ಪಾಕ್ ವಿರುದ್ಧದ ಸರ್ಜಿಕಲ್ ದಾಳಿಗೆ 2 ವರ್ಷ

Public TV
2 Min Read

-ಮತ್ತೊಂದು ಸ್ಟ್ರೈಕ್ ಬಗ್ಗೆ ಸುಳಿವು ಕೊಟ್ಟ ರಾಜನಾಥ್ ಸಿಂಗ್!

ನವದೆಹಲಿ: ಪಾಕಿಸ್ತಾನದ ಉಗ್ರರು ನಡೆಸಿದ್ದ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ನಡೆಸಿದ್ದ ಸರ್ಜಿಕಲ್ ದಾಳಿಗೆ ಇಂದು ಎರಡು ವರ್ಷ ಪೂರ್ಣಗೊಂಡಿದೆ.

ಹೌದು, ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ 2016ರ ಸೆಪ್ಟೆಂಬರ್ 18 ರಂದು ಪಾಕಿಸ್ತಾನದ ಉಗ್ರರು ದಾಳಿ ನಡೆಸಿ ಯೋಧರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಕಾರವಾಗಿ ಭಾರತೀಯ ಸೇನೆ ಐತಿಹಾಸಿಕ ಸರ್ಜಿಕಲ್ ದಾಳಿ ನಡೆಸಿತ್ತು. ಈ ದಾಳಿಗೆ 2 ವರ್ಷದ ವರ್ಷಾಚರಣೆಯನ್ನು ಸೇನೆ ಅದ್ಧೂರಿಯಾಗಿ ನೆರವೇರಿಸಿದೆ.

ಭಾರತ ತನ್ನ ಸರ್ಜಿಕಲ್ ಸ್ಟ್ರೈಕ್ ಮುಖಾಂತರ ಇಡೀ ವಿಶ್ವಕ್ಕೆ ತನ್ನ ಸೇನೆಯ ಶಕ್ತಿ ಹಾಗೂ ಸಾಮರ್ಥ್ಯವನ್ನು ತೋರಿಸಿಕೊಟ್ಟಿತ್ತು. ಪಾಕಿಸ್ತಾನ ಆಶ್ರಯದಲ್ಲಿ ನಡೆಯುತ್ತಿದ್ದ ಉಗ್ರರಿಗೆ ಈ ದಾಳಿಯು ಬೆಚ್ಚಿ ಬೀಳುವಂತೆ ಮಾಡಿತ್ತು. ಅತ್ಯಂತ ಅಪಾಯಕಾರಿ ಕಾರ್ಯಾಚರಣೆಯನ್ನು ಸೇನೆ ಯಶಸ್ವಿಯಾಗಿ ನಡೆಸಿ, ಉಗ್ರರಿಗೆ ಸಿಂಹಸ್ವಪ್ನವಾಗಿ ಕಾಡಿತ್ತು. ಇದನ್ನೂ ಓದಿ: ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಬಿಡುಗಡೆಗೊಳಿಸಿದ ಕೇಂದ್ರ-ವಿಡಿಯೋ ನೋಡಿ

ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಗೆ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾರತೀಯ ಸೇನೆ ರಾಜಸ್ಥಾನದ ಜೋಧಪುರದಲ್ಲಿ `ಪರಾಕ್ರಮ ಪರ್ವ’ ಎಂಬ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿಯವರು ಅದ್ಧೂರಿಯಾಗಿ ಚಾಲನೆ ನೀಡಿ, ಸೇನಾ ನೆಲೆಯಾದ ಬ್ಯಾಟಲ್ ಆಕ್ಸ್ ಮೈದಾನದಲ್ಲಿ ಹುತಾತ್ಮ ಯೋಧರಿಗೆ ಗೌರವ ಸೂಚಿಸಿದ್ರು.

ಭಾರತೀಯ ಸೇನೆ ತನ್ನ 2 ನೇ ವರ್ಷದ ಸರ್ಜಿಕಲ್ ಸ್ಟ್ರೈಕ್ ಆಚರಣೆಯಲ್ಲಿದೆ. ಆದರೆ ಪಾಕ್ ಆಕ್ರಮಿತ ಕಾಶ್ಮೀರದ ಗಡಿಯಲ್ಲಿ 27 ಶಿಬಿರಗಳಲ್ಲಿರುವ 250 ಮಂದಿ ಉಗ್ರರು ಗಡಿ ನುಸುಳಲು ಯತ್ನಿಸ್ತಿದ್ದಾರೆ. ಭಾರತೀಯ ಯೋಧರು ನಡೆಸಿದ್ದ ಸರ್ಜಿಕಲ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಪಾಕಿಸ್ತಾನಿ ಉಗ್ರರು ಸಜ್ಜಾಗಿದ್ದಾರೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ. ಇದನ್ನೂ ಓದಿ:  ಸರ್ಜಿಕಲ್ ಸ್ಟ್ರೈಕ್‍ಗೆ ಚಿರತೆ ಮೂತ್ರ ಕೊಂಡೊಯ್ದಿದ್ದ ಭಾರತದ ಯೋಧರು – ಏನಿದರ ಹಿಂದಿನ ರಹಸ್ಯ?

ಈ ಬಗ್ಗೆ ಶುಕ್ರವಾರ ಮುಜಾಫರ್ ನಗರದಲ್ಲಿ ಬಿಎಸ್‍ಎಫ್ ಯೋಧ ನರೇಂದ್ರ ಸಿಂಗ್ ಹತ್ಯೆ ಉಲ್ಲೇಖಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‍ರವರು, ಗಡಿಯಲ್ಲಿ ಏನೋ ನಡೆದಿದೆ. ಅದು ಏನೂ ಅಂತ ಹೇಳಲು ಸಾಧ್ಯವಿಲ್ಲ. ಆದರೆ ಎರಡು-ಮೂರು ದಿನಗಳ ಮುಂಚೆ ಏನೋ ದೊಡ್ಡದಾಗಿ, ಸರಿಯಾಗಿಯೇ ಆಗಿದೆ. ಇನ್ನು ಮುಂದೆಯೂ ಆಗುತ್ತಾ ಇರುತ್ತೆ ಎನ್ನುವ ಮೂಲಕ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸುಳಿವು ನೀಡಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ನಡೆದಿದ್ದು ಯಾಕೆ?
2016ರ ಸೆಪ್ಟೆಂಬರ್ 18 ರಂದು ಉಗ್ರರು ಜಮ್ಮು ಕಾಶ್ಮೀರದ ಉರಿಯಲ್ಲಿರುವ ಸೇನಾ ಕೇಂದ್ರ ಕಚೇರಿಗೆ ನುಗ್ಗಿ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗಿದ್ದರೆ 4 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಕಳೆದ ಎರಡು ದಶಕದಲ್ಲಿನ ಸೇನೆಯ ಮೇಲಿನ ಡೆಡ್ಲಿ ದಾಳಿ ಇದಾಗಿತ್ತು. ಈ ದಾಳಿಗೆ ಸೇಡು ತೀರಿಸಲು ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು.

2016ರ ಸಪ್ಟೆಂಬರ್ 28, 29ರ ಮಧ್ಯರಾತ್ರಿ ವೇಳೆ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿ ಸರ್ಜಿಕಲ್ ದಾಳಿ ನಡೆಸಿ 20ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿತ್ತು. ಈ ಕಾರ್ಯಾಚರಣೆ ಬಳಿಕ ಸುದ್ದಿಗೋಷ್ಠಿ ನಡೆಸಿ ಡಿಜಿಎಂಒ ಅಧಿಕಾರಿ ಕಾರ್ಯಾಚರಣೆಯ ವಿವರವನ್ನು ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *