ಮಂಗನ ಕಾಯಿಲೆಗೆ ಮತ್ತಿಬ್ಬರು ಬಲಿ – ಮಗ ಸತ್ತ ವಾರಕ್ಕೆ ತಾಯಿ ಸಾವು

Public TV
2 Min Read

ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮತ್ತಿಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಈ ಕಾಯಿಲೆಗೆ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ ಆಗಿದೆ.

ಸಾಗರ ತಾಲೂಕು ಅರಲಗೋಡು ಗ್ರಾಮದ ಶ್ವೇತಾ (17) ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಮೃತಪಟ್ಟಿದ್ದು, ಮಧ್ಯಾಹ್ನ ವಾಟೆಮಕ್ಕಿ ಗ್ರಾಮದ ರಾಮಕ್ಕ ಎಂಬ ಮಹಿಳೆ ಮೃತಪಟ್ಟಿದ್ದಾರೆ.

ಕಳೆದ ಒಂದು ವಾರದಿಂದ ಇಬ್ಬರು ಮಂಗನ ಕಾಯಿಲೆಯಿಂದ ಜ್ವರದಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭಿಸಿದ್ದು, ಮೃತ ರಾಮಕ್ಕನ ಮಗ ಮಂಜುನಾಥ್ ಕಳೆದ ವಾರ ಹಿಂದೆಯಷ್ಟೇ ಮಂಗನ ಕಾಯಿಲೆಗೆ ಬಲಿಯಾಗಿದ್ದ. ಪ್ರಮುಖವಾಗಿ ಸಾಗರ ತಾಲೂಕಿನ ಐದು ಜನ ಮಂಗನ ಕಾಯಿಲೆಗೆ ಮೃತಪಟ್ಟಿದ್ದಾರೆ, ತೀರ್ಥಹಳ್ಳಿ ತಾಲೂಕಿನ ಇಬ್ಬರು ಮೃತಪಟ್ಟಿದ್ದರು.

ಜಿಲ್ಲೆಯ ಸಾಗರ, ತೀರ್ಥಹಳ್ಳಿ ತಾಲೂಕಿನ ಐವತ್ತಕ್ಕೂ ಹೆಚ್ಚು ಜನ ಸ್ಥಳೀಯ ಹಾಗೂ ಶಿವಮೊಗ್ಗ, ಮಣಿಪಾಲ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಪ್ರತಿ ವರ್ಷ ಬೇಸಿಗೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಈ ಕಾಯಿಲೆ ಪ್ರಸಕ್ತ ವರ್ಷ ಮುಂಚಿತವಾಗಿಯೇ ಕಾಣಿಸಿಕೊಂಡಿದೆ. ಅಂದಹಾಗೇ ಕಾಡಿನಲ್ಲಿ ಸತ್ತು ಬೀಳುತ್ತಿರುವ ಮಂಗಗಳಿಂದ ಮನುಷ್ಯರಿಗೆ ಈ ಸೋಂಕು ಹರಡುತ್ತಿದ್ದು, ಸೂಕ್ತ ಮುಂಜಾಗ್ರತಾ ವಹಿಸುವಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ವಿಫಲವಾಗಿದೆ. ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಸಾಗರ, ತೀರ್ಥಹಳ್ಳಿ ತಾಲೂಕಿನ ಜನರಲ್ಲಿ ಆತಂಕ ಹೆಚ್ಚಾಗಿದೆ.

ಕ್ಯಾಸಣೂರ್ ಫಾರೆಸ್ಟ್ ಡಿಸೀಸ್ (ಕೆಎಫ್‍ಡಿ) ಅಥವಾ ಮಂಗನ ಕಾಯಿಲೆ ಎಂದು ಇದನ್ನು ಕರೆಯುತ್ತಾರೆ. ಪ್ರತಿ ವರ್ಷ ಈ ಭಾಗದಲ್ಲಿ ಸುಮಾರು 400ಕ್ಕೂ ಹೆಚ್ಚು ಕೆಎಫ್‍ಡಿ ಪ್ರಕರಣಗಳು ಇಲ್ಲಿ ಪತ್ತೆಯಾಗುತ್ತದೆ. ಜ್ವರ, ವಾಂತಿ, ಅತಿಸಾರ ಮತ್ತು ರಕ್ತಸ್ರಾವ ಈ ಕಾಯಿಲೆಯ ಲಕ್ಷಣಗಳಾಗಿದೆ. ಅಂದಹಾಗೇ ಈ ಮಂಗನ ಕಾಯಿಲೆ 1957 ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಕಾಯಿಲೆಗೆ ಕಾರಣವಾದ ವೈರಾಣು ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಕಾಡಿನಲ್ಲಿ ಮೊದಲ ಬಾರಿಗೆ ಗುರುತಿಸಿದ್ದ ಕಾರಣ ಇಕ್ಕೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂದು ಹೆಸರು ನೀಡಲಾಗಿದೆ. ಇದು ಸಾಂಕ್ರಾಮಿಕ ರೋಗವಾಗಿದ್ದು, ಮಂಗಗಳಲ್ಲಿದ್ದ ಉಣ್ಣೆಗಳು ಬಂದು ಮನುಷ್ಯರಿಗೆ ಕಚ್ಚಿದಾಗ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಈ ಸೋಂಕಿನಿಂದ ಮಂಗಗಳು ಸಾಯುತ್ತಿದ್ದ ಕಾರಣ ಇದನ್ನು ಮಂಗನ ಕಾಯಿಲೆ ಎಂದು ಕರೆಯಲಾಗಿತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *