 2019-20ರ ಮೊದಲ ತ್ರೈಮಾಸಿಕದಲ್ಲಿನ 35.35 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಶೇ. 23.9ರಷ್ಟು ಕುಸಿತವಾಗಿದೆ ಎಂದು ತಿಳಿಸಿದೆ.

ಲಾಕ್‍ಡೌನ್ ಕಾರಣದಿಂದ ಉತ್ಪಾದನೆ ಸಂಪೂರ್ಣ ನಿಂತು ಹೋಗಿ, ಮೊದಲ ತ್ರೈಮಾಸಿಕದಲ್ಲಿ ಕೇಂದ್ರದ ಬೊಕ್ಕಸಕ್ಕೆ ಬರೋಬ್ಬರಿ 13 ಲಕ್ಷ ಕೋಟಿ ನಷ್ಟ ಆಗಿದೆ. ಉತ್ಪಾದನೆ ಮತ್ತು ನಿರ್ಮಾಣವಲಯದಲ್ಲಿ ಅನುಕ್ರಮವಾಗಿ ಶೇ. 39.3 ಮತ್ತು ಶೇ. 50.3 ರಷ್ಟು ಕುಸಿದಿದೆ. ಉಳಿದ ಕ್ಷೇತ್ರಗಳಿಗೆ ಹಿನ್ನಡೆಯಾಗಿದ್ದರೆ ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆಯಾಗಿದೆ. ಈ ಅವಧಿಯಲ್ಲಿ ಶೇ.3.4ರಷ್ಟು ಪ್ರಗತಿಯಾಗಿದ್ದರೆ 2019-20ರ ಮೊದಲ ತ್ರೈಮಾಸಿಕದಲ್ಲಿ ಶೇ.3 ರಷ್ಟು ಬೆಳವಣಿಗೆ ಸಾಧಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *