ಆಪರೇಷನ್‌ ಸಿಂಧೂರ | ಲೋಕಸಭೆಯಲ್ಲಿಂದು 16 ಗಂಟೆಗಳ ಮ್ಯಾರಥಾನ್‌ ಚರ್ಚೆ, ಪ್ರಧಾನಿ ಮೋದಿ ಭಾಗಿ

Public TV
2 Min Read

– ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ರಿಂದ ಚರ್ಚೆ ಶುರು

ನವದೆಹಲಿ: ʻಆಪರೇಷನ್‌ ಸಿಂಧೂರʼ (Operation Sindoor) ಕುರಿತು ಇಂದು ಲೋಕಸಭೆಯಲ್ಲಿ (Lok Sabha) 16 ಗಂಟೆಗಳ ಕಾಲ ಮ್ಯಾರಥಾನ್‌ ಚರ್ಚೆ ನಡೆಯಲಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಚರ್ಚೆ ಶುರುವಾಗಲಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಚರ್ಚೆ ಶುರು ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಆಪರೇಷನ್‌ ಸಿಂಧೂರ ಕುರಿತು ಲೋಕಸಭೆಯಲ್ಲಿ 16 ಗಂಟೆ ಹಾಗೂ ರಾಜ್ಯಸಭೆಯಲ್ಲಿ 9 ಗಂಟೆಗಳ ಕಾಲ ಚರ್ಚೆಗೆ ಸಮಯ ನಿಗದಿಪಡಿಸಲಾಗಿದೆ. ಇಂದು ಲೋಕಸಭೆಯಲ್ಲಿ ಚರ್ಚೆ ನಡೆಯಲಿದ್ದು, ಪ್ರಧಾನಿ ಮೋದಿ (PM Modi) ಸಹ ತಮ್ಮ ವಾದ ಮಂಡಿಸಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕಠಿಣ ಸಂದರ್ಭದಲ್ಲೂ ಅಭಿವೃದ್ಧಿಯ ದೀಪ ಬೆಳಗಿಸಬಹುದು – ಮಾಜಿ ಮಾವೋವಾದಿಗಳ ಮೀನು ಕೃಷಿಗೆ ಮೋದಿ ಶ್ಲಾಘನೆ

ಸಂಸತ್‌ ಮೂಲಗಳ ಪ್ರಕಾರ, ರಾಜನಾಥ್‌ ಸಿಂಗ್‌ (Rajnath Singh) ಅವರು, ಸಿಡಿಎಸ್ ಜನರಲ್ ಅನಿಲ್ ಚೌಹಾಣ್, ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಮತ್ತು ಮೂರು ಸೇನಾಪಡೆಗಳ ಮುಖ್ಯಸ್ಥರೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಲಿದ್ದಾರೆ. ಈ ಸಭೆಯಲ್ಲಿ ಸರ್ಕಾರದ ಕಾರ್ಯತಂತ್ರಗಳನ್ನು ಅಂತಿಮಗೊಳಿಸಲಾಗುತ್ತದೆ. ಇದೇ ವೇಳೆ ಚರ್ಚೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ INDIA ಒಕ್ಕೂಟ ಸಹ ಸಭೆ ನಡೆಸಲಿದೆ. ಇದನ್ನೂ ಓದಿ: ಐತಿಹಾಸಿಕ ಗಂಗೈಕೊಂಡ ಚೋಳಪುರಂ ದೇವಾಲಯಕ್ಕೆ ಭೇಟಿ ನೀಡಿದ ಮೋದಿ

ಆಪರೇಷನ್‌ ಸಿಂಧೂರ ನಡೆದಿದ್ದು ಏಕೆ?
ಏಪ್ರಿಲ್‌ 22ರ ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಮೇ 7ರ ತಡರಾತ್ರಿ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ರಾತ್ರೋ ರಾತ್ರಿ ನಡೆಸಿದ್ದ ದಾಳಿಯಲ್ಲಿ ನಿಷೇಧಿತ ಮೂರು ಉಗ್ರ ಸಂಘಟನೆಗಳಾದ ಜೈಶ್‌ ಎ ಮೊಹಮ್ಮದ್‌, ಲಷ್ಕರ್‌ ಎ ತೈಬಾ (LET) ಮತ್ತು ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರರ ಪ್ರಧಾನ ಕಚೇರಿಗಳು ಧ್ವಂಸವಾಗಿದ್ದವು. ಪಾಕಿಸ್ತಾನ ಮತ್ತು ಪಾಕ್ ಅಕ್ರಮಿತ ಕಾಶ್ಮೀರದಲ್ಲಿರುವ 9 ಅಡಗುತಾಣಗಳ ಮೇಲೆ ಭಾರತೀಯ ವಾಯು ಸೇನೆ (IAF) ದಾಳಿ ನಡೆಸಿತ್ತು. ಭಾರತ ಧ್ವಂಸ ಮಾಡಿರುವ ಈ ಉಗ್ರರ (Terrorist) ನೆಲೆಗಳು ಮೋಸ್ಟ್‌ ಡೇಂಜರಸ್‌ ತಾಣಗಳು ಎಂದೇ ಗುರುತಿಸಿಕೊಂಡಿದ್ದು, ಇಡೀ ವಿಶ್ವಕ್ಕೆ ಕಂಟಕವಾಗಿದ್ದವು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇಲ್ಲಿ ಅಡಗಿಸಿಡಲಾಗಿತ್ತು. ಜೊತೆಗೆ ವಿಶ್ವಾದ್ಯಂತ ವಿವಿಧೆಡೆಗೆ ಕಳುಹಿಸಲು ಇಲ್ಲಿ ತರಬೇತಿ ನೀಡಲಾಗುತ್ತಿತ್ತು ಅನ್ನೋ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿತ್ತು. ಅದಕ್ಕಾಗಿ ಭಾರತೀಯ ಸೇನೆಯು ನಾಗರಿಕರು ಮತ್ತು ಸೇನೆಯನ್ನ ಗುರಿಯಾಗಿಸದೇ ಕೇವಲ ಉಗ್ರರ ನೆಲೆಗಳನ್ನ ಗುರಿಯಾಗಿಸಿ ದಾಳಿ ನಡೆಸಿತ್ತು.

ಇದಾದ ಬಳಿಕ ಪಾಕ್‌ ಭಾರತದ ಮೇಲೆ ಮಿಸೈಲ್‌ ದಾಳಿಗೆ ಮುಂದಾಯಿತು. ಬಳಿಕ ಪಾಕ್‌ ಹುಟ್ಟಡಗಿಸಿದ ಭಾರತೀಯ ಸೇನೆಗಳು ಪಾಕ್‌ ಮಿಸೈಲ್‌ಗಳ ದಾಳಿಯನ್ನ ವಿಫಲಗೊಳಿಸಿದವು. ಇದನ್ನೂ ಓದಿ: Mann ki Baat: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾಗೆ ಮೋದಿ ಪ್ರಶಂಸೆ

ವಿಪಕ್ಷಗಳ ಪಟ್ಟಿನಿಂದ ಚರ್ಚೆ
ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಗ್ಗೆ ಹಲವು ಅನುಮಾನಗಳನ್ನ ವ್ಯಕ್ತಪಡಿಸಿದ್ದ ವಿಪಕ್ಷಗಳು ಚರ್ಚೆಗೆ ಪಟ್ಟು ಹಿಡಿದಿದ್ದವು. ಪ್ರಧಾನಿ ಮೋದಿ ವಿದೇಶಿ ಪ್ರವಾಸದಲ್ಲಿದ್ದ ಕಾರಣ, ಚರ್ಚೆಯನ್ನು ಒಂದು ವಾರ ಮುಂದೂಡಲಾಗಿತ್ತು. ಇದೀಗ ಪ್ರಧಾನಿ ವಿದೇಶಿ ಪ್ರವಾಸ ಮುಗಿಸಿ ವಾಪಸ್‌ ಆದ ಬೆನ್ನಲ್ಲೇ ಚರ್ಚೆಗೆ ತಯಾರಿ ನಡೆದಿದೆ. ಇದನ್ನೂ ಓದಿ: ʻಆಪರೇಷನ್‌ ಸಿಂಧೂರʼ ವೇಳೆ ಭಾರತ ಧ್ವಂಸಗೊಳಿಸಿದ್ದ ಮುರಿಡ್ಕೆ ಮಸೀದಿಯಲ್ಲಿ ಮತ್ತೆ ತಲೆಎತ್ತಿದ ಲಷ್ಕರ್‌ ಗುಂಪು; ವಿಡಿಯೋ ವೈರಲ್‌

Share This Article