2 ತಿಂಗಳಲ್ಲಿ 10 ಬಾರಿ ಕಂಪಿಸಿದ ಭೂಮಿ – ರಾಷ್ಟ್ರ ರಾಜಧಾನಿ ಜನರಲ್ಲಿ ಹೆಚ್ಚಿದ ಆತಂಕ

Public TV
1 Min Read

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಹತ್ತು ಬಾರಿ ಭೂಮಿ ಕಂಪಿಸಿದ್ದು ಕೊರೊನಾ ಆತಂಕದಲ್ಲಿರುವ ಜನರ ಭಯ ದುಪ್ಪಟ್ಟಾಗಿದೆ.

ಬುಧವಾರ ರಾತ್ರಿ 10.40ರ ಸುಮಾರು ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.2ರಷ್ಟು ದಾಖಲಾಗಿದೆ. ಈ ಕಂಪನವೂ ಒಳಗೊಂಡು ದೆಹಲಿ ಸೇರಿದಂತೆ ಎನ್‍ಸಿಆರ್ ಭಾಗದಲ್ಲಿ ಏಪ್ರಿಲ್ 12ರಿಂದ ಸಂಭಸುತ್ತಿರುವ ಹತ್ತನೇ ಭೂಕಂಪವಾಗಿದೆ.

ಈವರೆಗೂ ಸಂಭವಿಸುವ 10 ಲಘು ಕಂಪನಗಳ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.2ರಿಂದ 4.5ರಷ್ಟು ದಾಖಲಾಗಿದೆ. ಈ ರೀತಿಯ ಲಘು ಕಂಪನಗಳು ಮುಂದೆ ಭಾರೀ ಕಂಪನದ ಮುನ್ಸೂಚನೆ ಎಂದು ಭೂಗರ್ಭಶಾಸ್ತ್ರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಕಂಪನಗಳು ಭೂಮಿಯ ಐದು ಕಿಲೋ ಮೀಟರ್ ವ್ಯಾಪ್ತಿಯ ಆಳದಲ್ಲಿ ದಾಖಲಾಗಿವೆ. ದೆಹಲಿ ಮತ್ತು ಸುತ್ತಮುತ್ತ ಭೂಮಿಯ ಮೇಲ್ಮೈನಲ್ಲಿ ಅನೇಕ ದೋಷಗಳಿವೆ. ಈ ದೋಷಗಳು ಭೂಕಂಪಕ್ಕೆ ಕಾರಣ ಆಗುತ್ತಿರಬಹುದು. ಈ ಬಗ್ಗೆ ಅರಿಯಲು ಹವಾಮಾನ ಕೇಂದ್ರದಲ್ಲಿರುವ ದಾಖಲೆಗಳು ಹಾಗೂ ಈ ಕುರಿತ ಇದುವರೆಗಿನ ಸಂಶೋಧನೆಗಳನ್ನು ಪರಿಶೀಲಿಸಬೇಕಿದೆ ಎಂದು ಹವಾಮಾನ ಇಲಾಖೆಯ ಭೂಕಂಪಶಾಸ್ತ್ರಜ್ಞ ಎ.ಪಿ. ಪಾಂಡೆ ಹೇಳಿದ್ದಾರೆ.

ಸುಮಾರು ಎರಡು ಕೋಟಿ ಜನಸಂಖ್ಯೆ ಇರುವ ಈ ನಗರದಲ್ಲಿ ವಸತಿ ಸಮುಚ್ಛಯಗಳು ಹಾಗೂ ವಾಸ ಸ್ಥಳಗಳ ನಿರ್ಮಾಣ ಹಂತದಲ್ಲಿ ಭೂಕಂಪ ತಡೆ ನಿಯಮ ಪಾಲಿಸಿರುವುದು ಅನುಮಾನ. 6 ರಿಂದ 8ರ ತೀವ್ರತೆಯ ಕಂಪನ ಸಂಭವಿಸಿದರೆ ಕಟ್ಟಡಗಳು ನೆಲಸಮವಾಗುವ ಸಾಧ್ಯತೆಗಳೇ ಹೆಚ್ಚು ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *