20 ಸಾವಿರ ಕೋವಿಡ್ ಟೆಸ್ಟ್‌ಗೆ 10 ಕೋಟಿ ರೂ. ಖರ್ಚು ಮಾಡಲಿದೆ ಬಿಸಿಸಿಐ

Public TV
1 Min Read

ಅಬುಧಾಬಿ: ಐಪಿಎಲ್ 2020ರ ಆವೃತ್ತಿಯಲ್ಲಿ ಆಟಗಾರರು ಹಾಗೂ ತಂಡದ ಸಹಾಯಕ ಸಿಬ್ಬಂದಿಗೆ ಸುಮಾರು 20 ಸಾವಿರ ಕೊರೊನಾ ಟೆಸ್ಟ್ ನಡೆಸಲು ಬಿಸಿಸಿಐ ಸಿದ್ಧತೆ ನಡೆಸಿದ್ದು, ಇದಕ್ಕಾಗಿ 10 ಕೋಟಿ ರೂ.ಗಳ ಬಜೆಟ್‍ನ್ನು ಪ್ರತ್ಯೇಕವಾಗಿಸಿದೆ ಎಂದ ಮಾಹಿತಿ ಸಿಕ್ಕಿದೆ

ಭಾರತದಲ್ಲಿ ತಮ್ಮ ಆಟಗಾರರಿಗೆ ಟೂರ್ನಿಯ ಫ್ರಾಂಚೈಸಿಗಳೇ ಕೊರೊನಾ ಟೆಸ್ಟ್ ಮಾಡಿಸಿದ್ದರು. ಯುಎಇಗೆ ತೆರಳಿದ ಬಳಿಕ ಆರ್‍ಟಿ-ಪಿಸಿಆರ್ ಟೆಸ್ಟ್ ಮಾಡಿಸುವ ಖರ್ಚನ್ನು ಬಿಸಿಸಿಐ ಭರಿಸುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಸಿಸಿಐ ವಕ್ತಾರರೊಬ್ಬರು, ಐಪಿಎಲ್ ಸಮಯದಲ್ಲಿ ಕೊರೊನಾ ಪರೀಕ್ಷೆ ನಡೆಲು 10 ಕೋಟಿ ರೂ. ಖರ್ಚು ಮಾಡಲಿದೆ. ಸಂಸ್ಥೆಯೊಂದಕ್ಕೆ ಸೇರಿರುವ 75 ಮಂದಿ ಆರೋಗ್ಯ ಸಿಬ್ಬಂದಿ ಐಪಿಎಲ್ ವೇಳೆಯಲ್ಲಿ ಟೆಸ್ಟಿಂಗ್ ನಡೆಸುವ ಕಾರ್ಯದಲ್ಲಿರುತ್ತಾರೆ. ಆಟಗಾರರು ಹಾಗೂ ಅಧಿಕಾರಿಗಳ ಭದ್ರತೆಯಲ್ಲಿ ಯಾವುದೇ ನಿರ್ಲಕ್ಷ್ಯವನ್ನು ವಹಿಸುವುದಿಲ್ಲ. ಆರೋಗ್ಯ ಸಿಬ್ಬಂದಿಗಾಗಿಯೇ ಪ್ರತ್ಯೇಕ ಹೋಟೆಲ್ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ಸೆ.19 ರಿಂದ ನ.10ರ ವರೆಗೂ ಐಪಿಎಲ್ 2020ರ ಆವೃತ್ತಿ ಯುಎಇನಲ್ಲಿ ನಡೆಯಲಿದ್ದು, 53 ದಿನಗಳ ಅವಧಿಯಲ್ಲಿ 60 ಪಂದ್ಯಗಳು ನಡೆಯಲಿದೆ. ಪರಿಣಾಮ ಟೂರ್ನಿ ಅಂತ್ಯವಾಗುವವರೆಗೂ ಕೊರೊನಾ ಟೆಸ್ಟ್ ನಡೆಸಲು ಬಿಸಿಸಿಐ ವಿಪಿಎಸ್ ಹೆಲ್ತ್ ಕೇರ್ ಸೆಂಟರ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಐಪಿಎಲ್ 13ನೇ ಆವೃತ್ತಿಗಾಗಿ ಆ.20ರ ವೇಳೆಗೆ ಎಲ್ಲಾ ತಂಡಗಳು ಯುಎಇಗೆ ತಲುಪಿದ್ದವು. ಈಗಾಗಲೇ 2 ಸಾವಿರ ಕೊರೊನಾ ಟೆಸ್ಟ್ ಗಳನ್ನು ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.

ಟೂರ್ನಿ ನಡೆಯುವ ಸಂದರ್ಭದಲ್ಲೂ ಐದು ದಿನಗಳಿಗೆ ಒಮ್ಮೆ ಆಟಗಾರರಿಗೆ ಕೊರೊನಾ ಪರೀಕ್ಷೆ ನಡೆಸಲು ಬಿಸಿಸಿಐ ಈಗಾಗಲೇ ನಿರ್ಧರಿಸಿದೆ. ತಂಡದ ಸಹಾಯಕ ಸಿಬ್ಬಂದಿ, ಹೋಟಲ್ ಸಿಬ್ಬಂದಿ, ಟ್ರಾವೆಲ್, ಫ್ರಾಂಚೈಸಿಗಳ ಮ್ಯಾನೇಜ್‍ಮೆಂಟ್ ಸಿಬ್ಬಂದಿಯೊಂದಿಗೆ ಆಟಗಾರರ ಸಂಪರ್ಕಕ್ಕೆ ಬರುವವರಿಗೆ ನಿಯಮಿತವಾಗಿ ಕೊರೊನಾ ಟೆಸ್ಟ್ ಮಾಡಲಿದ್ದಾರೆ. ಟೂರ್ನಿ ಅಂತ್ಯದ ವೇಳೆಗೆ ಸರಿ ಸುಮಾರು 20 ಸಾವಿರ ಕೋವಿಡ್ ಟೆಸ್ಟ್ ಮಾಡುವ ಅಂದಾಜನ್ನು ಬಿಸಿಸಿಐ ಹೊಂದಿದೆ.

Share This Article
Leave a Comment

Leave a Reply

Your email address will not be published. Required fields are marked *