ಕಳಸಾ ಬಂಡೂರಿ ಹೋರಾಟಕ್ಕೆ 2 ವರ್ಷ: ಅಮರಣಾಂತ ಉಪವಾಸಕ್ಕೆ ಕುಳಿತ್ರು ರೈತರು

Public TV
1 Min Read

ಗದಗ: ಕಳಸಾ ಬಂಡೂರಿ, ಮಹದಾಯಿ ಹೋರಾಟ ಬರೋಬ್ಬರಿ ಎರಡು ವರ್ಷ ಪೂರೈಸಿದೆ. ಆದರೂ ಉತ್ತರ ಕರ್ನಾಟಕ ಭಾಗಕ್ಕೆ ನೀರು ಸಿಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಮಹದಾಯಿ ಹೋರಾಟಗಾರರು ಮಾಡು ಇಲ್ಲವೇ ಮಡಿ ಎನ್ನುವ ತೀರ್ಮಾನವನ್ನು ತೆಗೆದುಕೊಂಡು ಅಮರಣಾಂತ ಉಪವಾಸಕ್ಕೆ ಧುಮುಕಿದ್ದಾರೆ.

ಹೌದು. ಭಾನುವಾರ ನರಗುಂದ ಪಟ್ಟಣದ ಬಾಬಾಸಾಹೇಬ್ ವೃತ್ತದಿಂದ ಹೋರಾಟ ವೇದಿಕೆಯವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ವ್ಯಕ್ತಿಯೊಬ್ಬರು ಮಹಾತ್ಮಗಾಂಧಿ ವೇಷ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ನಂತರ ಹೋರಾಟ ವೇದಿಕೆಯಲ್ಲಿ ಜಮಾವಣೆಗೊಂಡ ಸಾವಿರಾರು ರೈತರು ರೈತಗೀತೆಗೆ ಹಸಿರು ಶಾಲು ಬೀಸುವ ಮೂಲಕ ಧ್ವನಿಗೂಡಿಸಿದ್ದು ವಿಶೇಷವಾಗಿತ್ತು.

ಸುತ್ತಲಿನ ಸಾವಿರಾರು ಗ್ರಾಮಸ್ಥರು ಆಗಮಿಸಿ ಸಮಾವೇಶವನ್ನು ಬೆಂಬಲಿಸಿದರು. ನಾಡಿನ ಹಲವು ಸಂಘಟನೆ, ಹೋರಾಟಗಾರರು ಪಾಲ್ಗೊಂಡಿದ್ದರು. ಕಳಸಾ ಬಂಡೂರಿ, ಮಹದಾಯಿ ಯೋಜನೆ ಜಾರಿ ಆಗುವವರೆಗೂ ಉಪವಾಸ ಸತ್ಯಾಗ್ರಹಕ್ಕೆ ನಿರ್ಣಯ ಮಂಡಿಸಲಾಯಿತು. ಇನ್ನು ಉಪವಾಸದಿಂದ ಸಾವನ್ನಪ್ಪಿದ್ರೆ ಮಹದಾಯಿ ತೀರದಲ್ಲಿ ಅಂತ್ಯಕ್ರಿಯೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಈ ನಿರ್ಣಯ ನೆರೆದ ಸಾವಿರಾರು ರೈತರಲ್ಲಿ ಮತ್ತಷ್ಟು ಆಕ್ರೋಶದ ಕಿಡಿ ಹೊತ್ತಿಸಿತು.

ಉತ್ತರ ಕರ್ನಾಟಕದ 4 ಜಿಲ್ಲೆ 11 ತಾಲೂಕಿಗೆ ವರವಾಗಬೇಕಿದ್ದ ಯೋಜನೆ ನೆನೆಗುದಿಗೆ ಬಿದ್ದು ಹಲವು ದಶಕವಾಯಿತು. ಎರಡು ವರ್ಷದ ಈ ಹೋರಾಟದಲ್ಲಿ ನೇತೃತ್ವ ವಹಿಸಿದ ವಿರೇಶ್ ಸೊಬರದಮಠ ಸನ್ಯಾಸ ಧೀಕ್ಷೆ ಸ್ವೀಕರಿಸುವ ಮೂಲಕ ಸರ್ಕಾರಗಳ ವಿರುದ್ಧ ಸಾತ್ವಿಕ ಆಕ್ರೋಶ ಹೊರಹಾಕಿದ್ರು. ಇದೀಗ ಮತ್ತೆ ಮಾಡು ಇಲ್ಲವೇ ಮಡಿ ಹೋರಾಟದ ಮೂಲಕ ಸೊಬರದಮಠ ಸರ್ಕಾರಗಳ ವಿರುದ್ಧ ಕಣಕಹಳೆ ಮೊಳಗಿಸಿದ್ದಾರೆ.

ಈ ವೇಳೆ ಶಾಸಕ ಪುಟ್ಟಣ್ಣಯ್ಯ ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಕಿಡಿಕಾರಿದರು. ಏಳು ವರ್ಷದ ನರಗುಂದದ ಬಾಲಕಿ ಶ್ರೇಯಾ ಹಾದಿಮನಿ ಹೋರಾಟ ವೇದಿಕೆಯಲ್ಲಿ ಕಣ್ಣೀರಿಟ್ಟಳು. ಹೋರಾಟ ವೇದಿಕೆಯಲ್ಲಿ ದುಃಖಿತಳಾದ ಶ್ರೇಯಾಗೆ ಹೋರಾಟಗಾರರು ಸಂತೈಸಿದರು. ನರಗುಂದ ಹೋರಾಟದಲ್ಲಿ ಮಹದಾಯಿ, ಕಳಸಾ ಬಂಡೂರಿ ಯೋಜನೆಗಾಗಿ ಸರ್ಕಾರಗಳ ವಿರುದ್ಧ ಬಾಲಕಿ ವಾಗ್ದಾಳಿ ನಡೆಸಿದಳು.

 

 

Share This Article
Leave a Comment

Leave a Reply

Your email address will not be published. Required fields are marked *