2 ಸಾವಿರ ರೂ. ನೋಟು ರಿಲೀಸ್‌ ಮಾಡಲು ಮೋದಿಗೆ ಇಷ್ಟವಿರಲಿಲ್ಲ

Public TV
1 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ 2 ಸಾವಿರ ರೂ. ನೋಟುಗಳನ್ನು ಚಲಾವಣೆಗೆ ತರಲು ಇಷ್ಟವಿರಲಿಲ್ಲ ಎಂಬ ವಿಚಾರ ಈಗ ಪ್ರಕಟವಾಗಿದೆ.

2016ರ ನವೆಂಬರ್‌ 8 ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ 2 ಸಾವಿರ ರೂ. ನೋಟು ಬಿಡುಗಡೆ ಮಾಡಲು ಮೋದಿಯವರಿಗೆ ಇಷ್ಟವಿರಲಿಲ್ಲ. ಆದರೆ ನೋಟು ನಿಷೇಧ ಚರ್ಚೆಯಲ್ಲಿ ಅಧಿಕಾರಿಗಳ ಸಲಹೆಯನ್ನು ಒಪ್ಪಿದ ಬಳಿಕ ಹೊಸ ನೋಟು ಬಿಡುಗಡೆಗೆ ಸಹಮತ ಸೂಚಿಸಿದರು ಎಂದು ಪ್ರಧಾನಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಬಹಿರಂಗ ಪಡಿಸಿದ್ದಾರೆ.

ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪತ್ರಿಕೆಗೆ ಲೇಖನ ಬರೆದಿರುವ ಅವರು, ಅಪನಗದೀಕರಣ ಸಿದ್ಧತೆಯ ವೇಳೆ 1 ಸಾವಿರ ರೂ. ನೋಟು ನಿಷೇಧಿಸಿದ ಬಳಿಕ 2 ಸಾವಿರ ರೂ. ನೋಟು ಮುದ್ರಿಸಬೇಕೆಂಬ ಸಲಹೆ ಇಷ್ಟವಾಗಿರಲಿಲ್ಲ. ಆದರೆ ಹಣದ ಕೊರತೆ ನೀಗಿಸಲು ಅನಿವಾರ್ಯವಾಗಿ 2 ಸಾವಿರ ರೂ. ಮುದ್ರಿಸಬೇಕೆಂದು ಸಲಹೆ ನೀಡಿದ ಬಳಿಕ ಕೊನೆಗೆ ಮೋದಿ ಒಪ್ಪಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕಳೆದ ವರ್ಷ ಒಂದೇ ಒಂದು 2 ಸಾವಿರ ರೂ. ನೋಟು ಮುದ್ರಣವಾಗಿಲ್ಲ

ಈ ವಿಚಾರದ ಬಗ್ಗೆ ಭಾರೀ ಟೀಕೆ ಕೇಳಿ ಬಂದಿದ್ದರೂ ಮೋದಿಯವರು ಅಧಿಕಾರಿಗಳನ್ನು ದೂಷಿಸದೇ ಸ್ವತಃ ತಾವೇ ಹೊಣೆಯನ್ನು ಹೊತ್ತುಕೊಂಡಿದ್ದರು. ಕೆಲವು ವಿಚಾರಗಳ ಬಗ್ಗೆ ಸಮ್ಮತಿ ಇರದಿದ್ದರೂ ಜೊತೆಗಾರರು ನೀಡಿದ ಸಲಹೆಯನ್ನು ಒಪ್ಪಿಕೊಳ್ಳುವ ಗುಣ ಮೋದಿಯವರಲ್ಲಿದೆ ಎಂದು ಬರೆದುಕೊಂಡಿದ್ದಾರೆ.

ಕಪ್ಪುಹಣ ತಡೆಗಟ್ಟಲು ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಬ್ರೇಕ್‌ ಹಾಕಲು 1 ಸಾವಿರ ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಐತಿಹಾಸಿಕಾ ತೀರ್ಮಾನವನ್ನು ನರೇಂದ್ರ ಮೋದಿ ಕೈಗೊಂಡಿದ್ದರು. ಆದರೆ 2 ಸಾವಿರ ರೂ. ನೋಟು ಬಿಡುಗಡೆ ಮಾಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ‌ ಈ ನಿರ್ಧಾರದಿಂದ ಕಪ್ಪು ಹಣ ಸಂಗ್ರಹ ಮಾಡುವುದು ಸುಲಭ ಎಂದು ಪ್ರತಿ ಪಕ್ಷಗಳು ಮೋದಿ ನಿರ್ಧಾರವನ್ನು ಟೀಕಿಸಿದ್ದವು.

Share This Article
Leave a Comment

Leave a Reply

Your email address will not be published. Required fields are marked *