30 ದಿನಗಳ ವಿಶ್ರಾಂತಿಗಾಗಿ ಮೈಸೂರಿನ ಬೈಲಕುಪ್ಪೆಗೆ 14ನೇ ದಲೈಲಾಮ ಆಗಮನ!

Public TV
1 Min Read

ಮಡಿಕೇರಿ: ಟಿಬೆಟಿಯನ್ನರ ಸಾಂಪ್ರದಾಯಿಕ ಧರ್ಮಗುರುಗಳಾದ 14ನೇ ದಲೈಲಾಮ (14th Dalai Lama) ಅವರು 30 ದಿನಗಳ ವಿಶ್ರಾಂತಿಗಾಗಿ ಬೈಲಕುಪ್ಪೆಯ ಟಿಬೆಟಿಯನ್‌ ಕ್ಯಾಂಪ್‌ಗೆ (Tibetan Camp) ಆಗಮಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಬೆಂಗಳೂರಿನಿಂದ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ, ಬೈಲಕುಪ್ಪೆಯ 4ನೇ ಕ್ಯಾಂಪಿನಲ್ಲಿರುವ ಎಲಿಫ್ಯಾಡ್‌ಗೇ ಸುರಕ್ಷಿತವಾಗಿ ಬಂದಿಳಿದರು.

ದಲೈಲಾಮ ಅವರು ಆಗಮಿಸುತ್ತಿದ್ದಂತೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಟಿಬೇಟಿಯನ್ನರು, 6 ಕಿಮೀ ರಸ್ತೆ ಯುದ್ದಕ್ಕೂ ಟಿಬೆಟಿಯನ್ ಮಾದರಿಯ ಉಡುಪುಗಳನ್ನು ಧರಿಸಿ ಬೆಳಗ್ಗೆ 6 ಗಂಟೆಯಿಂದಲೇ ತಮ್ಮ ನೆಚ್ಚಿನ ಗುರುಗಳ ದರ್ಶನಕ್ಕೆ ಕಾದುಕುಳಿತಿದ್ದರು.

ಜೆಡ್ ಪ್ಲಸ್ ಭದ್ರತೆ ಹೊಂದಿರುವ ದಲೈಲಾಮ ಅವರು ಆಗಮಿಸುತ್ತಿದ್ದಂತೆ, ಸುಮಾರು 250ಕ್ಕೂ ಹೆಚ್ಚು ಪೊಲೀಸ್ ಭದ್ರತೆಯಲ್ಲಿ ಎಲಿಫ್ಯಾಡ್ ನಿಂದ ಕಾರಿನ ಮುಖಾಂತರ ಲಕ್ಷ್ಮಿಪುರ ಗ್ರಾಮದಲ್ಲಿರುವ ತಶಿಲಾಂಪು ದೇವಸ್ಥಾನಕ್ಕೆ ತೆರಳಿದರು. ಈ ವೇಳೆ ಬೌದ್ಧ ಬಿಕ್ಕುಗಳು ಬಗೆ-ಬಗೆಯ ಹೂಗಳನ್ನು ಚೆಲ್ಲುತ್ತಾ ಆತ್ಮೀಯವಾಗಿ ದೇವಸ್ಥಾನದ ಒಳಗೆ ಬರಮಾಡಿಕೊಂಡರು. ಇಲ್ಲಿನ ಸ್ಥಳೀಯ ಟಿಬೆಟಿಯನ್ನರು ಸಾಂಪ್ರದಾಯಿಕ ನೃತ್ಯಗಳನ್ನು ಸಹ ಮಾಡಿದ ದೃಶ್ಯ ಕಂಡುಬಂದಿತು.

ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಎಸ್‌ಪಿ ನಾಗೇಶ್, ಡಿವೈಎಸ್ಪಿ ಗೋಪಾಲಕೃಷ್ಣ, ವೃತ್ತ ನಿರೀಕ್ಷಕ ದೀಪಕ್, ಬೈಲಕುಪ್ಪೆ ಠಾಣಾಧಿಕಾರಿ ಅಜಯ್ ಕುಮಾರ್, ಸ್ಥಳೀಯ ಸೆಟಲ್ಮೆಂಟ್ ಅಧಿಕಾರಿಗಳಾದ ಗ್ಯಾಲಕ್, ಚಿಮ್ಮಿ ದೊರ್ಜಿ, ಟಿಡಿಎಲ್ ಸೊಸೈಟಿ ಅಧ್ಯಕ್ಷ ಜೋಡೆನ್, ಇಂಡೋ ಟಿಬೆಟಿಯನ್ ಫ್ರೆಂಡ್ಶಿಪ್ ಅಧ್ಯಕ್ಷ ಜವರೇಗೌಡ, ಸುತ್ತ ಮುತ್ತ ಟಿಬೆಟಿಯನ್ ದೇವಸ್ಥಾನದ ಹಿರಿಯ ಬೌದ್ಧ ಗುರುಗಳು ಇದ್ದರು.

Share This Article