ಪಿಯು ವಿದ್ಯಾರ್ಥಿನಿಯನ್ನು ಅಪಹರಿಸಿ ಲಾಡ್ಜ್ ಗೆ ಕರೆದೊಯ್ದು 4 ಜನರಿಂದ 10 ದಿನಗಳ ಕಾಲ ನಿರಂತರ ಅತ್ಯಾಚಾರ

Public TV
2 Min Read

ಬೆಂಗಳೂರು: ಸ್ನೇಹಿತೆ ಆಹ್ವಾನಿಸಿದ ಪಾರ್ಟಿಗೆಂದು ಹೋದ 17 ವರ್ಷದ ವಿದ್ಯಾರ್ಥಿನಿಯ ಮೇಲೆ ಸತತ 10 ದಿನಗಳ ಕಾಲ ನಾಲ್ವರು ಗ್ಯಾಂಗ್ ರೇಪ್ ಮಾಡಿರುವ ಪೈಚಾಚಿಕ ಕೃತ್ಯ ನಗರದ ವೈಟ್ ಫೀಲ್ಡ್ ಸಮೀಪದ ಕ್ಲಾಸಿಕಲ್ ಇನ್ ಲಾಡ್ಜ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಅಕ್ಟೋಬರ್ 26 ರಿಂದ ಕಾಣೆಯಾಗಿದ್ದಳು. ಮಗಳು ಕಾಣೆಯಾದ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಅತ್ತ ಕ್ಲಾಸಿಕಲ್ ಇನ್ ಲಾಡ್ಜ್‍ನಲ್ಲಿ ಯುವತಿಯೊಬ್ಬಳು ಸಂಕಷ್ಟದಲ್ಲಿರುವ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಲಾಡ್ಜ್ ನಿಂದ ವಿದ್ಯಾರ್ಥಿನಿಯನ್ನು ನವೆಂಬರ್ 04 ರಂದು ರಕ್ಷಣೆ ಮಾಡಿದ್ದಾರೆ.

ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ನಾಲ್ವರು ಆರೋಪಿಗಳಾದ ಉಡುಪಿ ಮೂಲದ ರಾಘವೇಂದ್ರ (27), ಪಶ್ಚಿಮ ಬಂಗಾಳ ಮೂಲದ ಮನೋರಂಜನ್ ಪಂಡಿತ್(52), ದಾವಣಗೆರೆ ಮೂಲದ ಸಾಗರ್ (22) ಹಾಗೂ ಮೈಸೂರು ಮೂಲದ ಮಂಜು ರಾಜ್ (32) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಲಾಡ್ಜ್ ನ ಸಮೀಪದಲ್ಲೇ ವಾಸಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಪಂಡಿತ್ ಲಾಡ್ಜ್ ನ ಮಾಲೀಕ ಎಂದು ವರದಿಯಾಗಿದೆ.

ನಡೆದಿದ್ದೇನು?: ಸಂತ್ರಸ್ತೆಯನ್ನು ಆಕೆಯ ಸ್ನೇಹಿತೆ ಅಕ್ಟೋಬರ್ 26 ರಂದು ಪಾರ್ಟಿಗೆ ಆಹ್ವಾನಿಸಿ ವೈಟ್‍ಫೀಲ್ಡ್ ರೈಲ್ವೇ ನಿಲ್ದಾಣದ ಬಳಿ ಬರಲು ತಿಳಿಸಿದ್ದಳು. ಅಂದು ಸಂಜೆ 5 ಗಂಟೆಗೆ ಕರೆ ಮಾಡಿದ ಸ್ನೇಹಿತೆ ಪಾರ್ಟಿಗೆ ಬರುತ್ತಿರೋದನ್ನ ಖಚಿತಪಡಿಸಿಕೊಂಡಿದ್ದಳು. ಆದ್ರೆ ರಾತ್ರಿ 8 ಗಂಟೆಗೆ ಸ್ಥಳಕ್ಕೆ ತೆರಳಿದ್ದ ವಿದ್ಯಾರ್ಥಿನಿಗೆ ತನ್ನ ಗೆಳತಿಯ ಸ್ನೇಹಿತರು ಎಂದು ರಾಘವೇಂದ್ರ ಹಾಗೂ ಸಾಗರ್ ಎಂಬ ಇಬ್ಬರು ಪರಿಚಯಿಸಿಕೊಂಡು ಪಾರ್ಟಿ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದರು. ನಂತರ ವಿದ್ಯಾರ್ಥಿಯನ್ನು ಲಾಡ್ಜ್ ಗೆ ಕರೆದುಕೊಂಡು ಹೋಗಿ ರೂಮ್ ನಂ 6 ರಲ್ಲಿ ಇರಲು ತಿಳಿಸಿ ಆಕೆಯ ಗೆಳತಿ ಅಲ್ಲಿಗೆ ಬರುವುದಾಗಿ ಹೇಳಿದ್ದರು. ಆದ್ರೆ ಗೆಳತಿ ಮಾತ್ರ ಅಲ್ಲಿಗೆ ಬರಲಿಲ್ಲ. ಬದಲಿಗೆ ವಿದ್ಯಾರ್ಥಿನಿ ಕೊಠಡಿಗೆ ತೆರಳಿದ ಸ್ವಲ್ಪ ಸಮಯದ ನಂತರ ಆರೋಪಿ ರಾಘವೇಂದ್ರ ಹಾಗೂ ರಾಜ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.


ಲಾಡ್ಜ್ ಮಾಲೀಕನಿಂದಲೂ ರೇಪ್: ಆರೋಪಿಗಳ ಚಲನವಲನ ಗಮನಿಸಿ ಅನುಮಾನಗೊಂಡು ಯುವತಿಯ ಬಗ್ಗೆ ಲಾಡ್ಜ್ ಮಾಲೀಕ ಪಂಡಿತ್ ವಿಚಾರಣೆ ನಡೆಸಿದ್ದ. ಆದ್ರೆ ಆರೋಪಿಗಳು ವಿಷಯವನ್ನು ಪೊಲೀಸರಿಗೆ ತಿಳಿಸದಂತೆ ಕೋರಿದ್ದು, ಇದಕ್ಕೆ ಪ್ರತಿಯಾಗಿ ಆಕೆಯ ಮೇಲೆ ರೇಪ್ ಮಾಡಲು ಪಂಡಿತ್‍ಗೂ ಅವಕಾಶ ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಸ್ನೇಹಿತೆಯೂ ಭಾಗಿಯಾಗಿರಬಹುದು ಎಂದು ಶಂಕಿಸಿದ್ದಾರೆ.

ಲಾಡ್ಜ್‍ನಲ್ಲಿ ಯುವತಿಯೊಬ್ಬಳು ಇರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಕಾರ್ಯಾಚರಣೆ ನಡೆಸಿ ನವೆಂಬರ್ 4ರಂದು ಯುವತಿಯನ್ನ ರಕ್ಷಣೆ ಮಾಡಿದ್ದಾರೆ. ನಂತರ ಯುವತಿ ನಡೆದದ್ದೆಲ್ಲವನ್ನೂ ವಿವರಿಸಿ ಹೇಳಿಕೆ ನೀಡಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾಳೆ. ನವೆಂಬರ್ 6ರ ನಂತರ ಪೊಲೀಸರು ಆರೋಪಿಗಳನ್ನ ಬಂಧಿಸಲು ಶುರು ಮಾಡಿದ್ದರು. ನಂತರ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 376ಡಿ(ಗ್ಯಾಂಗ್‍ರೇಪ್) 368, 363, 343, 504, 506 ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 4 ಮತ್ತು 6ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಡಿಸಿಪಿ (ವೈಟ್ ಫೀಲ್ಡ್ ವಿಭಾಗ) ಅಬ್ದುಲ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *