2ನೇ ಸಂಡೇ ಲಾಕ್‍ಡೌನ್ ಬೆಳಗ್ಗೆ ಸಕ್ಸಸ್- ಮಧ್ಯಾಹ್ನದ ನಂತರ ರಸ್ತೆಗಿಳಿದ ವಾಹನಗಳು

Public TV
1 Min Read

ಬೆಂಗಳೂರು: ಕೊರೊನಾ ಕಂಟ್ರೋಲ್‍ಗೆ ಸಂಡೇ ಲಾಕ್‍ಡೌನ್ ಏನೋ ಜಾರಿಯಾಗಿದೆ. ಆದರೆ ನಮ್ ಬೆಂಗಳೂರಿಗರಿಗೆ ಮೊದಲ ಸಂಡೇ ಲಾಕ್‍ಡೌನ್‍ನಲ್ಲಿದ್ದ ಜೋಶ್ ಎರಡನೇ ಸಂಡೇ ಲಾಕ್‍ಡೌನ್‍ನಲ್ಲಿ ಕಾಣಿಸಿಲ್ಲ. ಇಂದು ಬೆಳಗ್ಗೆಯಿಂದ ಬೆಂಗಳೂರಿನ ರಸ್ತೆಗಳು ಬಿಕೋ ಅಂತಿತ್ತು. ಪ್ರಮುಖ ರಸ್ತೆಗಳೆಲ್ಲಾ ಬಂದ್ ಆಗಿತ್ತು. ಅಲ್ಲೊಂದು ಇಲ್ಲೊಂದು ವಾಹನಗಳು ರಸ್ತೆಗಿಳಿದಿತ್ತು. ಆದ್ರೆ ಮಧ್ಯಾಹ್ನದ ನಂತರ ಒಂದೊಂದಾಗಿ ವಾಹನಗಳು ರಸ್ತೆಗೆ ಇಳಿಯಲಾರಂಭಿಸಿದವು.

ಸೆಕೆಂಡ್ ಲಾಕ್‍ಡೌನ್ ಹಿನ್ನೆಲೆ ಗೃಹಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಕಮೀಷನರ್ ಭಾಸ್ಕರ್ ರಾವ್ ಸಿಟಿ ರೌಂಡ್ಸ್ ಹಾಕಿದರು. ಕೆ.ಆರ್.ಮಾರ್ಕೆಟ್, ಸಿರ್ಸಿ ಸರ್ಕಲ್, ಮೆಜೆಸ್ಟಿಕ್, ಮಲ್ಲೇಶ್ವರಂ, ಯಶವಂತಪುರ, ಆರ್‍ಎಂಸಿ ಯಾರ್ಡ್, ಅಂಚೆಪಾಳ್ಯ ಬಾರ್ಡರ್‍ವರೆಗೆ ನಗರ ಪ್ರದಕ್ಷಿಣೆ ಹಾಕಿದರು. ಈ ವೇಳೆ ಮಾತನಾಡಿದ ಸಚಿವರು, ಜನರು ಸರ್ಕಾರದ ನಿರ್ಧಾರಕ್ಕೆ ಸ್ವಯಂ ಪ್ರೇರಿತವಾಗಿ ಮನೆಯಲ್ಲಿರೋ ಮೂಲಕ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಸದಾ ವಾಹನಗಳಿಂದ ತುಂಬಿರೋ ತುಮಕೂರು ರಸ್ತೆ ಇಂದು ಸಂಪೂರ್ಣ ಸ್ತಬ್ಧವಾಗಿತ್ತು. ಬೆರೆಳೆಣಿಕೆಯಷ್ಟು ವಾಹನಗಳ ಸಂಚಾರ ಬಿಟ್ಟು ಬಹುತೇಕ ರಸ್ತೆ ಖಾಲಿ ಖಾಲಿ ಹೊಡೆಯುತ್ತಿದೆ. ಸುಜಾತ ಥಿಯೇಟರ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿತ್ತು.

ಹೊಟೇಲ್‍ಗಳಲ್ಲಿ ಪಾರ್ಸಲ್ ಗೆ ಅವಕಾಶ ಇದ್ರೂ ಸಂಡೇ ಲಾಕ್‍ಡೌನ್‍ನಿಂದ ನಷ್ಟದ ಭೀತಿಯಿಂದ ಬೆಂಗಳೂರಿನ ಹಲವು ಹೋಟೆಲ್‍ಗಳು ಬಂದ್ ಆಗಿದ್ದವು. ಚಾಮರಾಜಪೇಟೆ, ಬಸವನಗುಡಿ, ಬನಶಂಕರಿ, ತ್ಯಾಗರಾಜ ನಗರ, ಲಾಲ್ ಬಾಗ್ ವೆಸ್ಟ್ ಗೇಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೊಟೇಲ್ ಗಳು ಬಂದ್ ಆಗಿತ್ತು. ಮತ್ತೊಂದೆಡೆ ಪೊಲೀಸರು ಅಲ್ಲಲ್ಲಿ ವಾಹನಗಳ ತಪಾಸಣೆ ನಡೆಸಿದ್ರು. ಸಂಡೇ ಲಾಕ್‍ಡೌನ್ ಇದ್ದರೂ ಕಬ್ಬನ್ ಪಾರ್ಕ್‍ನಲ್ಲಿ ವಾಕಿಂಗ್ ಮಾಡೋರ ಸಂಖ್ಯೆಯೇನು ಕಡಿಮೆಯಿರಲಿಲ್ಲ.

ಮಧ್ಯಾಹ್ನದವರಗೆ ಬೆಂಗಳೂರಿಗರು ಸಂಡೇ ಲಾಕ್‍ಡೌನ್‍ನ್ನು ಪಾಲಿಸಿದ್ರು. ಆದ್ರೆ ಮಧ್ಯಾಹ್ನ 3 ಗಂಟೆ ನಂತರ ವಾಹನಗಳೆಲ್ಲಾ ರಸ್ತೆಗಿಳಿದಿರೋದು ಕಂಡುಬಂತು. ಚಾಲುಕ್ಯ ಸರ್ಕಲ್, ಇಂಡಿಯನ್ ಎಕ್ಸ್ ಪ್ರೆಸ್ ಸರ್ಕಲ್, ರೇಸ್‍ಕೋರ್ಸ್ ರಸ್ತೆ, ಪ್ಯಾಲೆಸ್ ರಸ್ತೆಯಲ್ಲಿ ಭರ್ಜರಿ ವಾಹನಗಳ ಓಡಾಟವಿತ್ತು. ಒಟ್ಟಿನಲ್ಲಿ ಜನರೇ ಸ್ವಯಂ ನಿರ್ಬಂಧ ಹಾಕೊಂಡ್ರೆ ಬೆಂಗಳೂರಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಆಗೋದರಲ್ಲಿ ಅನುಮಾನವಿಲ್ಲ.

Share This Article
Leave a Comment

Leave a Reply

Your email address will not be published. Required fields are marked *