ಎಸ್.ಎಲ್ ಭೈರಪ್ಪರಿಂದ ಈ ಬಾರಿಯ ದಸರಾ ಉದ್ಘಾಟನೆ

Public TV
2 Min Read

ಮೈಸೂರು: ಈ ಬಾರಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ಕನ್ನಡದ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ.

ಇಂದು ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ದಸರಾ ಉದ್ಘಾಟಕರಾಗಿ ಎಸ್.ಎಲ್ ಭೈರಪ್ಪ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಒಂದೆಡೆ ಅತಿವೃಷ್ಟಿ ಇನ್ನೊಂದೆಡೆ ಅನಾವೃಷ್ಟಿಯನ್ನು ರಾಜ್ಯ ಎದುರಿಸುತ್ತಿದೆ. ಹೀಗಾಗಿ ಈ ಬಾರಿ ಅದ್ಧೂರಿಯಾಗಿ ನಾಡಹಬ್ಬವನ್ನು ಆಚರಣೆ ಮಾಡುವುದಿಲ್ಲ. ಆದರೆ ಸಂಪ್ರದಾಯದಂತೆ ದಸರಾವನ್ನು ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ರಾಜರ್ಷಿ ಜಯಚಾಮರಾಜ ಒಡೆಯರ್ ಜನ್ಮಶತಮಾನೋತ್ಸವವನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ದಸರಾ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ರೂಪಿಸಿ, ವ್ಯವಸ್ಥಿತವಾಗಿ ಆಯೋಜಿಸಲು ಪೂರ್ವ ಸಿದ್ಧತೆ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಿದರು.

ದಸರಾ ಆಯೋಜನೆಗೆ ಈ ವರ್ಷ 20.50 ಕೋಟಿ ರೂ.ಗಳ ಅನುದಾನ ನೀಡಲಾಗುವುದು. ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊರರಾಜ್ಯಗಳ ಕಲಾವಿದರನ್ನು ಆಹ್ವಾನಿಸದೇ, ಕೇವಲ ರಾಜ್ಯದ ಪ್ರತಿಭಾವಂತ ಕಲಾವಿದರನ್ನು ಆಹ್ವಾನಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಸಂಸದರಾದ ಪ್ರತಾಪ್ ಸಿಂಹ, ಶ್ರೀನಿವಾಸ ಪ್ರಸಾದ್, ಶಾಸಕ ತನ್ವೀರ್ ಸೇಠ್, ರಾಮದಾಸ್, ಎನ್.ಮಹೇಶ್, ಯತೀಂದ್ರ. ಎಲ್.ನಾಗೇಂದ್ರ, ವಿಧಾನಪರಿಷತ್ ಸದಸ್ಯ ಎಸ್.ನಾಗರಾಜ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಮುಖ್ಯಮಂತ್ರಿ ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿ ಕಾರ್ಯದರ್ಶಿ ಶಿವಯೋಗಿ. ಸಿ. ಕಳಸದ್ ಹಾಗೂ ಮೈಸೂರು ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಎಸ್.ಎಲ್ ಭೈರಪ್ಪ ಅವರು, ನನ್ನನ್ನ ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿದ್ದು ಸಂತೋಷವಾಗಿದೆ. ಸರ್ಕಾರಕ್ಕೆ ನನ್ನ ಧನ್ಯವಾದ ತಿಳಿಸುತ್ತೇನೆ. ನಾನು ಎರಡು ಮೂರು ಬಾರಿ ಹತ್ತಿರದಿಂದ ದಸರಾ ನೋಡಿದ್ದೇನೆ ಅಷ್ಟೇ. 1949ರಿಂದಲೂ ದಸರಾ ನೋಡುತ್ತಾ ಬಂದಿದ್ದೇನೆ. ಅದರ ಬಗ್ಗೆ ಮಾತನಾಡುವಷ್ಟು ನೆನಪುಗಳು ಇಲ್ಲ. ಆದರೆ ದಸರಾ ಉದ್ಘಾಟಕರನ್ನಾಗಿ ನನ್ನನ್ನ ಆಯ್ಕೆ ಮಾಡಿರುವುದು ಸಂತೋಷ ತಂದಿದೆ ಎಂದು ಖುಷಿಯನ್ನು ಹಂಚಿಕೊಂಡರು.

ಕಳೆದ ವರ್ಷ ಕೊಡಗಿನಲ್ಲಿ ಮಳೆ ಬಂದು ಪ್ರವಾಹ ಉಂಟಾಗಿದ್ದಾಗ ನೀರು ಕೇಳುವ ತಮಿಳುನಾಡಿನಿಂದ ಕೊಡಗಿಗೆ ಹಣ ಕೇಳಿ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಅವರು ನನ್ನ ಪತ್ರಕ್ಕೆ ಉತ್ತರವನ್ನು ಬರೆಯಲಿಲ್ಲ ಅದನ್ನ ಗಂಭೀರವಾಗಿಯೂ ಪರಿಗಣಿಸಲಿಲ್ಲ. ಆದರೂ ಕೂಡ ನಾನು ಈ ಬಾರಿಯೂ ಅದೇ ಒತ್ತಾಯ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಹೆಚ್ಚು ನೆರೆ ಬಂದಿದೆ. ನಮ್ಮ ಬಳಿ ಇಲ್ಲದಿದ್ದಾಗಲೂ ನೀರು ಕೇಳುವ ತಮಿಳುನಾಡಿನ ನಿಲುವು ಏನು ಅಂತ ಕೇಳಿ, ಅವರು ಎಷ್ಟು ಹಣ ನಮ್ಮ ರಾಜ್ಯಕ್ಕೆ ಕೊಡ್ತಾರೆ ಕೇಳಿ. ಈ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿದರೆ ನಾಳೆ ಅದು ಉಪಯೋಗ ಆಗಲಿದೆ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

https://www.facebook.com/CMofKarnataka/posts/2334764233238694

Share This Article
Leave a Comment

Leave a Reply

Your email address will not be published. Required fields are marked *