19ರ ಯುವತಿ ಜೊತೆ 35 ವರ್ಷದ ಶಾಸಕ ಮದುವೆ – ವಿವಾದ ಎಬ್ಬಿಸಿದ ವಿವಾಹ

Public TV
2 Min Read

– ಮಂಟಪಕ್ಕೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಂದೆ ಬೆದರಿಕೆ
– ನನಗೆ ಜಾತಿ ಸಮಸ್ಯೆ ಇಲ್ಲವೆಂದ ಹುಡುಗಿಯ ತಂದೆ

ಚೆನ್ನೈ: ತಮಿಳುನಾಡಿದ ಕಲ್ಲಕುರಿಚಿ ಎಐಎಡಿಎಂಕೆಯ 35 ವರ್ಷದ ಶಾಸಕ ಪ್ರಭು 19 ವರ್ಷದ ಸೌಂದರ್ಯ ಎಂಬಾಕೆ ಜೊತೆ ಮದುವೆಯಾಗಿದ್ದಾನೆ. ಇದೀಗ ಈ ವಿವಾಹ ಸುದ್ದಿಯೂ ತಮಿಳುನಾಡಿನಾದ್ಯಂತ ಕಾಡ್ಗಿಚ್ಚಿನಂತೆ ಹರಡಿದೆ.

ಇದೊಂದು ಅಂತರ್ಜಾತಿ ವಿವಾಹವಾಗಿದ್ದು, ವಧುವಿನ ತಂದೆ ಎಸ್.ಸ್ವಾಮಿನಾಥನ್ ಮದುವೆ ದಿನವೇ ವಧು-ವರರ ಮುಂದೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಈ ವಿವಾಹ ಭಾರೀ ವಿವಾದ ಸೃಷ್ಟಿಸಿದೆ. ಇವರ ಮದುವೆ ಅಕ್ಟೋಬರ್ 5 ಅಂದರೆ ಸೋಮವಾರ ನಡೆದಿದೆ.

ಏನಿದು ಪ್ರಕರಣ?
ಪ್ರಭು ಮತ್ತು ಸೌಂದರ್ಯ ಇಬ್ಬರೂ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ತ್ಯಾಗದುರುಗಂ ನಿವಾಸಿಗಳು. ವಧು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಪ್ರಭು ಬಿ.ಟೆಕ್ ಪದವೀಧರ. ಸೋಮವಾರ ಬೆಳಗ್ಗೆ ಪ್ರಭು ಮನೆಯಲ್ಲಿ ಮದುವೆ ನಡೆಯುತ್ತಿತ್ತು. ಮದುವೆಗೆ ಸೌಂದರ್ಯ ತಂದೆ ಸ್ವಾಮಿನಾಥನ್ ಆಗಮಿಸಿದ್ದಾರೆ. ನಂತರ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ನಮ್ಮ ಮಗಳನ್ನು ಪ್ರಭು ಅಪಹರಿಸಿ ಮದುವೆಗೆ ಒತ್ತಾಯಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ಕಲ್ಲಕುರಿಚಿ ಶಾಸಕ ಪ್ರಭು ನನ್ನ ಮಗಳನ್ನು ಮೋಸದಿಂದ ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡಿದ್ದಾನೆ. ಅಕ್ಟೋಬರ್ 1 ರಂದು ಸಂಜೆ 4 ಗಂಟೆಗೆ ಸೌಂದರ್ಯಳನ್ನು ಅಪಹರಿಸಿದ್ದಾನೆ. ಪ್ರಭು ಕಳೆದ 15 ವರ್ಷಗಳಿಂದ ನಮ್ಮ ಕುಟುಂಬದೊಂದಿಗೆ ಸ್ನೇಹ ಸಂಬಂಧ ಹೊಂದಿದ್ದನು. ಕಳೆದ ನಾಲ್ಕು ವರ್ಷಗಳಿಂದ ನನ್ನ ಮಗಳನ್ನು ಪ್ರೀತಿಸುತ್ತಿದ್ದನು. ಆಗ ನನ್ನ ಮಗಳು ಅಪ್ರಾಪ್ತೆಯಾಗಿದ್ದಳು. ನನಗೆ ಜಾತಿ ಸಮಸ್ಯೆಯಲ್ಲ. ಆದರೆ ಇಬ್ಬರ ನಡುವಿನ ವಯಸ್ಸಿನ ಅಂತರ ಹೆಚ್ಚರಿರುವುದೇ ಸಮಸ್ಯೆ ಎಂದು ಸೌಂದರ್ಯ ತಂದೆ ಮಾಧ್ಯಮದವರಿಗೆ ಹೇಳಿದ್ದಾರೆ.

ಸೌಂದರ್ಯರ ತಂದೆ ಮಾಡಿದ ಆರೋಪದ ಬೆನ್ನಲ್ಲೇ ಪ್ರಭು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, “ನಾವಿಬ್ಬರು ವರ್ಷಗಳಿಂದ ಅಲ್ಲ, ಕೇವಲ ನಾಲ್ಕು ತಿಂಗಳಿನಿಂದ ಪ್ರೀತಿಸುತ್ತಿದ್ದೇವೆ. ನಾನು ಅವಳನ್ನು ಅಪಹರಿಸಿ, ಬೆದರಿಕೆ ಹಾಕಿ ಮದುವೆಯಾಗುವಂತೆ ಒತ್ತಾಯಿಸಿದ್ದೇನೆ ಎಂಬ ಕೆಲವು ವದಂತಿಗಳಿವೆ. ಅದೆಲ್ಲವೂ ಸುಳ್ಳು, ಕಳೆದ ನಾಲ್ಕು ತಿಂಗಳಿನಿಂದ ನಾವಿಬ್ಬರು ಪ್ರೀತಿಸುತ್ತಿದ್ದೆವು. ನಮ್ಮ ಮದುವೆಗಾಗಿ ಆಕೆಯ ಪೋಷಕರ ಅನುಮತಿಯನ್ನು ಕೇಳಿದ್ದೆವು. ಆದರೆ ಅವರು ನಿರಾಕರಿಸಿದ್ದರು” ಎಂದು ತಿಳಿಸಿದ್ದಾರೆ.

ನನ್ನ ಪೋಷಕರ ಅನುಮತಿಯೊಂದಿಗೆ ಪರಸ್ಪರ ಮದುವೆಯಾಗಲು ನಿರ್ಧರಿಸಿದೆವು. ನಾನು ಅವಳ ಅಥವಾ ಅವಳ ಕುಟುಂಬಕ್ಕೆ ಬೆದರಿಕೆ ಹಾಕಲಿಲ್ಲ. ಸೌಂದರ್ಯಳನ್ನು ಮದುವೆಯಾಗುವಂತೆ ಯಾವುದೇ ಆಮಿಷವೊಡ್ಡಲಿಲ್ಲ. ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೆವು ಹೀಗಾಗಿ ಮದುವೆಯಾಗಿದ್ದೇವೆ ಎಂದು ಪ್ರಭು ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ. ವಿಡಿಯೋದಲ್ಲಿ ಪ್ರಭು ಪಕ್ಕದಲ್ಲಿ ಸೌಂದರ್ಯ ಕುಳಿತಿರುವುದನ್ನು ಕಾಣಹುದಾಗಿದೆ. ಆದರೆ ಆಕೆ ಏನು ಮಾತನಾಡುವುದಿಲ್ಲ.

ಸೌಂದರ್ಯ ತಂದೆ ಸ್ವಾಮಿನಾಥನ್ ವಿವಾಹ ಸ್ಥಳಕ್ಕೆ ಬಂದಾಗ ಸುತ್ತಮುತ್ತಲಿನವರು ಆತನ ಬೆದರಿಕೆಯನ್ನು ತಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ಸದ್ಯಕ್ಕೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಸ್ವಾಮಿನಾಥನ್ ಮೇಲೆ ಎಫ್‍ಐಆರ್ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *