ಬೆಂಗಳೂರು: ಬೆಳ್ಳಂಬೆಳಗ್ಗೆ ಪೊಲೀಸರು ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಕೆಜಿ ಹಳ್ಳಿ ಪೊಲೀಸರು ರೌಡಿಶೀಟರ್ ಮೇಲೆ ಫೈರಿಂಗ್ ಮಾಡಿದ್ದಾರೆ. ಆರೋಪಿ ಅನೀಫ್ ಅಹಮದ್ ಗುಂಡೇಟು ತಿಂದ ರೌಡಿಶೀಟರ್. ಆರೋಪಿ ಕೊಲೆ, ಕೊಲೆ ಯತ್ನ ಮತ್ತು ರಾಬರಿ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದನು.
ಕಳೆದ ಎರಡು ವರ್ಷದಿಂದ ಪೊಲೀಸರ ಕೈಗೆ ಸಿಗದೆ ಆರೋಪಿ ರೌಡಿಶೀಟರ್ ತಪ್ಪಿಸಿಕೊಂಡಿದ್ದನು. ಮಂಗಳವಾರ ತಡರಾತ್ರಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಲು ಹೋಗಿದ್ದಾರೆ. ಆಗ ಆರೋಪಿ ಅಹಮದ್‍ನನ್ನು ಸೆರೆಹಿಡಿಯಲು ಯತ್ನಿಸಿದ ವೇಳೆ ಇಬ್ಬರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಆರೋಪಿ ಕಾಲಿಗೆ ಕೆಜಿ ಹಳ್ಳಿ ಪೊಲೀಸರು ಗುಂಡು ಹಾರಿಸಿದ್ದಾರೆ.
ಸದ್ಯಕ್ಕೆ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈಗಾಗಲೇ ಆರೋಪಿ ವಿರುದ್ಧ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.