20 ವರ್ಷದ ಹಳೆಯ ವಾಹನಗಳು ಗುಜುರಿಗೆ – ಸೀತಾರಾಮನ್‌ ಹೇಳಿದ್ದು ಏನು? ಏನಿದು ಗುಜುರಿ ನೀತಿ?

Public TV
4 Min Read

ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಪದೇ ಪದೇ ಹೇಳುತ್ತಿದ್ದ ʼಗುಜುರಿ ನೀತಿʼಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಇಂದಿನ ಬಜೆಟ್‌ ಭಾಷಣದಲ್ಲಿ ಸ್ವಯಂಪ್ರೇರಿತ ಗುಜುರಿ ನೀತಿ ಜಾರಿಯ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಸ್ತಾಪ ಮಾಡಿದ್ದಾರೆ. 20 ವರ್ಷ ಮೇಲ್ಪಟ್ಟ ಖಾಸಗಿ ವಾಹನ, 15 ವರ್ಷ ಮೇಲ್ಪಟ್ಟ ಕಮರ್ಷಿಯಲ್‌ ವಾಹನಗಳು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ವಾಯು ಮಾಲಿನ್ಯ ತಡೆಗಟ್ಟಲು 42 ನಗರ ಕೇಂದ್ರಗಳಿಗೆ ಒಟ್ಟು 2,217 ಕೋಟಿ ರೂ. ಅನುದಾನವನ್ನು ಸೀತಾರಾಮನ್‌ ಪ್ರಕಟ ಮಾಡಿದ್ದಾರೆ.

ಗಡ್ಕರಿ ಹೇಳಿದ್ದು ಏನು?
ದೇಶದ ಅಟೋಮೊಬೈಲ್‌ ಉದ್ಯಮದ ಉತ್ತೇಜನಕ್ಕೆ ಕೇಂದ್ರ ಸರ್ಕಾರ ‘ಗುಜುರಿ ನೀತಿʼಯನ್ನು ಜಾರಿಗೆ ತರಲು ಮಂದಾಗುತ್ತಿದೆ. ವಾಹನ ಕ್ಷೇತ್ರ ಸಂಕಷ್ಟದಲ್ಲಿದೆ ಎಂಬುದು ಸರ್ಕಾರಕ್ಕೆ ತಿಳಿದಿದೆ. ಕಳೆದ ಒಂದೂವರೆ ವರ್ಷಗಳಿಂದ ನಾನು ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದೇನೆ. ಈಗ ಇದು ಅಂತಿಮಗೊಂಡಿದ್ದು ಕೊನೆಯ ಹಂತದಲ್ಲಿದೆ ಎಂದು ಈ ಹಿಂದೆ ನಿತಿನ್‌ ಗಡ್ಕರಿ ಹೇಳಿದ್ದರು.

ಅಟೋಮೋಟಿವ್ ಕಾಂಪೋನೆಂಟ್ ತಯಾರಕರ ಸಂಘ ಆಯೋಜಿಸಿದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ‘ಗುಜುರಿ ನೀತಿ’ ಜಾರಿಯ ಬಗ್ಗೆ ಗಡ್ಕರಿ ಮಾತನಾಡಿದ್ದರು. ಕಳೆದ ಒಂದೂವರೆ ವರ್ಷದಿಂದ ಈ ಗುಜುರಿ ನೀತಿಯ ಬಗ್ಗೆ ಹೇಳುತ್ತಲೇ ಇದ್ದೇನೆ. ಈಗ ಅದು ಅಂತಿಮಗೊಂಡಿದೆ. ಇದರಿಂದ ಭಾರತೀಯ ಉತ್ಪಾದಕರಿಗೆ ನೆರವಾಗಲಿದೆ. ತಡವಾಗಿ ನೀತಿ ಜಾರಿಯಾಗುತ್ತಿರುವುದಕ್ಕೆ ನಾನು ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದರು.

ಮುಂದಿನ 5 ವರ್ಷದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಅಟೋಮೊಬೈಲ್‍ ಕ್ಷೇತ್ರದ ಹಬ್‍ ಆಗಿ ಪರಿವರ್ತನೆಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ. ಕಂಪನಿಗಳು ವಿದೇಶದ ಆಮದು ಅವಲಂಬನೆ ಕಡಿಮೆ ಮಾಡಬೇಕು. ಮುಂದಿನ ದಿನಗಳಲ್ಲಿ ಆಮದು ಸುಂಕವನ್ನ ಸರ್ಕಾರ ಹೆಚ್ಚಿಸಲಿದೆ ಎಂದು ಈ ವೇಳೆ ಹೇಳಿದ್ದರು.

ಏನಿದು ನೀತಿ?
ಹಳೆಯ ವಾಹನಗಳನ್ನು ಗುಜುರಿಗೆ ಹಾಕಿದರೆ ಅದಕ್ಕೆ ಹಣಕಾಸಿನ ಸಹಾಯದ ಜೊತೆಗೆ ಹೊಸ ವಾಹನದ ಖರೀದಿಗೆ ಉತ್ತೇಜನ ನೀಡುವುದು ಈ ನೀತಿಯ ಮುಖ್ಯ ಉದ್ದೇಶ. ಕಳೆದ ಎರಡು ವರ್ಷದಿಂದ ಅಟೋಮೊಬೈಲ್ ಕ್ಷೇತ್ರದ ಬೆಳವಣಿಗೆ ಕಡಿಮೆಯಾಗುತ್ತಿದೆ. ಹೀಗಾಗಿ ವಿದೇಶಗಳಲ್ಲಿ ಇರುವಂತೆ ಭಾರತದಲ್ಲೂ ಗುಜುರಿ ನೀತಿ ಜಾರಿ ಮಾಡುವಂತೆ ವಾಹನ ತಯಾರಕ ಕಂಪನಿಗಳು ಸರ್ಕಾರವನ್ನು ಒತ್ತಾಯಿಸಿದ್ದವು.

ದರ ನಿಗದಿ ಹೇಗೆ?
ವಾಹನದ ಬಿಡಿಭಾಗಗಳ ಕಂಡೀಷನ್‌ ನೋಡಿಕೊಂಡು ಸರ್ಕಾರ ವಾಹನವನ್ನು ಗುಜುರಿಗೆ ಹಾಕುವ ಮಾಲೀಕರಿಗೆ ಹಣ ನೀಡಲಿದೆ.

ಗುಜುರಿ ನೀತಿಯ ಲಾಭ ಏನು?
15 ವರ್ಷಕ್ಕಿಂತ ಹೆಚ್ಚಿನ ವರ್ಷದ ಲಕ್ಷಾಂತರ ವಾಹನಗಳು ಸಂಚರಿಸುತ್ತಿವೆ. ಇವುಗಳನ್ನು ಗುಜುರಿಗೆ ಹಾಕಿದರೆ ವಾಯ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಕಡಿಮೆಯಾಗಲಿದೆ. ಹಳೇ ವಾಹನಗಳು ಗುಜುರಿ ಸೇರುವುದರಿಂದ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಇದರಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ ನೀಡಿದಂತಾಗುತ್ತದೆ.

ವಿರೋಧ ಯಾಕೆ?
ಮಧ್ಯಮ ವರ್ಗದವರು ಖರೀದಿಸಿದ ವಾಹನ ಹಳೆಯಾದರೂ ಈಗಲೂ ಉತ್ತಮ ಸ್ಥಿತಿಯಲ್ಲಿದೆ. ಹೀಗಿರುವಾಗ ಈ ವಾಹನಗಳನ್ನು ಗುಜುರಿಗೆ ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಎದ್ದಿದೆ. ಸದ್ಯದ ಸಂಚಾರಿ ನಿಯಮಗಳ ಪ್ರಕಾರ ಪ್ರತಿ ವಾಹನ 6 ತಿಂಗಳಿಗೊಮ್ಮೆ ಕಡ್ಡಾಯವಾಗಿ ಎಮಿಶನ್ ಟೆಸ್ಟ್ ಮಾಡಿಸಬೇಕು. ಎಮಿಶನ್‌ ಟೆಸ್ಟ್‌ನಲ್ಲಿ ಪಾಸಾದರೂ 15 ವರ್ಷ ಆಗಿದೆ ಎಂಬ ಕಾರಣಕ್ಕೆ ಅದನ್ನ ಗುಜುರಿಗೆ ಹಾಕುವುದು ಎಷ್ಟು ಸರಿ? ಹಾಗಾದರೆ ಎಮಿಶನ್‌ ಟೆಸ್ಟ್‌ ಸರಿ ಇಲ್ಲವೇ ಎಂಬ ಮತ್ತೊಂದು ಪ್ರಶ್ನೆಯೂ ಎದ್ದಿದೆ.

ಈಗ 10 ವರ್ಷ ಮೇಲ್ಪಟ್ಟ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಬೇಕಾಗುತ್ತದೆ. ಗುಜುರಿ ನೀತಿ ಜಾರಿಗೆ ಬಂದರೆ ಫಿಟ್ನೆಸ್ ಸರ್ಟಿಫಿಕೇಟ್ ಅವಶ್ಯಕತೆ ಏನು ಎಂಬ ಮೂರನೇ ಪ್ರಶ್ನೆಯೂ ಎದ್ದಿದೆ. ಈ ಎಲ್ಲ ಪ್ರಶ್ನೆಗಳಿಗೆ ಅಂತಿಮವಾಗಿ ಬರಲಿರುವ ನೀತಿಯಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ.

ಬಿಡಿ ಭಾಗಗಳು ಮರುಬಳಕೆ:
ಗುಜರಿ ನೀತಿ ಜಾರಿಗೆ ಬಂದರೆ 2020-21ರ ಹಣಕಾಸು ವರ್ಷದಲ್ಲಿ 90 ಲಕ್ಷ ವಾಹನಗಳು, 2025ರೊಳಗೆ 2.8 ಕೋಟಿ ವಾಹನಗಳು ಸಂಚಾರ ನಿಲ್ಲಿಸಬಹುದು ಎಂದು ಅಂದಾಜಿಸಲಾಗಿದೆ. ಈ ಹಳೆಯ ವಾಹನಗಳ ಬಿಡಿ ಉಪಕರಣ ಗಳನ್ನು ಮರುಬಳಕೆ ಮಾಡಲು ಅಗತ್ಯ ಘಟಕಗಳಿಗೆ ಉತ್ತೇಜನ ನೀಡಲಾಗುತ್ತದೆ. ಇದನ್ನೂ ಓದಿ: ಇಂದಿನಿಂದ ನೀವು ಕಡಿಮೆ ಬೆಲೆಗೆ‌ ಕಾರು, ಬೈಕ್ ಖರೀದಿಸಬಹುದು.

ತಡವಾಗಿದ್ದು ಯಾಕೆ?
ಕಳೆದ ಒಂದೂವರೆ ವರ್ಷಗಳಿಂದ ನಿತಿನ್‌ ಗಡ್ಕರಿ ಈ ಬಗ್ಗೆ ಮಾತನಾಡುತ್ತಿದ್ದರು. ಆದರೆ ಆರಂಭದಲ್ಲಿ ಹಣಕಾಸು ಸಚಿವಾಲಯದಿಂದ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ. ಈ ವರ್ಷದ ಆರಂಭದಲ್ಲಿ ಈ ನೀತಿ ಜಾರಿಗೆ ತರಲು ಸರ್ಕಾರ ಮುಂದಾಗಿತ್ತು. ಆದರೆ ಕೋವಿಡ್‌ 19 ಲಾಕ್‌ಡೌನ್‌ನಿಂದಾಗಿ ಮುಂದಕ್ಕೆ ಹೋಗಿತ್ತು. ಸದ್ಯ ಕೇಂದ್ರ ಸರ್ಕಾರದ ‘ಆತ್ಮನಿರ್ಭರ್‌ ಭಾರತʼ ಜಪವನ್ನು ಜಪಿಸುತ್ತಿರುವ ಸಮಯದಲ್ಲಿ ಈ ಗುಜುರಿ ನೀತಿ ಜಾರಿ ಮಾಡಲು ಸಿದ್ಧತೆ ಮಾಡುತ್ತಿದೆ.

ಹಲವು ದೇಶಗಳಲ್ಲಿ ಜಾರಿ
ಆರ್ಥಿಕ ಹಿಂಜರಿತದಿಂದ ಚೇತರಿಸಿದ ಬಳಿಕ 2008-09ರಲ್ಲಿ ಹಲವು ದೇಶಗಳು ಈ ಗುಜುರಿ ನೀತಿಯನ್ನು ಜಾರಿ ಮಾಡಿವೆ. ಅಮೆರಿಕ, ಆಸ್ಟ್ರೀಯಾ, ಕೆನಡಾ, ಚೀನಾ, ಜರ್ಮನಿ, ಜಪಾನ್‌, ಇಂಗ್ಲೆಂಡ್‌ ಸೇರಿದಂತೆ ಹಲವು ಯುರೋಪಿಯನ್‌ ದೇಶಗಳಲ್ಲಿ ಈ ನೀತಿ ಈಗಾಗಲೇ ಜಾರಿಯಾಗಿವೆ. ಜರ್ಮನಿಯಲ್ಲಿ 9 ವರ್ಷ ಮೀರಿದ ವಾಹನಗಳಿಗೆ 2,500 ಯುರೋ(ಅಂದಾಜು2.16 ಲಕ್ಷ ರೂ.), ಇಟಲಿಯಲ್ಲಿ 10 ವರ್ಷ ಮೀರಿದ ವಾಹನಗಳಿಗೆ 3,500 ಯುರೋ( ಅಂದಾಜು 3.03 ಲಕ್ಷ ರೂ.) ನೀಡುತ್ತದೆ.

ಹೊಸ ನೀತಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್‌ ಮಾಡಿ ತಿಳಿಸಿ

Share This Article
Leave a Comment

Leave a Reply

Your email address will not be published. Required fields are marked *