ಮುಂಬೈ: ನೀರಿನ ಟ್ಯಾಂಕರ್ ಮತ್ತು ಆಟೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 9 ಜನರು ಮೃತಪಟ್ಟ ಘಟನೆ ಮಹಾರಾಷ್ಟ್ರದಲ್ಲಿ ಶುಕ್ರವಾರ ನಡೆದಿದೆ.
ಔರಂಗಾಬಾದ್-ಪೈಥಾನ್ ರಸ್ತೆಯ ಜೆವ್ರೈ ತಾಂಡಾ ಸಮೀಪದಲ್ಲಿ ಬೆಳಿಗ್ಗೆ 6.30 ಗಂಟೆಗೆ ಈ ಘಟನೆ ನಡೆದಿದೆ. ಆಟೋ ಮತ್ತು ನೀರಿನ ಟ್ಯಾಂಕರ್ ಎರಡು ವೇಗವಾಗಿ ಚಲಿಸುತ್ತಿದ್ದು, ಅವು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿಯೇ ಇಬ್ಬರು ಮಕ್ಕಳು ಸೇರಿ 9 ಜನರು ಮೃತಪಟ್ಟಿದ್ದಾರೆ.
ಮೃತರನ್ನು ಶೇಖ್ ಮಕ್ಸೋ (22), ಎಸ್.ತ್ರಯಂಬಕೆ (74), ಶಿವಲಾಲ್ ಸಿಂಗ್ ಠಾಕೂರ್ (84), ಜನಾರ್ದನ್ ಅವಚಾರ್ (49), ರಾಮ್‍ಕುಮಾರ್ ಠಾಕೂರ್ (60), ರಾಮ ಮಹೇಶ್ ಠಾಕೂರ್ (40), ಅನುಜಾ ಅವಚರ್ಮಲ್ (21) ಸೇರಿದಂತೆ 11 ವರ್ಷದ ಬಾಲಕಿ ಹಾಗೂ ನಾಲ್ಕು ವರ್ಷದ ಬಾಲಕ ಎಂದು ಗುರುತಿಸಲಾಗಿದೆ.
ಆಟೋದಲ್ಲಿ ಒಟ್ಟು 11 ಪ್ರಯಾಣಿಸುತ್ತಿದ್ದರು. ನೀರಿನ ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಈ ಕುರಿತು ಚಿಕಲ್ತಾನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.