2 ದಿನ ಸೋಶಿಯಲ್ ಮೀಡಿಯಾ ಓಪನ್ ಮಾಡಲು ಹಿಂಜರಿದೆ: ಅನುಶ್ರೀ

Public TV
2 Min Read

ಬೆಂಗಳೂರು: ಈ ಎರಡು ದಿನ ಸೋಶಿಯಲ್ ಮೀಡಿಯಾ ಓಪನ್ ಮಾಡಲು ಹಿಂಜರಿದೆ. ನ್ಯೂಸ್ ನೋಡಲು ಅಂಜಿದೆ ಎಂದು ಕನ್ನಡದ ನಟಿ ಮತ್ತು ನಿರೂಪಕಿ ಅನುಶ್ರೀ ಅವರು ಹೇಳಿದ್ದಾರೆ.

ಹೃದಯಾಘಾತದಿಂದ ಭಾನುವಾರ ಸಾವನ್ನಪ್ಪಿದ ನಟ ಚಿರಂಜೀವಿ ಸರ್ಜಾ ಅವರ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಅನುಶ್ರೀ, ಚಿರು ಸಾವಿನ ನಂತರ ನನಗೆ ಸೋಶಿಯಲ್ ಮೀಡಿಯಾ ನೋಡಲು ಆಗುತ್ತಿರಲಿಲ್ಲ. ನ್ಯೂಸ್ ಕೂಡ ನೋಡಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಚಿರು ಸ್ವಭಾವದ ಬಗ್ಗೆ ಮಾತನಾಡಿದ್ದಾರೆ.

https://www.instagram.com/p/CBMsVaLHTYL/

ಚಿರು ವಿಚಾರವಾಗಿ ತಮ್ಮ ಇನ್‍ಸ್ಟಾದಲ್ಲಿ ಬರೆದುಕೊಂಡಿರುವ ಅನುಶ್ರೀ, ಈ ಎರಡು ದಿನ ಸೋಶಿಯಲ್ ಮೀಡಿಯಾ ಓಪನ್ ಮಾಡಲು ಹಿಂಜರಿದೆ. ನ್ಯೂಸ್ ನೋಡಲು ಅಂಜಿದೆ. ಕಾರಣ ಚಿರ ನಿದ್ರೆಗೆ ಜಾರಿದ ಚಿರು ನೋಡಲು ಆಗದೆ. ದೇವರ ಆಟ ಬಲ್ಲವರಾರು. ಹೌದು ಆದರೆ ಈ ಆಟಗಾರ ಬಹಳ ಬೇಗ ಅಗಲಿದ. ಸದಾ ನಗುವ ನಗಿಸುವ, ಕಿಂಚಿತ್ತೂ ಬೇರೆಯವರ ಬಗ್ಗೆ ಅಸೂಯೆ ಪಡದ ಚಿರುವನ್ನು ಆ ಬಾಕ್ಸ್ ನಲ್ಲಿ ನೋಡಿದಾಗ ವಿವರಿಸಲಾಗದ ಸಂಕಟ ಎಂದು ಬರೆದುಕೊಂಡಿದ್ದಾರೆ.

ಜೊತೆಗೆ ಈಗ ಎಲ್ಲೆಡೆ ಹಾಗೆ ಮಾಡಿದ್ದರೆ ಹೀಗೆ ಆಗುತಿತ್ತು ಹೀಗೆ ಮಾಡಬೇಕಿತ್ತು ಅನ್ನೋ ನೂರಾರು ಊಹಾಪೋಹಗಳು. ಆದರೆ ಅವನನ್ನು ಅರಿತವರು ಈ ಭಾವಚಿತ್ರದಲ್ಲಿರೋ ಗೆಳೆಯರೆಲ್ಲರಿಗೂ ಗೊತ್ತು ಆತ ಎಷ್ಟು ಕೂಲ್ ಹುಡುಗ ಅಂತ. ಯಾವ ಕಾರಣಗಳು ಅವನನ್ನು ಮತ್ತೆ ತರಲು ಸಾಧ್ಯವೇ? ಅವನ ಆತ್ಮಕ್ಕೆ ಶಾಂತಿ ಸಿಗಲಿ. ಮೇಘನಾ ಹಾಗೂ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಆ ದೇವರು ಧೈರ್ಯ ಕೊಡಲಿ. ದೇವರೇ ಇನ್ನೆಂದು ಇಂತ ಸ್ನೇಹ ಜೀವಿಯನ್ನ ಇಷ್ಟು ಬೇಗ ಕರೆಯಬೇಡ ಎಂದು ನೋವಿನಲ್ಲಿ ಹೇಳಿದ್ದಾರೆ.

ಭಾನುವಾರ ಮಧ್ಯಾಹ್ನದ ವೇಳೆಯಲ್ಲೂ ಚೆನ್ನಾಗಿದ್ದ ಚಿರು 2 ಗಂಟೆಯ ಸಮಯಕ್ಕೆ ಉಸಿರಾಟದ ತೊಂದರೆ ಮತ್ತು ಎದೆನೋವು ಎಂದು ಮನೆಯಲ್ಲಿ ಕುಸಿದು ಬಿದ್ದಿದ್ದರು. ಅವರನ್ನು ತಕ್ಷಣ ಅಪೊಲೋ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ವೈದ್ಯರು ಎಷ್ಟೇ ಪ್ರಯತ್ನಿಸಿದ್ದರು ಚಿರು ಚಿಕಿತ್ಸೆಗೆ ಸ್ಪಂದಿಸಿರಲ್ಲಿ. ಹೀಗಾಗಿ 3.48ರ ಸುಮಾರಿಗೆ ಚಿರು ಇಹಲೋಕ ತ್ಯಜಿಸಿದ್ದರು. ರಾಮನಗರದ ಧ್ರುವ ಸರ್ಜಾ ತೋಟದ ಮನೆಯಲ್ಲಿ ಸೋಮವಾರ ಮಣ್ಣಲ್ಲಿ ಮಣ್ಣಾಗಿ ಹೋದರು.

ತನ್ನ 39ನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳಿದ ಚಿರಂಜೀವಿ ಸರ್ಜಾ ಅವರ ಸಾವಿಗೆ ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿತ್ತು. ಚಂದವನದ ಹಿರಿಯ-ಕಿರಿಯ ಕಲಾವಿದರೆಲ್ಲ ಯುವ ಸಾಮ್ರಾಟನ ಸಾವಿಗೆ ಸಂತಾಪ ಸೂಚಿಸಿದ್ದರು. ಜೊತೆಗೆ ಬೇರೆ ಭಾಷೆಯ ಕಲಾವಿದರೂ ಕೂಡ ಚಿರು ಸಾವಿಗೆ ಮರುಗಿದ್ದರು. ಸ್ಯಾಂಡಲ್‍ವುಡ್‍ನಲ್ಲಿ 22ಕ್ಕೂ ಅಧಿಕ ಚಿತ್ರದಲ್ಲಿ ನಟಿಸಿ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿದ್ದ ಚಿರು ವಿಧಿಯಾಟಕ್ಕೆ ಸೋತು ಬಾರದ ಲೋಕಕ್ಕೆ ತೆರಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *