20 ನಿಮಿಷ ಚಾರ್ಜ್ ಮಾಡಿದರೆ 483 ಕಿ.ಮೀ. ಚಲಿಸುತ್ತೆ ಈ ಎಲೆಕ್ಟ್ರಿಕ್ ಕಾರು

Public TV
2 Min Read

ನ್ಯೂಯಾರ್ಕ್: ಸ್ಮಾರ್ಟ್‍ಫೋನ್‍ಗಳಲ್ಲಿ ಫಾಸ್ಟ್ ಚಾರ್ಜಿಂಗ್ ಈಗ ಸಾಮಾನ್ಯ. ಆದರೆ ಈಗ ಈ ವೈಶಿಷ್ಟ್ಯತೆ ಕಾರುಗಳಿಗೆ ಬಂದಿದೆ. ಕೇವಲ 20 ನಿಮಿಷ ಚಾರ್ಜ್ ಮಾಡಿದರೆ ಮಾಡಿದರೆ ಬರೋಬ್ಬರಿ 483 ಕಿ.ಮೀ ಚಲಿಸುವ ಕಾರನ್ನು ಅಮೆರಿಕದ ಕಂಪನಿ ಅಭಿವೃದ್ಧಿ ಪಡಿಸಿದೆ.

ಲುಸಿಡ್ ಮೋಟಾರ್ಸ್ ಎಲೆಕ್ಟ್ರಿಕ್ ಸೆಡಾನ್ ಕಾರನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈಗಾಗಲೇ ಕಾರನ್ನು ಅಭಿವೃದ್ಧಿ ಪಡಿಸಿರುವ ಕಂಪನಿ ಸೆ.9 ರಂದು ಬಿಡುಗಡೆ ಮಾಡಲಿದ್ದು, ಮುಂದಿನ ವರ್ಷ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ಈ ಕಾರು 20 ನಿಮಿಷ ಚಾರ್ಚ್ ಮಾಡಿದರೆ ಬರೋಬ್ಬರಿ 483 ಕಿಮೀ ಚಲಿಸುವ ಸಾಮಥ್ರ್ಯವನ್ನು ಹೊಂದಿದೆ. ಪೂರ್ಣ ಪ್ರಮಾಣದಲ್ಲಿ ಚಾರ್ಚ್ ಮಾಡಿದರೆ ಸುಮಾರು 832 ಕಿಮೀ ಚಲಿಸಲಿದೆ. ಜೊತೆಗೆ 2.5 ಸೆಕೆಂಡ್‍ನಲ್ಲಿ ಕಾರು 0-100 ಕಿಲೋಮೀಟರ್ ವೇಗವನ್ನು ತಲುಪಲಿದೆ ಎಂದು ಲುಸಿಡ್ ಕಂಪನಿ ಹೇಳಿಕೊಂಡಿದೆ.

ಇದಕ್ಕೂ ಮುನ್ನ ಎಲೆಕ್ಟ್ರಿಕ್ ಕಾರನ್ನು ತಯಾರು ಮಾಡುವ ಟೆಸ್ಲಾ ಕಂಪನಿಯು ಕಳೆದ ಜೂನ್ ತಿಂಗಳಿನಲ್ಲಿ ಎಸ್ ಲಾಂಗ್ ರೇಂಜ್ ಪ್ಲಸ್ ಎಂಬ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿತ್ತು. ಈ ವಾಹನ ಪೂರ್ತಿ ಚಾರ್ಚ್ ಮಾಡಿದರೆ 647 ಕಿಮೀ ಚಲಿಸುವ ಸಾಮಥ್ರ್ಯ ಹೊಂದಿತ್ತು. ಇದು ವಿಶ್ವದಲ್ಲೇ ಜಾಸ್ತಿ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರು ಎಂದು ಕಂಪನಿ ಹೇಳಿಕೊಂಡಿತ್ತು. ಈಗ ಇದೇ ಮಾದರಿಯಲ್ಲಿ ಲುಸಿಡ್ ಕಂಪನಿ ಕಾರು ತಯಾರು ಮಾಡಿದ್ದು, ಈ ದಾಖಲೆಯನ್ನು ಮುರಿಯಲು ಹೊರಟಿದೆ.

ಕಡಿಮೆ ಅವಧಿಯಲ್ಲಿ ಹೇಗೆ?
ಕಂಪನಿ ಈ ಕಾರಿಗೆ 900 ವೋಲ್ಟ್ ಚಾರ್ಜರ್ ಅಭಿವೃದ್ಧಿ ಪಡಿಸಿದೆ. ಟೆಸ್ಲಾ ಅಭಿವೃದ್ಧಿ ಪಡಿಸಿದ ಕಾರು 250 ಕಿಲೋವ್ಯಾಟ್ ವಿದ್ಯುತ್‍ಗೆ ಹೊಂದಿಕೆಯಾದರೆ ಈ ಕಾರು 350 ಕಿಲೋ ವ್ಯಾಟ್ ವಿದ್ಯುತ್‍ಗೆ ಹೊಂದಿಕೆಯಾಗುತ್ತದೆ. ಹೀಗಾಗಿ ವೇಗವಾಗಿ ಕಾರನ್ನು ಚಾರ್ಜ್ ಮಾಡಬಹುದಾಗಿದೆ. ವೇಗದ ಚಾರ್ಜಿಂಗ್ ವಿಶೇಷತೆಯ ಜೊತೆಗೆ ಕೇವಲ 2.5 ಸೆಕೆಂಡ್‍ನಲ್ಲಿ 100 ಕಿ.ಮೀ ವೇಗ ತಲುಪುತ್ತದೆ ಎಂದು ಕಂಪನಿ ಹೇಳಿದೆ.

ಟೆಸ್ಲಾ ಕಂಪನಿಗೂ ಮತ್ತು ಲುಸಿಡ್ ಕಂಪನಿಗೂ ಒಂದು ಅಪರೂಪದ ಸಂಬಂಧವಿದೆ. ಈಗ ಲುಸಿಡ್ ಕಂಪನಿಯ ಮಾಲೀಕರಾಗಿರುವ ಬರ್ನಾರ್ಡ್ ಈ ಹಿಂದೆ ಟೆಸ್ಲಾ ಕಂಪನಿಯ ಸಿಇಒ ಆಗಿ ಕೆಲಸ ಮಾಡಿದ್ದರು. 2007ರಲ್ಲಿ ಕೆಲಸ ಬಿಟ್ಟು ಉದ್ಯಮಿ ಸ್ಯಾಮ್ ವೆಂಗ್ ಅವರ ಜೊತೆ ಸೇರಿಕೊಂಡು 2007ರಲ್ಲಿ ಲುಸಿಡ್ ಕಂಪನಿಯನ್ನು ಅಟಿವಾ  ಎಂಬ ಹೆಸರಿನಲ್ಲಿ ಸ್ಥಾಪಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *