2 ದಿನ ತರಬೇತಿ ಶಿಬಿರ – ಬಿಜೆಪಿ ಸಂಸದರಿಗಿಲ್ಲ ವೀಕೆಂಡ್ ರಜೆ

Public TV
2 Min Read

ನವದೆಹಲಿ: ಕಲಾಪದಲ್ಲಿ ಭಾಗಿಯಾಗಿರುವ ಬಿಜೆಪಿ ಸಂಸದರಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಹಾಜರಾಗಬೇಕೆಂದು ಸೂಚಿಸಲಾಗಿದೆ.

ಆಗಸ್ಟ್ 3 ಮತ್ತು 4 ರಂದು ಬಿಜೆಪಿಯ ಎಲ್ಲ ಸಂಸದರಿಗೆ ಪಕ್ಷದಿಂದ ತರಬೇತಿ ಏರ್ಪಡಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯನಿರ್ವಾಹಕ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಸೇರಿದಂತೆ ವಿವಿಧ ಬಿಜೆಪಿ ಪ್ರಮುಖರು ಸಹ ದೆಹಲಿಯಲ್ಲಿ ನಡೆಯಲಿರುವ ಈ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ.

ಈ ಕುರಿತು ಬಿಜೆಪಿ ಭಾನುವಾರ ಎಲ್ಲ ಸಂಸದರಿಗೆ ತಿಳಿಸಿದ್ದು, ಆ.3 ರಿಂದ ಪ್ರಾರಂಭವಾಗುತ್ತಿರುವ ‘ಅಭ್ಯಾಸ ವರ್ಗ’ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದೆ.

ಪಕ್ಷದ ಸಂಸದೀಯ ಕಾರ್ಯಾಲಯ ಸಹ ಈ ಕುರಿತು ಎಲ್ಲ ಸಂಸದರಿಗೆ ಸಂದೇಶ ರವಾನಿಸಿದ್ದು, ಆ.3 ಮತ್ತು 4ರಂದು ನಡೆಯುತ್ತಿರುವ ‘ಅಭ್ಯಾಸ ವರ್ಗ’ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಯಲ್ಲೇ ಉಳಿದುಕೊಳ್ಳಬೇಕು ಎಂದು ತಿಳಿಸಿದೆ.

ತರಬೇತಿಯಲ್ಲಿ ವಿವಿಧ ಸಮಸ್ಯೆಗಳು ಹಾಗೂ ವಿವಿಧ ವಿಷಯಗಳ ಕುರಿತು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಮಾತನಾಡಲಿದ್ದು, ಇತ್ತೀಚೆಗೆ ರಾಜಕಾರಣಿಗಳ ದುರ್ವರ್ತನೆ ಕುರಿತು ಸಹ ಸಲಹೆ, ಸೂಚನೆ ನೀಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ನಿಗದಿಯಂತೆ ಬಜೆಟ್ ಅಧಿವೇಶನ ಜುಲೈ 17ಕ್ಕೆ ಆರಂಭಗೊಂಡು ಜುಲೈ 26ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಈಗ ಈ ಅಧಿವೇಶನ ಆಗಸ್ಟ್ 7 ರವರೆಗೆ ಮುಂದೂಡಿಕೆಯಾಗಿದೆ.

ಈ ಬಾರಿಯ ಲೋಕಸಭಾ ಕಲಾಪವು ಕಳೆದ 20 ವರ್ಷಗಳಲ್ಲೇ ಅತಿಹೆಚ್ಚು ಪ್ರಮಾಣದ ಉತ್ಪಾದಕತೆಯ ಕಲಾಪವಾಗಿದೆ ಎಂದು ಪಿಆರ್ ಎಸ್ ಶಾಸಕಾಂಗ ಸಂಶೋಧನಾ ಸಂಸ್ಥೆಯ ತಜ್ಞರು ಹೇಳಿದ್ದಾರೆ. 17ನೇ ಲೋಕಸಭೆಯ ಮುಂಗಾರು ಅಧಿವೇಶನವರೆಗೂ ಶೇ.128 ರಷ್ಟು ಪ್ರಮಾಣ ಉತ್ಪಾದಕತೆಯಾಗಿದೆ ಎಂದು ಸಂಶೋಧನಾ ಸಂಸ್ಥೆ ತಿಳಿಸಿದೆ.

ರಾಜ್ಯಸಭೆಯ ಕಲಾಪದ ಉತ್ಪಾದಕತೆಯು ಶೇ.98ರಷ್ಟಿದೆ. ಶಾಸಕಾಂಗದ ಜವಾಬ್ದಾರಿಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಎರಡು ಸಂದರ್ಭಗಳಲ್ಲಿ ಲೋಕಸಭಾ ಸಭಾಪತಿ ಓಂ ಬಿರ್ಲಾ ಅವರು ಮಧ್ಯರಾತ್ರಿವರೆಗೂ ಕಲಾಪ ನಡೆಸಿದ್ದನ್ನು ಪಿಆರ್‍ಎಸ್ ಶ್ಲಾಘಿಸಿದೆ.

ಜುಲೈ 23ರವರೆಗೆ ಒಟ್ಟು 15 ಮಸೂದೆಗಳು ಲೋಕಸಭೆಯಲ್ಲಿ ಪಾಸ್ ಆಗಿತ್ತು. ಈ ಮೂಲಕ ಕಳೆದ 15 ವರ್ಷದಲ್ಲೇ ಅತಿಹೆಚ್ಚು ಮಸೂದೆ ಪಾಸ್ ಆದ ಮೊದಲ ಅಧಿವೇಶನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *