ಚರಂಡಿಗೆ ಬಿದ್ದಿರುವ ಮಗ ಸಿಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ – ತಂದೆ

Public TV
2 Min Read

ಮುಂಬೈ: ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆ ಬುಧವಾರ ರಾತ್ರಿ ಮೂರು ವರ್ಷದ ಬಾಲಕ ತೆರೆದ ಚರಂಡಿಗೆ ಬಿದ್ದಿದ್ದು, ಈ ಬಾಲಕನನ್ನು ಹುಡುಕುವ ಕಾರ್ಯ ಗುರುವಾರ ಬೆಳಗ್ಗೆಯಿಂದ ಆರಂಭಗೊಂಡಿದೆ. ಆದರೆ ಬಾಲಕನ ಸುಳಿವು ಮಾತ್ರ ಸಿಕ್ಕಿಲ್ಲ.

ಇದರಿಂದ ಮನನೊಂದ ಬಾಲಕ ದಿವ್ಯನಾಶ್ ಅವರ ಕುಟುಂಬ ಸಹನೆಯನ್ನು ಕಳೆದುಕೊಂಡಿದ್ದು, ಆತನ ತಂದೆ ನನ್ನ ಮಗ ಇವತ್ತು ಪತ್ತೆಯಾಗದೇ ಇದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

ಬುಧವಾರ ರಾತ್ರಿ ಅಂಬೇಡ್ಕರ್ ನಗರದಲ್ಲಿ ಸುಮಾರು ರಾತ್ರಿ 10.24ರ ವೇಳೆಗೆ ಮನೆಯಲ್ಲಿ ಊಟ ಮುಗಿಸಿ ಹೊರಗೆ ಬಂದ ಬಾಲಕ ರಸ್ತೆಯ ಬದಿಯಲ್ಲಿರುವ ತೆರೆದ ಚರಂಡಿಗೆ ಬಿದ್ದಿದ್ದಾನೆ. ಬಾಲಕ ಚರಂಡಿಗೆ ಬೀಳುತ್ತಿರುವ ಭಯಾನಕ ದೃಶ್ಯ ಪಕ್ಕದಲ್ಲಿನ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಬಾಲಕನನ್ನು ಹುಡುಕಲು ಅಗ್ನಿ ಶಾಮಕ ದಳ, ಎನ್‍ಡಿಆರ್‍ಎಫ್ ಮತ್ತು ಬಿಎಂಸಿಯ ಹಲವಾರು ತಂಡಗಳು ಸ್ಥಳಕ್ಕೆ ಬಂದು ಶೋಧ ಕಾರ್ಯ ನಡೆಸುತ್ತೇವೆ. ಆದರೆ ಶೋಧ ಕಾರ್ಯ ಆರಂಭವಾಗಿ 20 ಗಂಟೆಗಳು ಕಳೆದರೂ ಬಾಲಕ ದಿವ್ಯನಾಶ್‍ನ ಸುಳಿವು ಇನ್ನೂ ಸಿಕ್ಕಿಲ್ಲ.

ಈ ವಿಚಾರವಾಗಿ ಮಾತನಾಡಿರುವ ಬಾಲಕನ ತಂದೆ, “ಈ ಘಟನೆಗೆ ಬಿಎಂಸಿಯವರೇ ಕಾರಣ. ಅವರು ನನ್ನ ಮಗನನ್ನು ವಾಪಸ್ ತಂದುಕೊಡುತ್ತರಾ? ನನಗೆ ನನ್ನ ಮಗಬೇಕು. ಅವನು ಇವತ್ತು ಸಿಗದೆ ಇದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

ಈ ಘಟನೆಯಿಂದ ಬಾಲಕನ ಕುಟುಂಬ ವಿಚಲಿತಗೊಂಡಿದ್ದು, ಬಾಲಕನ ತಾಯಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ಈ ವಿಚಾರವಾಗಿ ಬಿಎಂಸಿ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಘಟನೆ ನಡೆಯಲು ಅವರೇ ಕಾರಣ. ಈ ಚರಂಡಿಯ ವಿಚಾರವಾಗಿ ಹಲವಾರು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲ ಸ್ಥಳೀಯರು ಮತ್ತು ಕುಟುಂಬದವರು ಸೇರಿ 30 ನಿಮಿಷ ರಸ್ತೆ ತಡೆ ನಡೆಸಿದರು. ಬಾಲಕ ಬಿದ್ದ ಸಮಯದಲ್ಲಿ ಚರಂಡಿಯಲ್ಲಿ ನೀರು ರಭಸದಿಂದ ಹರಿಯುತಿತ್ತು ಮತ್ತು 3 ಕಿ.ಮೀ ನಂತರ ಚರಂಡಿ ಕೊನೆಯಾಗುತ್ತದೆ. ನಂತರ ಅ ನೀರು ಅರಬ್ಬಿ ಸಮುದ್ರಕ್ಕೆ ಹರಿಯುತ್ತದೆ. ನೀರಿನ ರಭಸ ಜಾಸ್ತಿ ಇರುವ ಕಾರಣ ಬಾಲಕ ಸಮುದ್ರ ಸೇರಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *