2 ಗಂಟೆಗೆ ಮೊದಲು ಚೆಕ್ ಇನ್, ಕ್ಯಾಬಿನ್ ಲಗೇಜ್ ಇಲ್ಲ – ವಿಮಾನ ಪ್ರಯಾಣಕ್ಕೂ ಮುನ್ನ ಓದಿ

Public TV
3 Min Read

ನವದೆಹಲಿ: ಕೋವಿಡ್ 19 ಬಗ್ಗೆ ಸಂಬಂಧಿಸಿದ ಪ್ರಶ್ನಾವಳಿ, ಕ್ಯಾಬಿನ್ ಲಗೇಜ್ ತಗೆದುಕೊಂಡು ಹೋಗುವಂತಿಲ್ಲ, ಆರೋಗ್ಯ ಸೇತು ಅಪ್ಲಿಕೇಶನ್ ಬಳಕೆ ಜೊತೆಗೆ ವಿಮಾನ ಪ್ರಯಾಣಿಸುವ 2 ಗಂಟೆಯ ಮೊದಲು ಚೆಕ್ ಇನ್ – ಇದು ಲಾಕ್‍ಡೌನ್ ತೆರವಾದ ಬಳಿಕ ವಿಮಾನ ಪ್ರಯಾಣಿಕರು ಅನುಸರಿಸಬೇಕಾದ ಕ್ರಮಗಳು.

ಕೋವಿಡ್ 19 ನಿಂದಾಗಿ ಮಾರ್ಚ್ 25ರಿಂದ ಪ್ರಯಾಣಿಕ ವಿಮಾನ ಹಾರಾಟ ಸ್ಥಗಿತಗೊಂಡಿದೆ. ಈ ನಡುವೆ ದೇಶೀಯ ವಿಮಾನಗಳ ಹಾರಾಟಕ್ಕೆ ವಿಮಾನಯಾನ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಅಧಿಕೃತವಾಗಿ ಯಾವ ದಿನದಿಂದ ಆರಂಭವಾಗಲಿದೆ ಎನ್ನುವುದು ತಿಳಿದಿಲ್ಲವಾದರೂ ಈಗಲೇ ಸಚಿವಾಲಯ ಪ್ರಯಾಣಿಕರು ಅನುಸರಿಸಲೇಬೇಕಾದ ನಿಯಮಗಳನ್ನು ಪಟ್ಟಿ ಮಾಡಿದೆ.

ಸಚಿವಾಲಯ ಅನುಸರಿಸಬೇಕಾದ ಕ್ರಮಗಳ ಕರಡನ್ನು ಸಿದ್ಧಪಡಿಸಿದ್ದು, ವಿಮಾನ ಹಾರಾಟಕ್ಕೆ ಅನುಮತಿ ಸಿಕ್ಕಿದರೆ ಪ್ರಯಾಣಿಕರು ವಿಮಾನಯಾನ ಸಚಿವಾಲಯ ಸೂಚಿಸಿದ ಮಾರ್ಗಸೂಚಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.

ವಿಮಾನಯಾನ ಸಚಿವಾಲಯ ವಿಮಾನ ಸೇವೆ ನೀಡುವ ಕಂಪನಿಗಳು ಮತ್ತು ಕೋವಿಡ್ 19 ತಜ್ಞರ ಜೊತೆ ಚರ್ಚೆ ನಡೆಸಿ ಈ ನಿಯಮಗಳನ್ನು ರೂಪಿಸಿದೆ ಎಂದು ಮೂಲಗಳನ್ನು ಆಧಾರಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕರಡು ಪ್ರತಿಯಲ್ಲಿ ಏನಿದೆ?
ಆರೋಗ್ಯ ಸೇತು ಅಪ್ಲಿಕೇಶನ್ ನಲ್ಲಿ ಹಸಿರು ಸ್ಟೇಟಸ್ ಇರಬೇಕು. ಇದರ ಜೊತೆಯಲ್ಲಿ ವಿಮಾನ ಪ್ರವೇಶ ಮತ್ತು ನಿರ್ಗಮನ ದ್ವಾರದಲ್ಲಿ ದೇಹದ ಉಷ್ಣಾಂಶ ಪರೀಕ್ಷೆಗೆ ಒಳಪಡಬೇಕು.

ಪ್ರಯಾಣಿಕರಿಗೆ ಮಾತ್ರ ಈ ನಿಯಮ ಅನ್ವಯವಾಗುವುದಿಲ್ಲ. ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿ, ನಿಲ್ದಾಣದಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಗೆ ಅನ್ವಯವಾಗುತ್ತದೆ. ಅಷ್ಟೇ ಅಲ್ಲದೇ ಸಿಬ್ಬಂದಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸಬೇಕು.

ಪ್ರಯಾಣದ ವೇಳೆ ಪ್ರಯಾಣಿಕರಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆಯಾದರೆ ಅವರ ಜಾಗವನ್ನು ಬದಲಿಸಬೇಕು. ಅನಾರೋಗ್ಯ ಪೀಡಿತ ಪ್ರಯಾಣಿಕರಿಗಾಗಿ ವಿಮಾನದಲ್ಲಿ ಮೂರು ಸಾಲನ್ನು ಖಾಲಿ ಬಿಡಬೇಕು. ಒಂದು ಸಾಲಿನಲ್ಲಿ ಮೂರು ಆಸನಗಳಿದ್ದರೆ ನಡುವಿನ ಆಸನವನ್ನು ಸಾಮಾಜಿಕ ಅಂತರಕ್ಕಾಗಿ ಖಾಲಿ ಇಡಬೇಕು.

ವಿಮಾನ ಪ್ರಯಾಣಕ್ಕೂ ಮುನ್ನ ಎಲ್ಲ ಪ್ರಯಾಣಿಕರಿಗೆ ಪ್ರಶ್ನಾವಳಿಯನ್ನು ನೀಡಲಾಗುತ್ತದೆ. ಈ ಪ್ರಶ್ನಾವಳಿಯಲ್ಲಿ ಕೋವಿಡ್ 19, ಕ್ವಾರಂಟೈನ್ ಸೇರಿದಂತೆ ಒಂದು ತಿಂಗಳ ಹಿಂದಿನ ಮಾಹಿತಿಯನ್ನು ನೀಡಬೇಕಾಗುತ್ತದೆ.

 

ಒಂದು ವೇಳೆ ಒಂದು ತಿಂಗಳ ಹಿಂದೆ ಪ್ರಯಾಣಿಕರು ಕ್ವಾರಂಟೈನ್ ಆಗಿದ್ದರೆ ಅವರನ್ನು ಪ್ರತ್ಯೇಕವಾಗಿರುವ ಭದ್ರತಾ ಪರಿಶೀಲನಾ ಘಟಕದಲ್ಲಿ ಚೆಕ್ ಮಾಡಲಾಗುತ್ತದೆ.

ವಿಮಾನ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಮುಟ್ಟವಂತಿಲ್ಲ. ಸಾಮಾಜಿಕ ಅಂತರವನ್ನು ಕಾಪಾಡಬೇಕು ಎಂದು ಸೂಚಿಸಲಾಗಿದೆ. ಇದರ ಜೊತೆಗೆ ಕೋವಿಡ್ 19 ರೋಗ ಯಾವೆಲ್ಲ ರೀತಿಯಾಗಿ ಹರಡುತ್ತದೆ ಎಂಬ ವಿಚಾರವನ್ನು ಪ್ರಯಾಣಿಕರು ತಿಳಿದುಕೊಂಡಿರಬೇಕಾಗುತ್ತದೆ.

 

ಕುಳಿತುಕೊಳ್ಳುವ ಆಸನದ ಮೇಲೆ ಲಗೇಜ್ ಇಡಲು ಅನುಮತಿ ಇಲ್ಲ. ಬ್ಯಾಗೇಜ್ ಗೆ ಮಿತಿಯನ್ನು ಹೇರಲಾಗುತ್ತದೆ. ಕೋವಿಡ್ 19 ಪ್ರಶ್ನಾವಳಿ, ಆರೋಗ್ಯ ಸೇತು ಆ್ಯಪ್‍ನಲ್ಲಿ ನೋಂದಣಿ ಜೊತೆ ನೋಂದಣಿಯಾಗಿರುವ ಟ್ಯಾಕ್ಸಿಯನ್ನು ಬಳಕೆ ಮಾಡಬೇಕೆಂದು ಸೂಚಿಸಲಾಗಿದೆ.

ಪ್ರವೇಶ ದ್ವಾರದಲ್ಲಿ ತಪಾಸಣೆ, ಪ್ರಶ್ನಾವಳಿಗೆ ಉತ್ತರ ಜೊತೆಗೆ ಪ್ರವೇಶದಲ್ಲಿ ರಶ್ ಆಗದೇ ಇರಲು ಪ್ರಯಾಣದ ಅವಧಿಯ ಕನಿಷ್ಟ ಎರಡು ಗಂಟೆಗೂ ಮೊದಲು ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು.

 

ಒಂದು ವೇಳೆ ಪರೀಕ್ಷೆಯ ವೇಳೆ ದೇಹದಲ್ಲಿ ಹೆಚ್ಚಿನ ತಾಪಮಾನ ಕಂಡು ಬಂದಲ್ಲಿ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗುವುದಿಲ್ಲ. ಅಷ್ಟೇ ಅಲ್ಲದೇ ವಿಮಾನಯಾನ ಕಂಪನಿಗಳು ಈ ಪ್ರಯಾಣಿಕರ ದಾಖಲೆಯನ್ನು ಇಟ್ಟುಕೊಳ್ಳುತ್ತವೆ.

ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲಿ ಐಸೋಲೇಷನ್ ವಲಯ ಇರಬೇಕು. ಪ್ರಯಾಣಿಕರಲ್ಲಿ ಯಾರಿಗಾದರೂ ಸೋಂಕಿನ ಲಕ್ಷಣ ಕಂಡು ಬಂದರೆ ಟರ್ಮಿನಲ್ ನಲ್ಲಿ ಆರೋಗ್ಯ ಪರೀಕ್ಷಿಸುವ ಕೇಂದ್ರಗಳು ಸಹಾಯ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಸಹಕಾರ ನೀಡಬೇಕು.

ವಿಮಾನ ನಿಲ್ದಾಣದಲ್ಲಿರುವ ಲಿಫ್ಟ್, ಎಸ್ಕಲೇಟರ್ಸ್, ಚಯರ್ ಗಳು, ಕುಳಿತುಕೊಳ್ಳುವ ಜಾಗದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಪಾಲಿಸಬೇಕು. ಟರ್ಮಿನಲ್ ಒಳಗಡೆ ಓಡಾಡುವ ಜಾಗದಲ್ಲಿ ಅಲ್ಕೋಹಾಲ್ ಮಿಶ್ರಣ ಇರುವ ಹ್ಯಾಂಡ್ ವಾಶ್ ಮತ್ತು ಸ್ಯಾನಿಟೈಸರ್ ಇಡಬೇಕು.

Share This Article
Leave a Comment

Leave a Reply

Your email address will not be published. Required fields are marked *