ಪವನ್‌ ಖೇರಾ ಬಳಿ 2 ವೋಟರ್‌ ಐಡಿ – ಬಿಜೆಪಿ ಬಾಂಬ್‌, EC ನೋಟಿಸ್‌ ಜಾರಿ

By
2 Min Read

ನವದೆಹಲಿ: ಮತ ಕಳ್ಳತನ (Vote Chori) ಎಸಗುತ್ತಿರುವ ಬಿಜೆಪಿ ಮೇಲೆ ಹೈಡ್ರೋಜನ್‌ ಬಾಂಬ್‌ ಹಾಕಲಾಗುವುದು ಎಂದು ರಾಹುಲ್‌ ಗಾಂಧಿ ಹೇಳಿದ ಮರುದಿನವೇ ಬಿಜೆಪಿ ಈಗ ಕಾಂಗ್ರೆಸ್‌ ವಿರುದ್ಧವೇ ಬಾಂಬ್‌ ಹಾಕಿದೆ.

ರಾಹುಲ್‌ ಗಾಂಧಿ (Rahul Gandhi) ಆಪ್ತ ಪವನ್‌ ಖೇರಾ ಎರಡು ಕಡೆ ವೋಟರ್‌ ಐಡಿ ಹೊಂದಿದ್ದಾರೆ ಎಂದು ಆರೋಪಿಸಿ ಬಿಜೆಪಿ ದಾಖಲೆ ಬಿಡುಗಡೆ ಮಾಡಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ದೂರಿನ ಬೆನ್ನಲ್ಲೇ ಪವನ್ ಖೇರಾ(Pawan Khera) ಅವರಿಗೆ ಚುನಾವಣಾ ಆಯೋಗ (Election Commission) ನೋಟಿಸ್‌ ನೀಡಿ ಶಾಕ್‌ ನೀಡಿದೆ.

ದೆಹಲಿಯಲ್ಲಿ ಎರಡು ಕಡೆ ವೋಟರ್‌ ಐಡಿ ಹೊಂದಿರುವುದಕ್ಕೆ ಚುನಾವಣಾ ಆಯೋಗ ಖೇರಾಗೆ ನೋಟಿಸ್‌ ನೀಡಿದೆ. ಎರಡು ಕಡೆ ವೋಟರ್‌ ಐಡಿ ಹೊಂದಿರುವುದು 1950ರ ಜನಪ್ರತಿನಿಧಿ ಕಾಯ್ದೆಯ ಅಡಿ ಶಿಕ್ಷಾರ್ಹ ಅಪರಾಧ. ಈ ಸಂಬಂಧ ಸೆಪ್ಟೆಂಬರ್ 8 ರ ಸೋಮವಾರ ಬೆಳಿಗ್ಗೆ 11 ಗಂಟೆಯೊಳಗೆ ನೋಟಿಸ್‌ಗೆ ಉತ್ತರಿಸಬೇಕು ಮತ್ತು ಕಾಯ್ದೆಯಡಿ ನಿಮ್ಮ ವಿರುದ್ಧ ಕ್ರಮ ಯಾಕೆ ಕೈಗೊಳ್ಳಬಾರದು ಎಂಬುದನ್ನು ತಿಳಿಸಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಪಕ್ಷ ವಿರೋಧಿ ಚಟುವಟಿಕೆ; ಪುತ್ರಿ ಕವಿತಾಗೆ ಪಕ್ಷದಿಂದ ಗೇಟ್ಪಾಸ್

ನವದೆಹಲಿ ಮತ್ತು ಜಂಗ್ಪುರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಪವನ್ ಖೇರಾ ಹೆಸರಿದೆ ಎಂದು ಬಿಜೆಪಿ ದಾಖಲೆಯನ್ನು ಇರಿಸಿ ಗಂಭೀರ ಆರೋಪ ಮಾಡಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅಮಿತ್‌ ಮಾಳವೀಯ ಎಕ್ಸ್‌ನಲ್ಲಿ ಪವನ್‌ ಖೇರಾ ಎರಡು ವೋಟರ್‌ ಐಡಿ ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಪವನ್ ಖೇರಾ ಎರಡು ಸಕ್ರಿಯ EPIC ಸಂಖ್ಯೆಗಳನ್ನು ಹೇಗೆ ಹೊಂದಿದ್ದಾರೆ? ಅವರು ಹಲವು ಬಾರಿ ಮತ ಚಲಾಯಿಸಿದ್ದಾರೆಯೇ ಎಂಬುದನ್ನು ತನಿಖೆ ಮಾಡುವುದು ಈಗ ಚುನಾವಣಾ ಆಯೋಗದ ಜವಾಬ್ದಾರಿ.  ಇದು ಚುನಾವಣಾ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ.

Share This Article