ರಾಜಧಾನಿಯಲ್ಲಿ ಬಯಲು ಶೌಚಕ್ಕೂ ಬಾಡಿಗೆ -ಮಾವಿನ ತೋಪಿನಲ್ಲಿ ಶೌಚಕ್ಕೆ ತಿಂಗಳಿಗೆ 200 ರೂ.

Public TV
2 Min Read

ಬೆಂಗಳೂರು: ಬಯಲು ಶೌಚಾಲಯದಿಂದ ಮುಕ್ತಿ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದರೆ, ಅದಕ್ಕೆ ಬ್ರೇಕ್ ಮಾತ್ರ ಬಿದ್ದಿಲ್ಲ. ಗ್ರಾಮ ಪ್ರದೇಶಗಳನ್ನು ಬಿಡಿ ನಗರಗಳಲ್ಲೂ ಇನ್ನೂ ಬಯಲು ಶೌಚಾಲಯವನ್ನೇ ಜನ ಅವಲಂಬಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಸುಮಾರು 200ಕ್ಕೂ ಹೆಚ್ಚಿನ ಕುಟುಂಬಗಳಿಂದ ಬಯಲು ಶೌಚಾಲಯಕ್ಕೆ ಎಂದು 200 ರೂ. ತಿಂಗಳಿಗೆ ಬಾಡಿಗೆ ನೀಡುತ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಬಯಲು ಶೌಚಾಲಯಕ್ಕೆ ತಿಂಗಳು ಇನ್ನೂರರಂತೆ ಆ ಜಮೀನಿನ ಮಾಲೀಕನಿಗೆ ನೀಡಬೇಕು. ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಕೆಆರ್ ಪುರಂನ ಹೊರಮಾವು ಬಳಿಯ ಬಿಬಿಎಂಪಿಯ ವಾರ್ಡ್ ನಂಬರ್ 26ರ ಚಿಕ್ಕನಂಜುಂಡಪ್ಪ ಲೇಔಟ್ ಬಳಿ ರೇವಣ್ಣ ಎಂಬವರ ಜಾಗದಲ್ಲಿ ಹಲವು ವರ್ಷಗಳಿಂದ ವಾಸವಿವೆ. ದೂರದ ಕರ್ನಾಟಕ ಅಂದರೆ ಗಡಿಭಾಗದ ಈ ಜನ ಕೆಲಸ ಅರಸಿ ಬಂದು ಇಲ್ಲಿ ಜೋಪಡಿಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜಾಗದ ಮಾಲೀಕ ರೇವಣ್ಣ ಇವರಿಗೆ ತಮ್ಮ ಸ್ವಂತ ಜಾಗದಲ್ಲಿ ಜೋಪಡಿ ಹಾಕಲು ಬಿಟ್ಟಿದ್ದಾರೆ. ಆದರೆ ಶೌಚಾಲಯಕ್ಕೆ ಪಕ್ಕದ ಕೃಷ್ಣ ಮೂರ್ತಿ ಎಂಬವರ ಮಾವಿನ ತೋಪನ್ನು ಬಳಸಲು ಹೇಳಿದ್ದಾರೆ. ಇದನ್ನು ಲಾಭ ಮಾಡಿಕೊಳ್ಳಲು ಮಾವಿನ ತೋಪಿನ ಮಾಲೀಕ ಸುಮಾರು 1 ವರ್ಷದಿಂದ ಒಂದು ಕುಟುಂಬವೊಂದ್ದಕ್ಕೆ ತಿಂಗಳಿಗೆ 200 ರೂ. ವಸೂಲಿ ಮಾಡುತ್ತಿದ್ದಾನೆ.

ಈ ಬಗ್ಗೆ ಜೋಪಡಿ ನಿವಾಸಿಗಳನ್ನು ಪ್ರಶ್ನಿಸಿದಾಗ ಅವರು ಹೇಳಿದ್ದು ಹೀಗೆ;
ಪಬ್ಲಿಕ್ ಟಿವಿ: ಜಮೀನಿನ ಮಾಲೀಕರೇ ದುಡ್ಡು ಕೊಡಿ ಎಂದು ಬಂದು ಕೇಳಿದ್ರಾ?
ಜೋಪಡಿ ವಾಸಿ: ಇಲ್ಲ ಅವರೇ ಬಂದು ಮಾತಾಡಿದ್ದು, ಒಂದು ಜೋಪಡಿಗೆ 200 ರೂ. ಕೊಡಿ, ಇಲ್ಲ ಖಾಲಿ ಮಾಡ್ಕೊಂಡ್ ಹೋಗಿ. ಖಾಲಿ ಮಾಡ್ಕೊಂಡ್ ಹೋದ್ರೆ ಎಲ್ಲಿ ಸರ್ ಹೋಗೋದು. ಅಷ್ಟೊಂದು ಬಾಡಿಗೆ ಕೊಟ್ಟು. ಅದಕ್ಕೆ 200 ರೂ. ಕೊಟ್ಟು ಸುಮ್ಮನಾಗ್ತೀವಿ.
ಪಬ್ಲಿಕ್ ಟಿವಿ: ಹೆಣ್ಣು ಮಕ್ಕಳು ಇರ್ತಾರೆ ಹೇಂಗ್ ಬಯಲು ಶೌಚ ಯೂಸ್ ಮಾಡ್ತೀರಿ.
ಜೋಪಡಿ ವಾಸಿ: ತೋಪಲ್ಲಿ ಒಂದು ಕಡೆ ಅವರು ಹೋಗ್ತಾರೆ, ಮತ್ತೊಂದು ಕಡೆ ನಾವ್ ಹೋಗ್ತಿವಿ. ಏನ್ ಮಾಡೋದು ಸರ್.
ಪಬ್ಲಿಕ್ ಟಿವಿ: 200 ರೂ. ತಗೊಂಡು ಕ್ಲೀನ್ ಮಾಡ್ತಾರಂತ. ಮಣ್ಣು ಏನಾದ್ರೂ ಹಾಕ್ತಾರ.
ಜೋಪಡಿ ವಾಸಿ: ಏನೂ ಮಾಡಲ್ಲ ಸರ್. ಸುಮ್ನೆ ಬಾಡಿಗೆ ಅಂತ 200 ರೂ. ತಗೋತಾರೆ.
ಪಬ್ಲಿಕ್ ಟಿವಿ: ಏನೇನ್ ಕೆಲಸ ಮಾಡ್ತೀರ?
ಜೋಪಡಿ ವಾಸಿ: ಗಾರೆ ಕೆಲಸ, ಸೆಂಟ್ರಿಂಗ್ ಕೆಲಸ, ಪ್ಲಂಬರ್, ಡ್ರೈವರ್ ಕೆಲಸ ಮಾಡ್ತೀವಿ.
ಪಬ್ಲಿಕ್ ಟಿವಿ: ಯಾವ ಊರಿನವರು?
ಜೋಪಡಿ ವಾಸಿ: ಮಂತ್ರಾಲಯ, ಬಳ್ಳಾರಿ ಕಡೆಯವರಿದ್ದೀವಿ.

ಜಾಗದ ಮಾಲೀಕ ಕೃಷ್ಣ ಮೂರ್ತಿ, ನೀವು ಶೌಚಕ್ಕೆ ನಮ್ಮ ತೋಟವನ್ನು ಬಳಸುತ್ತಿದ್ದೀರಿ ಜೆಸಿಬಿ ಮೂಲಕ ಮಣ್ಣು ಬದಲಿಸಿ ಸ್ವಚ್ಛಗೊಳಿಸಬೇಕಾಗುತ್ತೆ ಎಂದು 200 ರೂ. ಫಿಕ್ಸ್ ಮಾಡಿದ್ದಾರೆ. ಇನ್ನೇನ್ ಮಾತನಾಡುವುದಕ್ಕೆ ಆಗುತ್ತೆ, ಹೇಗೋ ಉಳಿಯಲು ಜಾಗ ಇದ್ಯಲ್ಲ ಎಂದು ಅಲ್ಲಿನ ವಾಸಿಗಳು ದುಡ್ಡು ನೀಡುತ್ತಾ ಬಂದಿದ್ದಾರೆ. ಮಹಿಳೆಯರು ಒಂದು ಭಾಗಕ್ಕೆ, ಪುರುಷರು ಮತ್ತೊಂದು ಭಾಗದಲ್ಲಿ ಶೌಚಕ್ಕೆ ಹೋಗುತ್ತೇವೆ. ಏನೂ ತೊಂದರೆ ಇಲ್ಲ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ. ಆದರೆ ಬಯಲು ಶೌಚಾಲಯ ತಪ್ಪು ಎಂಬುದು ಅವರಿಗೆ ಗೊತ್ತಾಗುತ್ತಿಲ್ಲ.

Share This Article
Leave a Comment

Leave a Reply

Your email address will not be published. Required fields are marked *