ಕಮಲಕ್ಕೆ ಆಪರೇಷನ್: ಜೆಡಿಎಸ್‍ಗೆ ಹಾರಲಿದ್ದಾರೆ 15 ಬಿಜೆಪಿ ಶಾಸಕರು!

Public TV
2 Min Read

ಬೆಂಗಳೂರು: 2018 ರ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು 4 ತಿಂಗಳಷ್ಟೇ ಬಾಕಿ ಇದ್ದು ಉತ್ತರ ಕರ್ನಾಟಕ ಭಾಗದ ಬಿಜೆಪಿಯ 15 ನಾಯಕರು ಜೆಡಿಎಸ್ ಸೇರಲು ಮುಂದಾಗಿದ್ದಾರೆ ಎನ್ನುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

ಮಾಜಿ ಸಚಿವರು ಹಾಗೂ ಹಾಲಿ ಶಾಸಕರ ಗುಂಪೊಂದು ಜೆಡಿಎಸ್ ನಾಯಕರ ಜೊತೆ ರಹಸ್ಯ ಮಾತುಕತೆ ನಡೆಸಿ ಪಕ್ಷ ಸೇರ್ಪಡೆಯಾಗಲು ಯತ್ನಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಮಾಜಿ ಸಚಿವರುಗಳಾದ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಆನಂದ್ ಅಸ್ನೋಟಿಕರ್ ನೇತೃತ್ವದ 15 ಜನರ ತಂಡ ಈ ಪ್ರಯತ್ನ ಆರಂಭಿಸಿದೆ. ಉಮೇಶ್ ಕತ್ತಿ ಬಿಜೆಪಿ ಬಿಡಲು ಸಿದ್ಧತೆ ಮಾಡಿಕೊಂಡಿದ್ದು ಈಗಾಗಲೇ ತಮ್ಮ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಸೇರ್ಪಡೆಗೆ ಸಂಸದ ಪ್ರಕಾಶ್ ಹುಕ್ಕೇರಿ ಅಡ್ಡಿಯಾದ ಹಿನ್ನೆಲೆಯಲ್ಲಿ ಉಮೇಶ್ ಕತ್ತಿ ಕಣ್ಣು ಜೆಡಿಎಸ್ ಮೇಲಿದೆ ಎನ್ನಲಾಗುತ್ತಿದೆ.

2008 ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಂಡಾಯದ ಬಾವುಟ ಹಾರಿಸಿದವರು ಬಾಲಚಂದ್ರ ಜಾರಕಿಹೊಳಿ ಅಂಡ್ ಟೀಂ. ಬಂಡಾಯ ಏಳಲು ಕಾರಣವಾಗಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಾಂದ್ಲಜೆಗೆ ಇವರ ಮೇಲೆ ಸಿಟ್ಟಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಈ ಬಾರಿ ಹೈಕಮಾಂಡೇ ಅಂತಿಮವಾಗಿ ಟಿಕೆಟ್ ನೀಡುವುದಾಗಿ ಹೇಳಿದ್ದರಿಂದ ಕಡೆ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಬಹುದು ಎನ್ನುವ ಅನುಮಾನ ಬಾಲಚಂದ್ರ ಜಾರಕಿ ಹೊಳಿ, ಆನಂದ್ ಆಸ್ನೋಟಿಕರ್ ಹಾಗೂ ಅಂದಿನ ಬಂಡಾಯ ಶಾಸಕರಾಗಿದ್ದ 13 ಜನರದ್ದು.

ಈ ಕಾರಣದ ಜೊತೆ ಈ ಬಾರಿ ಯಾರಿಗೂ ಬಹುಮತ ಸಿಗದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಜೊತೆ ಸೇರಿಕೊಂಡು ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಾಧ್ಯತೆ ಇರುವುದರಿಂದ ನಾಯಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದ 15 ಕ್ಕೂ ಹೆಚ್ಚು ಟಿಕೆಟ್ ಆಕಾಂಕ್ಷಿಗಳು ಒಟ್ಟಾಗಿ ಜೆಡಿಎಸ್ ನಾಯಕರುಗಳ ಜೊತೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ. ಆದರೆ ಕೆಲ ನಾಯಕರಿಗೆ ಜಿಲ್ಲಾ ಮಟ್ಟದ ಪಾರಂಪರಿಕ ಶತ್ರುಗಳ ಅಡ್ಡಿಯಾದ ಹಿನ್ನೆಲೆಯಲ್ಲಿ ಯಾರನ್ನು ಸೇರ್ಪಡೆಗೊಳಿಸಬೇಕು? ಯಾರನ್ನು ಬಿಡಬೇಕು ಎನ್ನುವ ಮಾತುಕತೆ ನಡೆಯುತ್ತಿದೆ. ಹೀಗಾಗಿ ಕೆಲವೇ ದಿನದಲ್ಲಿ ಯಾರು ಯಾವ ಪಕ್ಷಕ್ಕೆ ಹಾರಲಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿಯಲಿದೆ.

https://youtu.be/fJkZXk_1G1A

Share This Article
Leave a Comment

Leave a Reply

Your email address will not be published. Required fields are marked *