-130 ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ
ತುಮಕೂರು: ಜಿಲ್ಲೆಯ ಗೋ ಶಾಲೆಗಳಲ್ಲಿ ನಡೆದಿದೆ ಎನ್ನಲಾದ ಸುಮಾರು 20 ಕೋಟಿ ರೂ ಮೇವು ಹಗರಣಕ್ಕೆ ಮತ್ತೇ ಜೀವ ಪಡೆದುಕೊಂಡಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 130 ಅಧಿಕಾರಿಗಳ ವಿರುದ್ಧ ಇಲಾಖೆ ತನಿಖೆ ನಡೆಸುವಂತೆ ಸರ್ಕಾರ ಲೋಕಾಯುಕ್ತಕ್ಕೆ ನಿರ್ದೆಶನ ನೀಡಿದೆ. ತನಿಖೆಯಾದರೆ ಪಶು ಇಲಾಖೆಹಾಗೂ ಕಂದಾಯ ಇಲಾಖೆ ಐಎಎಸ್ ಅಧಿಕಾರಿಗಳಿಗೂ ಉರುಳಾಗುವ ಸಾಧ್ಯತೆ ಇದೆ.
2017-18ರ ಸಾಲಿನಲ್ಲಿ ಭೀಕರ ಬರಗಾಲವಿತ್ತು. ಈ ವೇಳೆ ತುಮಕೂರು ಜಿಲ್ಲೆಯಲ್ಲಿ ತೆರೆಯಲಾದ 200ಕ್ಕೂ ಹೆಚ್ಚು ಗೋಶಾಲೆಗಳಲ್ಲಿ ಮೇವು ಹಗರಣ ನಡೆದಿರುವ ಬಗ್ಗೆ ವಾಸನೆ ಬಂದಿತ್ತು. ಜಾನುವಾರುಗಳಿಗೆ ನೀಡುವ ಒಣಹುಲ್ಲು, ಹಸಿ ಹುಲ್ಲಿನ ತೂಕದಲ್ಲಿ ವ್ಯತ್ಯಾಸ ಮಾಡಿ ಮೋಸ ಮಾಡಲಾಗ್ತಿದೆ ಎಂದು ಅಂದಿನ ಪಶುಸಂಗೋಪನಾ ಸಚಿವರಾದ ಟಿ.ಬಿ.ಜಯಚಂದ್ರರ ಮೇಲೆಯೂ ಆರೋಪ ಕೇಳಿಬಂದಿತ್ತು.
ಈ ಬಗ್ಗೆ ಗುಬ್ಬಿ ತಾಲೂಕು ಚೇಳೂರಿನ ಮಲ್ಲಿಕಾರ್ಜುನ್ ಎಂಬವರು ಜಿಲ್ಲೆಯಲ್ಲಿ ಸುಮಾರು 20 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಲೋಕಾಯುಕ್ತ ಒಂದೂವರೆ ವರ್ಷಗಳ ಧೀರ್ಘ ಪರಿಶೀಲನೆ ಬಳಿಕ ಅವ್ಯವಹಾರ ನಡೆದಿರೋದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇದೇ ವರದಿ ಆಧರಿಸಿ ಸರ್ಕಾರ ಅವ್ಯವಹಾರದ ಹಣವನ್ನು ತಪ್ಪಿತಸ್ಥ ಅಧಿಕಾರಿಗಳಿಂದಲೇ ಭರಿಸಿಕೊಳ್ಳುವಂತೆ ಸೂಚಿಸಿದೆ. ಸರ್ಕಾರದ ಆದೇಶ ಕೇಳಿ ಭ್ರಷ್ಟ ಅಧಿಕಾರಿಗಳು ನಡುಗಿ ಹೋಗಿದ್ದಾರೆ.
ದೂರುದಾರ ಮಲ್ಲಿಕಾರ್ಜುನ್‍ಗೆ ಲೋಕಾಯುಕ್ತದಲ್ಲೂ ಸಂಪೂರ್ಣ ನ್ಯಾಯ ಸಿಗುವ ಭರವಸೆ ಇಲ್ಲದಾಗಿ ಹೈಕೋರ್ಟ್ ಮೂಲಕ ಸಿಬಿಐ ತನಿಖೆ ಮಾಡಿಸುವಂತೆ ಮೇಲ್ಮನವಿ ಸಲ್ಲಿಸಲು ತಯಾರಾಗಿದ್ದಾರೆ. ಒಟ್ಟಿನಲ್ಲಿ ಜಾನುವಾರುಗಳ ಮೇವನ್ನು ಬಿಡದ ಭ್ರಷ್ಟ ಅಧಿಕಾರಿಗಳು ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv