ಮಡಿಕೇರಿ: ವರ್ಷದ ಕೊನೆಯ ಸೂರ್ಯಾಸ್ತದ ಹೊನ್ನ ಬೆಳಕಿನ ಕ್ಷಣಗಳು

Public TV
1 Min Read

ಮಡಿಕೇರಿ: 2017ರ ಕೊನೆಯ ದಿನವಾದ ಇಂದು ಮಂಜಿನ ನಗರಿ ಮಡಿಕೇರಿಯ ರಾಜಾಸೀಟ್ ನಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ವರ್ಷದ ಕೊನೆಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಪ್ರವಾಸಿಗರು ಆಗಮಿಸಿದ್ದರು.

ಮುಗಿಲಿನಲ್ಲಿ ಮೋಡದ ನಡುವೆ ಬಣ್ಣದ ಚಿತ್ತಾರ ಬಿಡಿಸಿದ್ದ ನೇಸರನನ್ನು ಕಂಡು ಪುಳಕಿತರಾದ ಪ್ರವಾಸಿಗರು 2017ರ ರವಿಮಾಮನಿಗೆ ಶುಭ ವಿದಾಯ ಹೇಳಿ ನಾಳೆಯ ಹೊಸ ಸೂರ್ಯನ ಬರುವಿಕೆಗಾಗಿ ಸಂಭ್ರಮಿಸಿದರು. ಸಂಜೆ ವೇಳೆಗೆ ತಣ್ಣಗಾದ ಸೂರ್ಯ ಕೆಂಪು ಕಡಲಲ್ಲಿ ತೇಲಿದಂತೆ ಕಂಡು ಬಂದ. ಸೂರ್ಯಾಸ್ತದ ಕೊನೇ ಕ್ಷಣ ಹತ್ತಿರವಾಗುತ್ತಿದ್ದಂತೆ ನೆರೆದಿದ್ದ ಜನರಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಕೈ ಬೀಸಿ ಹಾಯ್ ಬಾಯ್ ಎನ್ನುತ್ತಾ ಹಲವು ಸಿಹಿ ಕಹಿಗಳ ಮಿಶ್ರಣ ಹೊಂದಿದ್ದ 2017 ಕ್ಕೆ ಜನರು ಖುಷಿ ಖುಷಿಯಿಂದಲೇ ಬೀಳ್ಕೊಟ್ಟರು.

ಎಂದಿನಂತೆ ಜಗತ್ತು ಬೆಳಗುವ ತನ್ನ ಕಾಯಕ ಮುಗಿಸಿ ರಂಗು ರಂಗಾಗಿ ಕೊನೆಯ ದರ್ಶನ ನೀಡಿ ಮೋಡದ ಮರೆಯಲ್ಲಿ ಮರೆಯಾದ ರವಿಮಾಮನನ್ನು ಕಂಡು ಜನರು ಪುಳಕಿತರಾದರು. ವರ್ಷದ ಕೊನೆಯ ಸೂರ್ಯನನ್ನು ಆತ್ಮೀಯವಾಗಿ ಬೀಳ್ಕೊಡಲೆಂದೇ ದೇಶದ ವಿವಿದೆಡೆಗಳಿಂದ ಇಲ್ಲಿಗೆ ಆಗಮಿಸಿದ್ದರು. ತಮ್ಮ ಕ್ಯಾಮೆರಾಗಳಲ್ಲಿ ವರ್ಷದ ಕೊನೆ ಸೂರ್ಯಾಸ್ತವನ್ನು ಸೆರೆಹಿಡಿದು ಕೊಂಡು ಕೊನೆಯ ಕ್ಷಣಗಳನ್ನು ಖುಷಿ ಖುಷಿಯಿಂದ ಹಂಚಿಕೊಂಡರು. 2017ರ ನೇಸರನಿಗೆ ವಿದಾಯ ಹೇಳಿ 2018ರ ನೇಸರನ ನಿರೀಕ್ಷೆಯಿಂದ ಹೊರನಡೆದರು.

 

Share This Article
Leave a Comment

Leave a Reply

Your email address will not be published. Required fields are marked *