ಭಾರೀ ಮಳೆ, ಮುಂಬೈನ ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ- 15 ಜನರ ಸಾವು

Public TV
1 Min Read

ಮುಂಬೈ: ಇಂದು ಬೆಳಿಗ್ಗೆ ಭಾರೀ ಮಳೆಯಾದ ಬೆನ್ನಲ್ಲೇ ಫುಟ್ ಓವರ್ ಬ್ರಿಡ್ಜ್ ನಲ್ಲಿ ಕಾಲ್ತುಳಿತವಾಗಿ 15 ಜನ ಸಾವನ್ನಪ್ಪಿದ್ದು, 30 ಜನ ಗಂಭೀರವಾಗಿ ಗಾಯಗೊಂಡಿರೋ ಘಟನೆ ಮುಂಬೈನ ಸ್ಥಳೀಯ ರೈಲ್ವೆ ನಿಲ್ದಾಣವೊಂದರಲ್ಲಿ ನಡೆದಿದೆ.

ಇಂದು ಬೆಳಗ್ಗೆ 9.30ರ ಸುಮಾರಿಗೆ ಎಲ್ಫಿನ್‍ಸ್ಟೋನ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ನಾಲ್ಕು ರೈಲುಗಳು ಒಂದೇ ವೇಳೆಗೆ ನಿಲ್ದಾಣಕ್ಕೆ ಬಂದಿದ್ದು, ಮಳೆ ಇದ್ದಿದ್ದರಿಂದ ಕೆಲವು ಮಹಿಳಾ ಪ್ರಯಾಣಿಕರು ಜಾರಿ ಬಿದ್ದರು. ಇದರಿಂದ ಜನಸಂದಣಿಯಲ್ಲಿ ಗೊಂದಲಕ್ಕೆ ಕಾರಣವಾಯ್ತು ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.

ಘಟನೆಗೆ ಸೂಕ್ತ ಕಾರಣದ ಬಗ್ಗೆ ನಾವಿನ್ನೂ ತನಿಖೆ ಮಡ್ತಿದ್ದೇವೆ. ಕಿರಿದಾಗಿದ್ದ ಮೆಟ್ಟಿಲಿನ ಮೇಲೆ ಈ ಘಟನೆ ನಡೆದಿದೆ. ಗಾಯಾಳುಗಳನ್ನ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ನಿಕೇತ್ ಕೌಶಿಕ್ ಹೇಳಿದ್ದಾರೆ.

ಜನರು ನೆಲದ ಮೇಲೆ ಬಿದ್ದಿರುವುದು, ಕೆಲವರು ಚಲಿಸದೇ ಸುಮ್ಮನಿರುವುದು ಹಾಗೂ ಕೆಲವರಿಗೆ ನೀರು ಕುಡಿಸಿ ಪ್ರಥಮ ಚಿಕಿತ್ಸೆ ನೀಡುತ್ತಿರುವ ದೃಶ್ಯಗಳನ್ನ ಕಾಣಬಹುದಾಗಿದೆ. ಪ್ರಾಯಾಣಿಕರು ಹಾಗೂ ಸ್ಥಳೀಯರು ಗಾಯಾಳುಗಳನ್ನ ಬ್ರಿಡ್ಜ್‍ನಿಂದ ಕೆಳಗೆ ಕೊಂಡೊಯ್ಯುತ್ತಿರೋದನ್ನ ಕಾಣಬಹುದಾಗಿದೆ. ಅಲ್ಲದೆ ಬ್ರಿಡ್ಜ್ ಪಕ್ಕದಲ್ಲಿ ಚಪ್ಪಲಿಗಳ ರಾಶಿಯೇ ಬಿದ್ದಿದೆ. ಪ್ರಯಾಣಿಕರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಎಲ್ಫಿನ್‍ಸ್ಟೋನ್ ಹಾಗೂ ಲೋವರ್ ಪ್ಯಾರೆಲ್ ನಿಲ್ದಾಣಗಳ ಮಧ್ಯೆ ಹೆಚ್ಚಿನ ಪ್ರಯಾಣಿಕರು ಸಂಚರಿಸುತ್ತಾರೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಚೇರಿಗಳಿದ್ದು, ಎರಡು ನಿಲ್ದಾಣಗಳನ್ನ ಮುಂಬೈ ರೈಲು ಪ್ರಯಾಣಿಕರು ಹೆಚ್ಚಾಗಿ ಬಳಸುತ್ತಾರೆ ಎಂದು ವರದಿಯಾಗಿದೆ.

ಕಾಲ್ತುಳಿತಕ್ಕೆ ಕಾರಣವಾಗಿದ್ದು ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಪಶ್ಚಿಮ ರೈಲ್ವೆ ಅಧಿಕಾರಿ, ಮಳೆಯೇ ಇದಕ್ಕೆ ಕಾರಣ. ಎರಡು ರೈಲುಗಳು ಇಲ್ಲಿ ಬಂದವು, ಇನ್ನೆರಡು ಸೆಂಟ್ರಲ್ ಲೈನ್‍ನಲ್ಲಿ ಬಂದವು. ನಾಲ್ಕೂ ರೈಲುಗಳು ಒಂದೇ ಸಮಯಕ್ಕೆ ಬಂದವು ಎಂದು ಹೇಳಿದ್ರು.

 

Share This Article
Leave a Comment

Leave a Reply

Your email address will not be published. Required fields are marked *