2 ವರ್ಷಗಳ ಬಳಿಕದ ದಾಖಲೆ – ಅಕ್ಷಯ ತೃತೀಯದಂದು ಭರ್ಜರಿ ಸೇಲ್

Public TV
1 Min Read

ನವದೆಹಲಿ: ಕೋವಿಡ್ ಸಂದರ್ಭದಲ್ಲಿ ಕುಸಿದಿದ್ದ ಆಭರಣ ಮಾರುಕಟ್ಟೆ 2 ವರ್ಷಗಳ ಬಳಿಕ ಈ ಬಾರಿಯ ಅಕ್ಷಯ ತೃತೀಯದಂದು ಮತ್ತೆ ಚೇತರಿಸಿಕೊಂಡಿದೆ.

ದೇಶಾದ್ಯಂತ 2 ವರ್ಷಗಳ ಬಳಿಕ 2022ರ ಅಕ್ಷಯ ತೃತೀಯದಂದು 15,000 ಕೋಟಿ ರೂ. ಮೌಲ್ಯದ ಆಭರಣ ಮಾರಾಟವಾಗಿದೆ. ಇದು ಕೋವಿಡ್‌ನಿಂದ ವಿಧಿಸಲಾದ ಲಾಕ್‌ಡೌನ್ ಬಳಿಕದ ಅತಿ ದೊಡ್ಡ ಆಭರಣ ವ್ಯವಹಾರವಾಗಿದೆ ಎಂದು ಅಖಿಲ ಭಾರತ ವ್ಯಾಪರಗಳ ಒಕ್ಕೂಟ(ಸಿಎಐಟಿ) ತಿಳಿಸಿದೆ. ಇದನ್ನೂ ಓದಿ: ವಾಣಿಜ್ಯ, ಸರ್ಕಾರಿ ಬಳಕೆದಾರರಿಗೆ ಟ್ವಿಟ್ಟರ್‌ನಲ್ಲಿ ಶುಲ್ಕ ಸಾಧ್ಯತೆ: ಮಸ್ಕ್

ಕೋವಿಡ್ ವಕ್ಕರಿಸಿಕೊಳ್ಳುತ್ತಿದ್ದಂತೆಯೇ ದೇಶಾದ್ಯಂತ ಚಿನ್ನದ ಮಾರಾಟದಲ್ಲಿ ಶೇ.80 ರಷ್ಟು ಭಾರೀ ಇಳಿಕೆ ಕಂಡು ಬಂದಿತ್ತು. ಈ ಬಾರಿ ಕೋವಿಡ್ ಹಾವಳಿ ಕಡಿಮೆಯಿರುವುದರಿಂದ ಹಾಗೂ ಹಬ್ಬದ ಪ್ರಯುಕ್ತ ರಜೆ ಇದ್ದಿದ್ದರಿಂದ ಚಿನ್ನ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ. ದೇಶಾದ್ಯಂತ ಒಂದೇ ದಿನ ಬರೋಬ್ಬರಿ 30 ಟನ್ ಚಿನ್ನ ಮಾರಾಟವಾಗಿದೆ.

2 ತಿಂಗಳ ಹಿಂದೆ ಚಿನ್ನದ ಬೆಲೆ 55,000 ದಿಂದ 58,000 ರೂ. ವರೆಗೂ ತಲುಪಿತ್ತು. ಇದೀಗ ಚಿನ್ನದ ಬೆಲೆ 50,000 ರೂ.ಗೆ ಇಳಿಕೆಯಾಗಿರುವುದರಿಂದ ಹಾಗೂ ಇದು ಮದುವೆ ಸಮಾರಂಭಗಳಂತಹ ಸಮಯವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಚಿನ್ನಾಭರಣ ಮಾರಟವಾಗಿದೆ ಎಂದು ಸಿಎಐಟಿ ಕಾರ್ಯದರ್ಶಿ ಪ್ರವೀಣ್ ಖಂಡೇವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಬಿಸಿಲಿನ ತಾಪಕ್ಕೆ 25 ಬಲಿ, 100ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ

ರಾಜ್ಯದಲ್ಲೂ ಭಾರೀ ಮಾರಾಟ:
ಕರ್ನಾಟಕದಲ್ಲೂ ಅಕ್ಷಯ ತೃತೀಯ ಅಂಗವಾಗಿ ಜನರು ಚಿನ್ನಾಭರಣ ಖರೀದಿಗೆ ಮುಗಿಬಿದ್ದಿದ್ದಾರೆ. ಮಂಗಳವಾರ ಒಂದೇ ದಿನ ಸುಮಾರು 1,680 ಕೋಟಿ ರೂ. ವ್ಯವಹಾರ ನಡೆದಿದೆ. ಬೆಂಗಳೂರಿನಲ್ಲಿ 650 ಕೋಟಿ ರೂ. ವ್ಯಾಪಾರ ನಡೆದಿದೆ ಎಂದು ಕರ್ನಾಟಕ ಜ್ಯುವೆಲ್ಲರ್ಸ್ ಫೆಡರೇಷನ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಡಾ. ಜಿ ರಾನಚಾರಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *