ವಿಮಾನ ದುರಂತ – ಟೀ ಅಂಗಡಿ ಬಳಿ ನಿಂತಿದ್ದ 14 ವರ್ಷದ ಬಾಲಕ ಸಾವು

Public TV
2 Min Read

– ತಾಯಿಗೆ ತಿಂಡಿ ಕೊಡಲು ಹೋಗಿದ್ದ ಬಾಲಕ ಬೆಂಕಿಯ ತೀವ್ರತೆಗೆ ದುರ್ಮರಣ

ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದ (Air India Flight Crash) ವೇಳೆ ಅಲ್ಲೇ ಪಕ್ಕದ ಟೀ ಸ್ಟಾಲ್ ಬಳಿ ನಿಂತಿದ್ದ 14 ವರ್ಷದ ಬಾಲಕ ಬೆಂಕಿಯ ತೀವ್ರತೆಗೆ ಸಿಲುಕಿ ದಾರುಣ ಅಂತ್ಯ ಕಂಡಿದ್ದಾನೆ.

ಆಕಾಶ್ (14) ಮೃತ ಬಾಲಕ. ಬಿಜೆ ಹಾಸ್ಟೆಲ್‌ನ ಮುಂಭಾಗ ಆಕಾಶ್ ಕುಟುಂಬವು ಟೀ ಅಂಗಡಿ ಇಟ್ಟುಕೊಂಡಿದ್ದರು. ಆಕಾಶ್ ತಾಯಿಗೆ ತಿಂಡಿ ಕೊಡಲು ಅಂಗಡಿ ಬಳಿ ಹೋಗಿದ್ದ. ವಿಮಾನ ದುರಂತದ ವೇಳೆ ಆಕಾಶ್ (Akash) ಟೀ ಅಂಗಡಿಯ ಮುಂದೆ ನಿಂತಿದ್ದ. ಇದ್ದಕ್ಕಿದ್ದಂತೆ ಸ್ಫೋಟದಿಂದ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಆಕಾಶ್ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: Plane crash | ಲಂಡನ್ ತಲುಪಿ ಫೋನ್ ಮಾಡ್ತೀನಿ ಅಂದವ್ಳು ಬಾರದ ಲೋಕಕ್ಕೆ ಹೋದ್ಳು..!

ಆಕಾಶ್‌ನನ್ನು ಕಳೆದುಕೊಂಡ ಸಹೋದರ ಕಲ್ಪೇಶ್ ಆಕ್ರಂದನ ಮುಗಿಲು ಮುಟ್ಟಿತು. ನನ್ನ ದೊಡ್ಡಣ್ಣ ನನಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ನಾನು ಆಟೋ ಓಡಿಸುತ್ತಿದ್ದೆ. ಬೆಂಕಿ ತೀವತ್ರೆಗೆ ಗಾಯಗೊಂಡಿದ್ದ ನನ್ನ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದರು. ನನ್ನ ತಮ್ಮ ಅಲ್ಲೇ ಸಿಲುಕಿದ್ದ. ನನ್ನ ತಮ್ಮನನ್ನು ಒಮ್ಮೆ ನೋಡಲು ಬಿಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಇಡೀ ವಿಮಾನ ಸುಟ್ಟು ಭಸ್ಮವಾದರೂ ಒಂದಿಷ್ಟೂ ಹಾನಿಯಾಗದ ಸ್ಥಿತಿಯಲ್ಲಿ ಸಿಕ್ತು ಭಗವದ್ಗೀತೆ ಪುಸ್ತಕ

ನನ್ನ ತಮ್ಮ ಆಕಾಶ್ ಕೂಡ ಅಲ್ಲೇ ಇದ್ದ. ಆದರೆ ಅವನನ್ನು ಯಾರೂ ರಕ್ಷಣೆ ಮಾಡೋರಿಲ್ಲದೆ ಸಾವನ್ನಪ್ಪಿದ್ದಾನೆ. ನನ್ನ ತಮ್ಮ ಇಲ್ಲದೆ ನಾನು ಹೇಗೆ ಬದುಕಲಿ. ಒಮ್ಮೆ ನನ್ನ ಸಹೋದರನ ಮುಖ ನೋಡಲು ಬಿಡಿ. ದೇವರು ನನ್ನ ತಮ್ಮನ ಕಿತ್ಕೊಂಡ. ನನ್ನ ತಮ್ಮನನ್ನು ನಿನ್ನೆಯಿಂದ ನೋಡಿಲ್ಲ. ದಯಮಾಡಿ ನನ್ನ ಚಿಕ್ಕ ತಮ್ಮನನ್ನು ನೋಡಲು ಬಿಡಿ ಎಂದು ಪರಿ ಪರಿಯಾಗಿ ಬೇಡಿಕೊಂಡರು. ಇದನ್ನೂ ಓದಿ: Plane Crash | ಅಪ್ಪನ ಅಂತ್ಯ ಸಂಸ್ಕಾರ ಮುಗಿಸಿ ಹೊರಟಿದ್ದ ಮಗ ದುರಂತ ಸಾವು

ನನ್ನ ತಾಯಿಗೆ ಇನ್ನೂ ವಿಷಯ ತಿಳಿದಿಲ್ಲ. ಆಕೆಗೆ ಕೂಡ ಚಿಕಿತ್ಸೆ ಕೊಡಿಸಲಾಗ್ತಿದೆ. ಮಗ ಹೇಗಿದ್ದಾನೆ ಎಂದು ಕೇಳ್ತಿದ್ದಾರೆ. ಆಕಾಶ್‌ಗೆ ಏನೂ ಆಗಿಲ್ಲ, ಚೆನ್ನಾಗಿದ್ದಾನೆ ಎಂದು ಅವರನ್ನು ಸಮಾಧಾನಪಡಿಸಿದ್ದೇವೆ ಎಂದು ದುಃಖಿಸಿದರು.

Share This Article