ಕಾಶ್ಮೀರ ಬಿಟ್ಟು ದೇಶದ ಆರ್ಥಿತಕೆ ಬಗ್ಗೆ ಗಮನ ಕೊಡಿ- ಪಾಕ್ ಪ್ರಧಾನಿಗೆ 15ರ ಪೋರ ಸಲಹೆ

Public TV
1 Min Read

ಇಸ್ಲಾಮಾಬಾದ್: ಕಾಶ್ಮೀರದ ವಿಚಾರ ಬಿಡಿ, ಹಳ್ಳ ಹಿಡಿದಿರುವ ನಮ್ಮ ದೇಶದ ಅರ್ಥ ವ್ಯವಸ್ಥೆಯ ಬಗ್ಗೆ ಯೋಚನೆ ಮಾಡಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್‍ಗೆ ಪಾಕಿನ 15 ವರ್ಷದ ಬಾಲಕನೋರ್ವ ಸಲಹೆ ಕೊಟ್ಟಿದ್ದಾನೆ.

ಭಾರತ ಜಾಗತಿಕವಾಗಿ ಪ್ರಭಾವವನ್ನು ಹೊಂದಿದೆ, ಆರ್ಥಿಕ ಪ್ರಗತಿಯಲ್ಲಿ ಪಾಕಿಸ್ತಾನಕ್ಕಿಂತ ಭಾರತ ಮುಂದಿದೆ. ಆರ್ಥಿಕತೆ ವಿಷಯದಲ್ಲಿ ಪಾಕಿಸ್ತಾನವನ್ನು ಭಾರತಕ್ಕೆ ಹೋಲಿಸಿದರೆ ಪರಿಗಣನೆಗೆ ಸಿಗದಷ್ಟು ಪಾಕ್ ಹಿಂದೆ ಉಳಿದಿದೆ. ಭಾರತಕ್ಕೆ ಸಮನಾಗಿ ತನ್ನ ಆರ್ಥಿಕತೆಯನ್ನು ಬಲಪಡಿಸುವವರೆಗೂ ಪಾಕಿಸ್ತಾನವು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

ಪಾಕಿಸ್ತಾನವು ಭಾರತದೊಂದಿಗೆ ವ್ಯಾಪಾರಿ ಅನಿವಾರ್ಯತೆ ಹೊಂದಿದೆ ಎನ್ನುವುದನ್ನು ದೇಶ ಅರ್ಥ ಮಾಡಿಕೊಳ್ಳಬೇಕು. ಇಡೀ ವಿಶ್ವದ ಮೇಲೆ ಭಾರತ ಪ್ರಭಾವ ಬೀರಿದೆ, ವ್ಯವಹಾರ ವಾಣಿಜ್ಯ ಕಾರಣಕ್ಕೆ ಭಾರತ ಇಡೀ ಪ್ರಪಂಚದ ಮೇಲೆ ಪ್ರಭಾವ ಬೀರಿದೆ. ಈ ಲಾಬಿ ಇಡೀ ಜಗತ್ತನ್ನು ಭಾರತದೊಂದಿಗೆ ಕರೆದೊಯ್ಯುತ್ತಿದೆ. ಎಲ್ಲಿಯವರೆಗೆ, ಪಾಕಿಸ್ತಾನದ ಆರ್ಥಿಕತೆಯು ಭಾರತದ ಆರ್ಥಿಕತೆಗೆ ಸಮನಾಗುವುದಿಲ್ಲವೋ, ಅಲ್ಲಿಯವರೆಗೆ ಪಾಕಿಸ್ತಾನ ಸಮಸ್ಯೆ ಬಗೆಹರಿಯಲ್ಲ. ಸಮಸ್ಯೆ ಬಗೆಹರಿಸಲು ಪಾಕ್ ಭಾರತದ ಸಮಾನವಾಗಿ ನಿಲ್ಲಲು ಸಾಧ್ಯವಾಗಲ್ಲ ಎಂದು ಹೇಳಿದ್ದಾನೆ.

ಪಾಕಿಸ್ತಾನವು ಭಾರತವನ್ನು ಆರ್ಥಿಕವಾಗಿ ಹಿಂದಿಕ್ಕುವವರೆಗೆ ಕಾಶ್ಮೀರ ಸಮಸ್ಯೆ ಬಗೆಹರಿಯಲ್ಲ. ಹಾಗೆಯೇ ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಲ್ಲುವುದರ ಮೂಲಕ ಭಾರತದ ಕೋಪಕ್ಕೆ ಒಳಗಾಗಲು ಯಾವ ದೇಶ ಕೂಡ ಬಯಸುವುದಿಲ್ಲ. ನಮ್ಮ ದೇಶದ ಆರ್ಥಿಕತೆಯನ್ನು ಬಲಪಡಿಸಿದರೆ ಮಾತ್ರ ಕಾಶ್ಮೀರ ಸಮಸ್ಯೆ, ಸೇರಿದಂತೆ ನಮ್ಮ ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತೆ ಎಂದು ಬಾಲಕ ಧೈರ್ಯದಿಂದ ಪ್ರಧಾನಿಗೇನೆ ಖಡಕ್ ಡೈಲಾಗ್ ಹೇಳಿ ತಿರುಗೇಟು ನೀಡಿದ್ದಾನೆ.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ, ಪಾಕ್ ಪ್ರಧಾನಿಗೆ ಚಿಕ್ಕ ಹುಡುಗನು ಸಲಹೆ ಕೊಡುವಂತೆ ಆಯಿತು ಎಂದು ಎಲ್ಲೆಡೆ ಟ್ರೋಲ್ ಆಗುತ್ತಿದೆ. ಚಿಕ್ಕವಯಸ್ಸಿನಲ್ಲೇ ದೇಶದ ಬಗ್ಗೆ ಆಲೋಚಿಸಿದ ಬಾಕಲನ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *