15 ದಿನಗಳಲ್ಲಿ ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ

Public TV
3 Min Read

ಬೆಂಗಳೂರು: ಕೋವಿಡ್ ನಿಂದಾಗಿ ರಾಜ್ಯ ಸರಕಾರವು ಗುತ್ತಿಗೆದಾರರ ವಹಿವಾಟುಗಳಿಗೆ ತಾತ್ಕಾಲಿಕವಾಗಿ ಕೆಲವು ತಿಂಗಳುಗಳಿಂದ ಹಲವು ನಿರ್ಬಂಧಗಳನ್ನು ಹೇರಿದೆ. ಇದರ ಪರಿಣಾಮ ರಾಜ್ಯದ ಒಂದು ಲಕ್ಷಕ್ಕೂ ಅಧಿಕ ನೋಂದಾಯಿತ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಈಡಾಗಲಿದ್ದು, ಗುತ್ತಿಗೆದಾರರ ಸಮಸ್ಯೆಗಳ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರು ಎಚ್ಚರಿಕೆ ನೀಡಿದ್ದಾರೆ.

ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಾಕಿ ಉಳಿದಿರುವ ಬಿಲ್ ಗಳಿಗೆ ಹಣ ಬಿಡುಗಡೆ ಮಾಡುವುದು ಹಾಗೂ ಪ್ಯಾಕೇಜ್ ಪದ್ದತಿಯ ಅಡಿಯಲ್ಲಿ ಟೆಂಡರ್ ಕರೆಯುವುದನ್ನು ರದ್ದುಪಡಿಸುವಂತೆ ಹಲವಾರು ಬಾರಿ ಮಾನ್ಯ ಮುಖ್ಯಮಂತ್ರಿಗಳಲ್ಲಿ, ಮಾನ್ಯ ಸಚಿವರುಗಳಲ್ಲಿ ಹಾಗೂ ಉನ್ನತ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದರೂ ಉಪಯೋಗವಾಗಿಲ್ಲ ಎಂದು ಹೇಳಿದ್ದಾರೆ.

ಗುತ್ತಿಗೆದಾರರ ಬೇಡಿಕೆಗಳು ಏನು?
* ಟೆಂಡರ್‍ನಲ್ಲಿ ಭಾಗವಹಿಸದಂತೆ ನಿರ್ಬಂಧಿಸುತ್ತಿರುವ ಕುರಿತು : ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಕೆಲವು ಅಧಿಕಾರಿಗಳು ಗುತ್ತಿಗೆದಾರರಿಗೆ ಸರಕಾರಿ ಟೆಂಡರ್‍ಗಳಲ್ಲಿ ಭಾಗವಹಿಸದಂತೆ ನಿರ್ಬಂಧವನ್ನು ಹೇರುತ್ತಿದ್ದಾರೆ. ಇದರ ಹೊರತಾಗಿ ಗುತ್ತಿಗೆದಾರರು ಟೆಂಡರ್‍ನಲ್ಲಿ ಭಾಗವಹಿಸಿ ಬಿಡ್ ಸಲ್ಲಿಸಿದ ನಂತರವೂ ಟೆಂಡರನ್ನು ಹಿಂಪಡೆಯುವಂತೆ ಒತ್ತಡ ತಂತ್ರವನ್ನು ಅನುಸರಿಸುತ್ತಿದ್ದಾರೆ. ಇದರಿಂದ ಟೆಂಡರ್‍ನಲ್ಲಿ ಸ್ಪರ್ಧಾತ್ಮಕ ದರಗಳಿಂದ ವಂಚಿತವಾಗಿ ಹೆಚ್ಚಿನ ಪಾರದರ್ಶಕತೆಗೆ ಅವಕಾಶವಿಲ್ಲದೆ ರಾಜ್ಯದ ತೆರಿಗೆದಾರರ ಹಣ ವ್ಯರ್ಥವಾಗುತ್ತಿದ್ದು ಗುತ್ತಿಗೆದಾರರ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತಿದೆ ಎಂದರು.

*ಗುತ್ತಿಗೆದಾರರ ಬಾಕಿ ಉಳಿದಿರುವ ಬಿಲ್ಲುಗಳಿಗೆ ಹಣ ಪಾವತಿ: ಕಳೆದ ಹಲವಾರು ತಿಂಗಳುಗಳಿಂದ ಸರಕಾರದ ಹಲವಾರು ಇಲಾಖೆಗಳಿಂದ ಗುತ್ತಿಗೆದಾರರಿಗೆ ಬಿಲ್ಲುಗಳನ್ನು ನೀಡಲಾಗಿರುವುದಿಲ್ಲ. ಬಾಕಿ ಬಿಲ್ ಗಳಿಗೆ ಹಣಪಾವತಿಸುವ ಸಮಯದಲ್ಲಿ ಸರಕಾರದ ಆದೇಶ ಸಂಖ್ಯೆ: ನಂ.ಪಿಡಬ್ಲೂಡಿ/260/ಎಸ್‍ಓಎಫ್‍ಸಿ/2001(ಪಿ) 2000 ಸೆಪ್ಟೆಂಬರ್ 25 ರಲ್ಲಿ ಸೂಚಿಸಿರುವಂತೆ ಗುತ್ತಿಗೆದಾರರ ಬಾಕಿ ಉಳಿದಿರುವ ಬಿಲ್ಲುಗಳಿಗೆ ಶೇ.80 ರಷ್ಟು ಹಣ ಬಿಡುಗಡೆ ಮಾಡುವುದನ್ನು ಜೇಷ್ಠತೆ ಆಧಾರದ ಮೇಲೆ ಕಡ್ಡಾಯ ಮಾಡಿದೆ. ಈ ಆಧಾರದಲ್ಲಿ ಅಂದರೆ ಡಿ.ಬಿ.ಆರ್ ಸಂಖ್ಯೆ ಅನುಗುಣವಾಗಿ ಜೇಷ್ಠತೆ ಮೇಲೆ ಹಣ ಬಿಡುಗಡೆ ಮಾಡಬೇಕು. ಅಲ್ಲದೆ, ಸ್ಟಾಂಡರ್ಡ್ ಬಿಡ್ ಗೆ ಸೇರಿಸಿ ನೀಡಬೇಕು ಎಂದರು.

* ಪ್ಯಾಕೇಜ್ ಪದ್ದತಿಯನ್ನು ರದ್ದಗೊಳಿಸಿ: ಪ್ಯಾಕೇಜ್ ಪದ್ದತಿಯಲ್ಲಿ ಟೆಂಡರ್ ಗಳನ್ನು ಕರೆಯುತ್ತಿರುವುದರಿಂದ ನಮ್ಮ ರಾಜ್ಯದ ಸ್ಥಳೀಯ ಗುತ್ತಿಗೆದಾರರಿಗೆ ಟೆಂಡರ್‍ನಲ್ಲಿ ಭಾಗವಹಿಸದಂತಹ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿ ದೊರೆಯದಂತಹ ಪರಿಸ್ಥಿತಿ ಎದುರಾಗಿದೆ. ಅಲ್ಲದೆ, ಇದು ಹೊರ ರಾಜ್ಯದ ಗುತ್ತಿಗೆದಾರರಿಗೆ ಹೆಚ್ಚು ಅನುಕೂಲವಾಗುತ್ತಿದೆ. ಆದ್ದರಿಂದ ಸಣ್ಣ ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಪ್ಯಾಕೇಜ್ ಪದ್ದತಿಯಲ್ಲಿ ಟೆಂಡರ್ ಕರೆಯುವುದನ್ನು ನಿಲ್ಲಿಸಿ ಒಂದೊಂದು ಕಾಮಗಾರಿಗಳಿಗೂ ಪ್ರತ್ಯೇಕವಾಗಿ ಟೆಂಡರ್ ಕರೆಯುವಂತೆ ಅವರು ಮನವಿ ಮಾಡಿದರು.

* ಮಾದರಿ ಟೆಂಡರ್ ದಾಖಲೆ ರಚನಾ ಸಮಿತಿಗೆ ಮನವಿ: ದ್ವಿ ಲಕೋಟೆ ಪ್ಯಾಕೇಜ್ ಪದ್ದತಿಯ ಸ್ಟ್ಯಾಂಡರ್ಡ್ ಟೆಂಡರ್ ಡಾಕ್ಯುಮೆಂಟ್ ಅಡಿಯಲ್ಲಿ ಸರಿಯಾದ ಮಾನದಂಡಗಳಿಲ್ಲದೆ ಎಲ್ಲಾ ಷರತ್ತುಗಳನ್ನು ತಮ್ಮ ಇಚ್ಛೆಗೆ ಬಂದಂತೆ ಪ್ರತ್ಯೇಕ ನಿಯಮಗಳನ್ನು ರೂಪಿಸುತ್ತಿರುವುದು ವಿವಿಧ ಸರಕಾರಿ ಇಲಾಖೆಗಳಲ್ಲಿ ಕಂಡುಬಂದಿದೆ. ಕರ್ನಾಟಕ ರಾಜ್ಯ ಟೆಂಡರ್‍ನಲ್ಲಿ ಭಾಗವಹಿಸುವ ಗುತ್ತಿಗೆದಾರರಿಗೆ ಪದ್ದತಿಯ ಸ್ಟ್ಯಾಂಡರ್ಡ್ ಟೆಂಡರ್ ಡಾಕ್ಯುಮೆಂಟ್ ನ ಏಕರೂಪ ನಿಯಮವನ್ನು ಇಡಿ ರಾಜ್ಯಕ್ಕೆ ಅನ್ವಯವಾಗುವಂತಹ ನಿಯಮಾವಳಿಗಳನ್ನು ರೂಪಿಸಬೇಕು.

ಇದೇ ವೇಳೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಜಿಎಂ ರವೀಂದ್ರ ಮಾತನಾಡಿ, ನೆರೆರಾಜ್ಯವಾದ ಕೇರಳದಲ್ಲಿ ರೂ.5.00 ಕೋಟಿವರೆಗಿನ ಕಾಮಗಾರಿಯನ್ನು ಒಂದು ಲಕೋಟೆ ಪದ್ದತಿಯಲ್ಲಿ ಯಾವುದೇ ಪೂರ್ವಭಾಗಿ ಷರತ್ತುಗಳಿಲ್ಲದೆ ಗುತ್ತಿಗೆದಾರರು ನೊಂದಾವಣಿಯಾಗಿರುವ ಆಯಾ ದರ್ಜೆಗೆ ಅನುಗುಣವಾಗಿ ಟೆಂಡರ್‍ನಲ್ಲಿ ಭಾಗವಹಿಸುವ ನಿಯಮ ಜಾರಿಯಲ್ಲಿರುತ್ತದೆ. ಇದೇ ಮಾದರಿಯ ನಿಯಮವನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿದರೆ ಸ್ಥಳೀಯ ನಿವಾಸಿಗಳಾದ ರಾಜ್ಯದ ಗುತ್ತಿಗೆದಾರರು ಟೆಂಡರ್‍ನಲ್ಲಿ ಭಾಗವಹಿಸಿ ಕಾಮಗಾರಿ ಪಡೆಯುವಂತಹ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *