15 ಅಡಿ ಉದ್ದ, 80 ಕೆ.ಜಿ.ತೂಕ- ಕಾಫಿನಾಡಲ್ಲಿ ಬೃಹತ್ ಹೆಬ್ಬಾವು ಸೆರೆ

Public TV
1 Min Read

ಚಿಕ್ಕಮಗಳೂರು: ಸುಮಾರು 80 ಕೆ.ಜಿ. ತೂಕ, 15 ಅಡಿ ಉದ್ದದ ಬೃಹತ್ ಹೆಬ್ಬಾವನ್ನು ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ನಡೆದಿದೆ.

ಕೊಪ್ಪ ತಾಲೂಕಿನ ಸೋಮಲಾಪುರದ ಉಮೇಶ್ ಭಟ್ ಅವರ ತೋಟದಲ್ಲಿ ಈ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ. ಸೆರೆ ಹಿಡಿದ ಬಳಿಕ ಈ ಹೆಬ್ಬಾವನ್ನು ಚೀಲಕ್ಕೆ ತುಂಬಲು ಮೂರು ಜನ ದೇಹದ ಶಕ್ತಿಯನ್ನೆಲ್ಲಾ ವ್ಯಯಿಸಿದ್ದಾರೆ. ಕಳೆದ 15-20 ವರ್ಷದಿಂದ ನೂರಾರು ಹೆಬ್ಬಾವುಗಳನ್ನು ಹಿಡಿದಿರುವ ಉರಗ ತಜ್ಞ ಹರೀಂದ್ರ, ಇಷ್ಟು ವರ್ಷದಲ್ಲಿ ಇಂತಹ ಹೆಬ್ಬಾವನ್ನು ನೋಡೇ ಇಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಉಮೇಶ್ ಭಟ್ ಅವರ ಕಾಫಿ ತೋಟದ ಒಂದು ಭಾಗದಲ್ಲಿ ಗಿಡಗಳು ಬೆಳೆದಿವೆ. ಕೂಲಿ ಕಾರ್ಮಿಕರು ಇವುಗಳನ್ನು ಸ್ವಚ್ಛಗೊಳಿಸುತ್ತಿದ್ದಾಗ ಮಹಿಳೆ ಹೆಬ್ಬಾವಿನ ತಲೆಯ ಪಕ್ಕದಲ್ಲೇ ಕಾಲಿಟ್ಟಿದ್ದರು. ಹಾವು ಒದ್ದಾಡುವುದನ್ನ ಕಂಡು ಕೂಡಲೇ ಭಯದಿಂದ ಕೂಗಿ, ಓಡಿದ್ದಾರೆ. ಸ್ಥಳಕ್ಕೆ ಬಂದ ಉರಗತಜ್ಞ ಹರೀಂದ್ರ ಸುಮಾರು ಅರ್ಧ ಗಂಟೆಗಳ ಕಾಲ ಪ್ರಯತ್ನ ನಡೆಸಿ ಹೆಬ್ಬಾವನ್ನು ಸೆರೆ ಹಿಡಿದಿದ್ದಾರೆ.

ಹಾವು ಕೆಳಗೆ ಮಲಗಿದಾಗ ತೆಂಗಿನ ಮರದಿಂದ ಕಾಣುತ್ತಿತ್ತು. ಭಾರೀ ಗಾತ್ರದ ಈ ಹೆಬ್ಬಾವು ಮನುಷ್ಯನನ್ನು ಸುಲಭವಾಗಿ ನುಂಗುವಂತಿತ್ತು. ಸಾಮಾನ್ಯವಾಗಿ ಹೆಬ್ಬಾವುಗಳು ತುಂಬಾ ಜೋರಿರುತ್ತವೆ. ಹಿಡಿದ ಕೂಡಲೇ ಹೇಗೆ ಬೇಕೋ ಹಾಗೇ ಸುತ್ತಿಕೊಳ್ಳುತ್ತವೆ. ಆದರೆ ಈ ಹೆಬ್ಬಾವನ್ನು ಹಿಡಿದು ಚೀಲಕ್ಕೆ ತುಂಬಲು ಮೂರು ಜನ ಎತ್ತಿದರೂ ಯಾವುದೇ ರೀತಿಯ ಪ್ರತಿರೋಧ ತೋರಲಿಲ್ಲ ಎಂದಿದ್ದಾರೆ.

ಹಾವು ಉಪವಾಸದಿಂದ ನಿತ್ರಾಣಗೊಂಡಿರಬಹುದು. ಉಪವಾಸವಿದ್ದ ಕಾರಣ ಯಾವುದೇ ರೀತಿಯ ಪ್ರತಿರೋಧ ತೋರದಿರಬಹುದು. ಎಲ್ಲ ಹೆಬ್ಬಾವುಗಳು ಇಷ್ಟು ಮೃದು ಹಾಗೂ ಸೈಲೆಂಟ್ ಇರುವುದಿಲ್ಲ. ಸೆರೆ ಹಿಡಿಯುವಾಗ ಸುತ್ತಲೂ ನಿಂತಿದ್ದ ಜನ, ಹೆಬ್ಬಾವಿನ ಗಾತ್ರ ಕಂಡು ಗಾಬರಿಯಾಗಿದ್ದಾರೆ. ಸೆರೆ ಹಿಡಿದ ಹೆಬ್ಬಾವನ್ನು ಸ್ನೇಕ್ ಹರೀಂದ್ರ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *