ರಷ್ಯಾ ಸೇನೆಯಲ್ಲಿ ಸಿಲುಕಿದ್ದಾರೆ 20 ಭಾರತೀಯರು – ವಾಪಸ್‌ ಕರೆತರಲು ಹರಸಾಹಸ

By
2 Min Read

ಮಾಸ್ಕೋ: ರಷ್ಯಾ-ಉಕ್ರೇನ್‌ ಯುದ್ಧಭೂಮಿಯಲ್ಲಿ (Russia-Ukraine Warzone) ಒಟ್ಟು 20 ಭಾರತೀಯರು ರಷ್ಯಾದಲ್ಲಿ ಸಿಲುಕಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿದೆ.

ಯುದ್ಧಭೂಮಿಯಲ್ಲಿ ಸಿಲುಕಿರುವ 20 ಭಾರತೀಯರು, ರಷ್ಯಾದಲ್ಲಿರುವ ಭಾರತೀಯ ಎಂಇಎ ಅಧಿಕಾರಿಗಳನ್ನ ಸಂಪರ್ಕಿಸಿದ್ದಾರೆ. ಅವರನ್ನು ಮರಳಿ ದೇಶಕ್ಕೆ ಕರೆತರಲು ರಷ್ಯಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದ ಡೇಂಜರ್‌ ಸೇನೆಯಲ್ಲಿದ್ದಾರೆ ಕಲಬುರಗಿಯ ಮೂವರು – ನಮ್ಮನ್ನು ರಕ್ಷಿಸಿ ಎಂದ ಯುವಕರು

ಇದೇ ಫೆಬ್ರವರಿ 23 ರಂದು ಯುದ್ಧ ಪೀಡಿತ ರಷ್ಯಾ-ಉಕ್ರೇನ್‌ ಯುದ್ಧಭೂಮಿಯಲ್ಲಿ ಕೆಲವು ಭಾರತೀಯರು ಸಿಲುಕಿದ್ದಾರೆ ಎಂದು ಕೇಂದ್ರವು ಹೇಳಿತ್ತು. ಅವರ ಬಿಡುಗಡೆಗೆ ಅನುಕೂಲವಾಗುವಂತೆ ಸರ್ಕಾರವು ತನ್ನ ರಷ್ಯಾದ ಪ್ರತಿರೂಪದೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಎಂಇಎ ಹೇಳಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ನವಾಜ್‌ ಷರೀಫ್‌ ಪುತ್ರಿ ಆಯ್ಕೆ

ಹತ್ತಾರು ಭಾರತೀಯರಿಗೆ ಮಿಲಿಟರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿ ರಷ್ಯಾ ಸೇನೆಗೆ ಸೇರಿಸಿದ್ದ ಪ್ರಕರಣ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು. ಜಮ್ಮು ಮತ್ತು ಕಾಶ್ಮೀರದ ಯುವಕ, ತೆಲಂಗಾಣದ 22 ವರ್ಷದ ಯುವಕ ಮತ್ತು ಕಲಬುರಗಿಯ ಮೂವರು ವ್ಯಾಗ್ನರ್‌ ಪಡೆಯಲ್ಲಿ ಕೆಲಸ ಮಾಡುತ್ತಿದ್ದು ರಷ್ಯಾ ಗಡಿಯಲ್ಲಿ ಸಿಲುಕಿದ್ದಾರೆ. ನಮ್ಮನ್ನು ನಕಲಿ ಸೇನಾ ಉದ್ಯೋಗ ದಂಧೆಯಿಂದ ತಕ್ಷಣವೇ ರಕ್ಷಿಸಬೇಕು ಎಂದು ಮೊರೆಯಿಟ್ಟಿದ್ದರು. ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮೊಹಮ್ಮದ್ ಸುಫಿಯಾನ್ ತನ್ನ ಕುಟುಂಬಕ್ಕೆ ಕಳುಹಿಸಿದ ವಿಡಿಯೋದಲ್ಲಿ ದಯವಿಟ್ಟು ನಮ್ಮನ್ನು ರಕ್ಷಿಸಿ ಎಂದು ಮನವಿ ಮಾಡಿದ್ದರು.

ನಾವು ಹೈಟೆಕ್ ವಂಚನೆಗೆ ಬಲಿಯಾಗಿದ್ದೇವೆ. ನಮ್ಮ ಇಚ್ಛೆಗೆ ವಿರುದ್ಧವಾಗಿ ಉಕ್ರೇನ್‌ನೊಂದಿಗೆ ರಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಹೋರಾಡಲು ನಮ್ಮನ್ನು ಒತ್ತಾಯಿಸಲಾಗುತ್ತಿದೆ. ಸೇನೆಯ ಭದ್ರತಾ ಸಹಾಯಕ ಕೆಲಸದ ಭರವಸೆಯೊಂದಿಗೆ ನಾವು ಕಳೆದ ವರ್ಷದ ಡಿಸೆಂಬರ್‌ನಲ್ಲಿ ರಷ್ಯಾಕ್ಕೆ ಬಂದಿದ್ದೇವೆ. ನಂತರ ನಾವು ವಂಚನೆಗೆ ಒಳಗಾದ ವಿಚಾರ ತಿಳಿಯಿತು ಎಂದು ಹೇಳಿಕೊಂಡಿದ್ದರು.

ಟ್ರ್ಯಾಪ್‌ ಆಗಿದ್ದು ಹೇಗೆ?
ಈ ಯುವಕರು ಆರಂಭದಲ್ಲಿ ದುಬೈನಲ್ಲಿ 30-40 ಸಾವಿರ ರೂ. ದುಡಿಯುತ್ತಿದ್ದರು. ಈ ವೇಳೆ ಓರ್ವ ಏಜೆಂಟ್‌ ಪರಿಚಯವಾಗಿದ್ದಾನೆ. ಆತ ರಷ್ಯಾದಲ್ಲಿ 2 ಲಕ್ಷ ರೂ. ಸಂಬಳ ನೀಡಲಾಗುವುದು ಎಂದು ಆಸೆ ತೋರಿಸಿದ್ದ. ಈತನ ಮಾತಿಗೆ ಮರುಳಾಗಿ ನವೆಂಬರ್‌ನಲ್ಲಿ ಭಾರತಕ್ಕೆ ಬಂದಿದ್ದ ಇವರು ಡಿಸೆಂಬರ್‌ನಲ್ಲಿ ರಷ್ಯಾಗೆ ತೆರಳಿದ್ದರು. 4 ಮಂದಿ ಅಲ್ಲದೇ ದೇಶದ 60 ಮಂದಿ ರಷ್ಯಾದಲ್ಲಿ ಇದ್ದಾರೆ. ಇವರು ರಷ್ಯಾದ ಖಾಸಗಿ ಸೇನೆ ವ್ಯಾಗ್ನರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ವಾಗ್ನರ್‌ ಸೇನೆಯಲ್ಲಿರುವ ಸುಫಿಯಾನ್‌ ಮಹಾರಾಷ್ಟ್ರದಲ್ಲಿರುವ ಸಹೋದರನಿಗೆ ಮೊಬೈಲ್‌ ಕರೆ ಮಾಡಿ ತಿಳಿಸಿದ ಬಳಿಕ ಈ ಉದ್ಯೋಗ ವಂಚನೆ ಜಾಲ ಬೆಳಕಿಗೆ ಬಂದಿತ್ತು.

Share This Article