1,800 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರು: ಅಶ್ವಥ್ ನಾರಾಯಣ್

Public TV
2 Min Read

– ಮಾಗಡಿ ಕ್ಷೇತ್ರಕ್ಕೆ 0.21 ಟಿಎಂಸಿ ಒದಗಿಸುವ ಯೋಜನೆ

ಬೆಂಗಳೂರು: ರಾಮನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲದ ಗ್ರಾಮಗಳ ಪಟ್ಟಿಯನ್ನು ಸಿದ್ಧಪಡಿಸಿ ಸೋಮವಾರದೊಳಗೆ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ, ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಸೂಚಿಸಿದ್ದಾರೆ.

ಜಿಲ್ಲೆಗೆ ನದಿ ಮೂಲಗಳಿಂದ ಕುಡಿಯುವ ನೀರಿನ ಪೂರೈಕೆಗಾಗಿ ಹಮ್ಮಿಕೊಂಡಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಬೆಂಗಳೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಜಿಲ್ಲೆ ಎಷ್ಟು ಗ್ರಾಮಗಳಿಗೆ ಈಗಾಗಲೇ ಪೈಪುಗಳ ಮೂಲಕ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ ಹಾಗೂ ಎಷ್ಟು ಗ್ರಾಮಗಳಿಗೆ ಇಲ್ಲ ಎಂಬ ಬಗ್ಗೆ ವರದಿ ಕೇಳಿದರು.

ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪಂಚಾಯ್ತಿ ಸಿಇಒ ಇಕ್ರಂ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯರಾಮ್, ಗ್ರಾಮೀಣ ನೀರು ಸರಬರಾಜು ಇಲಾಖೆಯ ಮುಖ್ಯ ಎಂಜಿನಿಯರ್ ಒಳಿಯಾಚೆ, ಮುಖ್ಯ ಎಂಜಿನಿಯರ್ ಮಹೇಶ್ ಮುಂತಾದ ಉನ್ನತ ಅಧಿಕಾರಿಗಳ ಜೊತೆ ಮಹತ್ವದ ಚರ್ಚೆ ನಡೆಸಿದ ಉಪ ಮುಖ್ಯಮಂತ್ರಿ, ಜಿಲ್ಲೆಯಲ್ಲಿ ನದಿ ಮೂಲಗಳಿಂದ ನೀರು ತಂದು ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

1,800 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ ಪ್ರತಿ ಗ್ರಾಮಕ್ಕೂ ಕುಡಿಯುವ ನೀರೊದಿಗಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಎಲ್ಲ ತಾಲೂಕುಗಳಿಗೂ ನೀರು ಲಭ್ಯವಾಗಲಿದೆ. ಈಗಾಗಲೇ ಕಾವೇರಿ ನದಿಯಿಂದ ನೀರು ತರುವ ಯೋಜನೆಯು ಪ್ರಗತಿಯಲ್ಲಿದೆ. ಅದೇ ರೀತಿ ಎತ್ತಿಹೊಳೆ ಯೋಜನೆಯಿಂದಲೂ ನಮಗೆ ನೀರು ಲಭ್ಯವಾಗಲಿದೆ. ಆ ಯೋಜನೆಗಳು ಮುಗಿಯುವ ಹೊತ್ತಿಗೆ ಜಿಲ್ಲೆಯಲ್ಲಿ ಪ್ರತಿಹಳ್ಳಿಗೂ ನೀರು ಸರಬರಾಜು ಮಾಡುವ ಪೈಪ್‍ಲೈನ್ ಜಾಲವನ್ನು ರೂಪಿಸಿರಬೇಕು. ಹೀಗಾಗಿ ಎಲ್ಲ ಕಾಮಗಾರಿಗಳನ್ನು ವೇಗಗತಿಯಲ್ಲಿ ಮುಗಿಸಬೇಕು. ಭೂ ಸ್ವಾಧೀನ, ಪರಿಹಾರ ನೀಡಿಕೆ ಕೆಲಸಗಳು ಬಾಕಿ ಇದ್ದರೆ ಶೀಘ್ರವೇ ಮುಗಿಸಬೇಕು ಎಂದು ತಾಕೀತು ಮಾಡಿದರು.

ಮಾಗಡಿ ಕ್ಷೇತ್ರಕ್ಕೆ 0.21 ಟಿಎಂಸಿ:
ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಮಾಗಡಿ ವಿಧಾನಸಭೆ ಕ್ಷೇತ್ರಕ್ಕೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಮೂಲಕ ನೀರೊದಿಗಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಆ ಬಗ್ಗೆಯೂ ಉಪ ಮುಖ್ಯಮಂತ್ರಿ ಉನ್ನತ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕ ಮಂಜುನಾಥ್ ಅವರೊಂದಿಗೆ ಚರ್ಚೆ ನಡೆಸಿದರು.

2011ರ ಜನಗಣತಿ ಪ್ರಕಾರ ಮಾಗಡಿ ತಾಲೂಕಿನಲ್ಲಿ 1.75 ಲಕ್ಷ ಜನಸಂಖ್ಯೆ ಇತ್ತು. ಈಗ 2 ಲಕ್ಷ ದಾಟಿರುವ ಸಾಧ್ಯತೆ ಇದೆ. 2055ಕ್ಕೆ ಎಷ್ಟು ಜನಸಂಖ್ಯೆ ಆಗುತ್ತದೋ ಅಷ್ಟನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನೀರಾವರಿ ಯೋಜನೆಯನ್ನು ರೂಪಿಸಬೇಕು. ತಾಲೂಕಿಗೆ ಮಂಚನಬೆಲೆ ಜಲಾಶಯದಿಂದ 0.91 ಟಿಎಂಸಿ, ವೈ.ಜಿ.ಗುಡ್ಡದಿಂದ 0.02 ಟಿಎಂಸಿ ನೀರು ಲಭ್ಯವಾಗಲಿದೆ. ಒಟ್ಟು 81 ಗ್ರಾಮಗಳಿಗೆ 0.21 ಟಿಎಂಸಿ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ. ಯಾವ ಕಾರಣಕ್ಕೂ ಕಾಮಗಾರಿಗಳು ತಡವಾಗಬಾರದು. ಯಾವುದೇ ಸಮಸ್ಯೆ ಎದುರಾದರೂ ನನ್ನ ಗಮನಕ್ಕೆ ತನ್ನಿ ಎಂದು ಉಪ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಡಿಸಿಎಂ ಅವರ ಕಾರ್ಯದರ್ಶಿ ಪ್ರದೀಪ್ ಪ್ರಭಾಕರ್ ಮತ್ತಿತರೆ ಅಧಿಕಾರಿಗಳು ಸಭೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *