ದುಬೈ: ಏಷ್ಯಾ ಕಪ್ ಟಿ20 ಕ್ರಿಕೆಟ್ (Asia Cup T20 Cricket) ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಯುಎಇ (UAE) ದೇಶದ ದುಬೈ, ಅಬುಧಾಬಿ ಕ್ರೀಡಾಂಗಣದಲ್ಲಿ 20 ದಿನಗಳ ಕಾಲ 8 ದೇಶಗಳು ಒಟ್ಟು 19 ಪಂದ್ಯಗಳನ್ನು ಆಡಲಿವೆ.
ಉದ್ಘಾಟನಾ ಪಂದ್ಯ ಅಫ್ಘಾನಿಸ್ತಾನ ಮತ್ತು ಹಾಂಕಾಂಗ್ ಮಧ್ಯೆ ನಡೆದರೆ ಸೆ.28ರಂದು ಫೈನಲ್ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಭಾರತ (India) ಬುಧವಾರ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ.
ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು ಭಾರತ, ಪಾಕಿಸ್ತಾನ, ಯುಎಇ ಹಾಗೂ ಒಮಾನ್ ‘ಎ’ ಗುಂಪಿನಲ್ಲಿವೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಹಾಂಕಾಂಗ್ ‘ಬಿ’ ಗುಂಪಿನಲ್ಲಿವೆ.
ಪ್ರತಿ ತಂಡಗಳು ಗುಂಪು ಹಂತದಲ್ಲಿ ಒಮ್ಮೆ ಪರಸ್ಪರ ಸೆಣಸಾಡಲಿವೆ. ಗುಂಪಿನ ಅಗ್ರ-2 ತಂಡಗಳು ಸೂಪರ್-4 ಹಂತ ಪ್ರವೇಶಿಸಲಿವೆ. ಸೂಪರ್-4ನಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿವೆ. ಇದನ್ನೂ ಓದಿ: ತಂಡದಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ, ಕುಂಬ್ಳೆ ಮುಂದೆ ಅತ್ತಿದ್ದೆ: ಕ್ರಿಸ್ ಗೇಲ್
ಪ್ರತಿ 2 ವರ್ಷಕ್ಕೊಮ್ಮೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದು ಈವರೆಗೂ 16 ಬಾರಿ ಆಯೋಜನೆಗೊಂಡಿವೆ. ಈ ಪೈಕಿ ಭಾರತ 8 ಬಾರಿ ಟ್ರೋಫಿ ಗೆದ್ದರೆ 3 ಆವೃತ್ತಿಗಳಲ್ಲಿ ರನ್ನರ್-ಅಪ್ ಆಗಿದೆ. ಶ್ರೀಲಂಕಾ 6, ಪಾಕಿಸ್ತಾನ 2 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ.
ಸೆ.15ರ ಯುಎಇ-ಒಮಾನ್(ಸಂಜೆ 5.30ಕ್ಕೆ) ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಸೋನಿ ಸ್ಪೋರ್ಟ್ಸ್, ಸೋನಿ ಲೈವ್‌ನಲ್ಲಿ ಪಂದ್ಯಗಳು ನೇರಪ್ರಸಾರವಾಗಲಿದೆ.
ದುಬೈ ಕ್ರೀಡಾಂಗಣದಲ್ಲಿ 11 ಪಂದ್ಯ ನಡೆಯಿದ್ದು 25,000 ಆಸನ ಸಾಮರ್ಥ್ಯವನ್ನು ಹೊಂದಿದರೆ ಅಬುಧಾಬಿಯಲ್ಲಿ 8 ಪಂದ್ಯಗಳು ನಿಗದಿಯಾಗಿದ್ದು 20,000 ಆಸನ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: BCCI ಬ್ಯಾಂಕ್ ಬ್ಯಾಲೆನ್ಸ್ 20 ಸಾವಿರ ಕೋಟಿಗೂ ಅಧಿಕ – 5 ವರ್ಷದಲ್ಲಿ 14,627 ಕೋಟಿ ಆದಾಯ ಹೆಚ್ಚಳ
ಭಾರತ vs ಪಾಕಿಸ್ತಾನ 3 ಬಾರಿ ಮುಖಾಮುಖಿ?
ಪಹಲ್ಗಾಮ್ ಉಗ್ರ ದಾಳಿ ಹಾಗೂ ಆ ಬಳಿಕ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಇದೇ ಮೊದಲ ಬಾರಿ ಭಾರತ-ಪಾಕ್ (India vs Pakistan) ತಂಡಗಳು ತಂಡಗಳು ಮುಖಾಮುಖಿಯಾಗಲಿವೆ. ಒಂದಲ್ಲ ಮೂರು ಬಾರಿ ಇತ್ತಂಡಗಳು ಕಾದಾಟ ನಡೆಸುವ ಸಾಧ್ಯತೆಯಿದೆ.
ಸೆ.14ರಂದು ಗುಂಪು ಹಂತದಲ್ಲಿ ಮೊದಲ ಬಾರಿಗೆ ಸೆಣಸಾಟವಾಡಲಿವೆ. ಒಂದು ವೇಳೆ ಗುಂಪು ಹಂತದಲ್ಲಿ ಗೆದ್ದು ಸೂಪರ್ 4 ಪ್ರವೇಶಿಸಿದರೆ ಅಲ್ಲೂ ಕಾದಾಟ ನಡೆಸಬೇಕಾಗುತ್ತದೆ. ಸೂಪರ್ 4 ರಲ್ಲಿ ಅಗ್ರ ಸ್ಥಾನ ಪಡೆದರೆ ಫೈನಲ್‌ನಲ್ಲೂ ಮುಖಾಮುಖಿಯಾಗುವ ಸಾಧ್ಯತೆಯಿದೆ.