2021ರ ಚುನಾವಣೆಯಲ್ಲಿ ಸಿಂಗಂ ಅಣ್ಣಾಮಲೈ ಸ್ಪರ್ಧೆ

Public TV
2 Min Read

– ಕನ್ನಡಿಗರನ್ನು ಮಿಸ್ ಮಾಡ್ಕೊಳ್ತಿದ್ದೇನೆಂದ ಸಿಂಗಂ

ಚೆನ್ನೈ: ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಸ್ವತಃ ಮಾಜಿ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿಕೊಂಡಿದ್ದಾರೆ.

ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ, ತಮ್ಮ ಖಡಕ್ ನಿರ್ಧಾರಗಳು ಮತ್ತು ಅಡಳಿತದಿಂದ ‘ಸಿಂಗಂ’ ಎಂಬ ಹೆಸರು ಪಡೆದುಕೊಂಡಿದ್ದರು. ನಂತರ 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ತಮ್ಮ ಸ್ವಂತ ಊರು ತಮಿಳುನಾಡಿಗೆ ಹೋಗಿದ್ದರು. ಈಗ ಸ್ವಂತ ಊರಿನಲ್ಲೇ ಇದ್ದು, ಅಲ್ಲೇ ಕೆಲಸ ಮಾಡಿ 2021ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ.

ಈ ವಿಚಾರವಾಗಿ ತಮ್ಮ ಫೇಸ್‍ಬುಕ್‍ನಲ್ಲಿ ಲೈವ್ ಬಂದು ಮಾತನಾಡಿರುವ ಅಣ್ಣಾಮಲೈ, ನಾನು 2021ರಲ್ಲಿ ವಿಧಾನ ಸಭೆಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ದೇಶದಲ್ಲಿ ಇರುವ ಮದ್ಯ ಮಾರಾಟ, ಸ್ಪರ್ಧಾತ್ಮಕ ಪರೀಕ್ಷೆಗಳು, ಅವರಿಗೆ ಅವರ ಊರಿನ ಮೇಲೆ ಇರುವ ಪ್ರೀತಿ ಮತ್ತು ಕಾಳಜಿ ಹಾಗೂ ಅಧಿಕಾರಿಗಳು ಮತ್ತು ಸರ್ಕಾರ ಹೀಗೆ ಹಲವಾರು ವಿಚಾರಗಳ ಬಗ್ಗೆ ಹಂಚಿಕೊಂಡಿದ್ದಾರೆ.

ಲೈವ್‍ನಲ್ಲಿ ಕರ್ನಾಟಕದ ಬಗ್ಗೆ ಮಾತನಾಡಿರುವ ಅಣ್ಣಾಮಲೈ, ನಾನು 10 ವರ್ಷ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದೇನೆ. ಈಗ ಕರ್ನಾಟಕವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅಲ್ಲಿನ ಜನರು ನನಗೆ ಬಹಳ ಪ್ರೀತಿ ಕೊಟ್ಟಿದ್ದಾರೆ. ನಾನು ಅದಕ್ಕೆ ಸದಾ ಋಣಿಯಾಗಿ ಇರುತ್ತೇನೆ. ಸದ್ಯ ನಮ್ಮ ಊರಿನಲ್ಲಿ ಕೆಲಸ ಮಾಡಿ ಇಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದೇನೆ. ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮದ್ಯ ಮಾರಾಟದ ಬಗ್ಗೆ ಮಾತನಾಡಿರುವ ಅವರು, ಕರ್ನಾಟಕದಲ್ಲಿ ಮದ್ಯದಿಂದ ಪ್ರತಿ ವರ್ಷ 21 ಸಾವಿರ ಕೋಟಿ ಸರ್ಕಾರಕ್ಕೆ ಆದಾಯವಿದೆ. ಸರ್ಕಾರಗಳು ಮದ್ಯದ ಆದಾಯವನ್ನೇ ನೆಚ್ಚಿಕೊಂಡು ಬಜೆಟ್ ಮಂಡನೆ ಮಾಡುತ್ತವೆ. ಅದಕ್ಕಾಗಿಯೇ ಜಿಲ್ಲಾಧಿಕಾರಿಗಳಿಗೆ ಮದ್ಯ ಮಾರಾಟವನ್ನು ಹೆಚ್ಚಿಸುವಂತೆ ಒತ್ತಡ ಹಾಕುತ್ತಾರೆ. ಸರ್ಕಾರ ಈ ಹಳೆ ಪದ್ಧತಿಯನ್ನು ಬಿಟ್ಟು ಆದಾಯದ ಮೂಲವನ್ನು ಬೇರೆ ಹುಡುಕಿಕೊಳ್ಳಬೇಕು. ಮದ್ಯದಿಂದ ಲಾಭಕ್ಕಿಂತ ಜನರಿಗೆ ನಷ್ಟವೇ ಹೆಚ್ಚು ಎಂದು ತಿಳಿಸಿದ್ದಾರೆ.

ಜೊತೆಗೆ ಪರೀಕ್ಷೆ ಬಗ್ಗೆ ಮಾತನಾಡಿರುವ ಅಣ್ಣಾಮಲೈ, ಪರೀಕ್ಷೆಯೇ ಜೀವನವಲ್ಲ. ಎಲ್ಲರೂ ಐಪಿಎಸ್, ಐಎಎಸ್ ಆಗಬೇಕು ಎಂದರೆ ಬೇರೆ ಕ್ಷೇತ್ರದಲ್ಲಿ ಯಾರೂ ಕೆಲಸ ಮಾಡುತ್ತಾರೆ. ಯಾವುದೇ ಪರೀಕ್ಷೆ ಬರೆದರೂ ಧೈರ್ಯದ ಜೊತೆ ತಾಳ್ಮೆಯೂ ಇರಬೇಕು. ಅನುತ್ತೀರ್ಣರಾದರೆ ಭಯಪಡಬಾರದು. ಬೇರೆ ಬೇರೆ ಉದ್ಯಮಗಳಲ್ಲಿ ಸಾಧನೆ ಮಾಡುವ ವಿಶಾಲ ಯೋಚನೆ ಮಾಡಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಅವಕಾಶವಿದೆ ಬಳಸಿಕೊಳ್ಳಬೇಕು ಎಂದು ಯುವ ಪೀಳಿಗೆಗೆ ಕಿವಿ ಮಾತು ಹೇಳಿದರು.

ಪೊಲೀಸ್ ಇಲಾಖೆಯ ಮೇಲೆ ಯಾವಾಗಲೂ ಜನಪ್ರತಿನಿಧಿಗಳು ಒತ್ತಡ ಹಾಕುತ್ತಾರೆ. ಆದರೆ ಅದು ತಪ್ಪು ಎಂದು ನಾನು ಹೇಳುವುದಿಲ್ಲ. ಆದರೆ ಅವರು ಹಾಕುವ ಒತ್ತಡ ಜನಪರವಾಗಿ ಇರಬೇಕು. ಈಗಿನ ಕಾಲದಲ್ಲಿ ಹಣ ಇದ್ದ ವ್ಯಕ್ತಿಯೇ ಚುನಾವಣೆಯಲ್ಲಿ ಗೆಲ್ಲುತ್ತಾನೆ. ಇದು ಬದಲಾಗಬೇಕು. ಯುವಕರ ರಾಜಕೀಯಕ್ಕೆ ಬರಬೇಕು. ರಾಜಕೀಯದಲ್ಲಿ ಬದಲವಾಣೆಯನ್ನು ತರಬೇಕು. ಅಧಿಕಾರಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ಅಣ್ಣಾಮಲೈ ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕ ಸಿಂಗಂ ಎಂದೇ ಖ್ಯಾತಿಯಾಗಿದ್ದ ಅಣ್ಣಾಮಲೈ ಅವರು ತಮ್ಮ 9 ವರ್ಷದ ಐಪಿಎಸ್ ಹುದ್ದೆಗೆ ಕಳೆದ ವರ್ಷ ಜೂನ್ ತಿಂಗಳಿನಲ್ಲಿ ರಾಜೀನಾಮೆ ನೀಡಿದ್ದರು. ತಮಿಳುನಾಡಿನ ಕೊಯಮತ್ತೂರಿನವಾರದ ಅವರು, 2011ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದರು. ನಂತರ 2013ರಲ್ಲಿ ಕಾರ್ಕಳ ಎಎಸ್‍ಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಅವರು, ಬಳಿಕ 2015ರಲ್ಲಿ ಉಡುಪಿ ಜಿಲ್ಲಾ ಎಸ್‍ಪಿ, ಚಿಕ್ಕಮಗಳೂರು ಎಸ್‍ಪಿಯಾಗಿ ದಕ್ಷ ಸೇವೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *