– ಬಾಲಕನ ಜೀವ ಬಲಿ ಪಡೆದ ಯುಜಿಡಿ ಕಾಮಗಾರಿ
ಬಳ್ಳಾರಿ: ನಿರ್ಮಾಣ ಹಂತದಲ್ಲಿದ್ದ ಯುಜಿಡಿ ಕಾಮಗಾರಿಯ ಗುಂಡಿಗೆ ಬಿದ್ದು ಬಾಲಕನೊಬ್ಬ ಮೃತಪಟ್ಟ ಘಟನೆ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಹೊಸಪೇಟೆಯ ರಮೇಶ್ ಎಂಬವರ ಪುತ್ರ ಹನುಮಂತ (14) ಮೃತ ಬಾಲಕ. ನಗರಸಭೆಯ ನಿರ್ಮಾಣ ಹಂತದ ಒಳಚರಂಡಿ ಕಾಮಗಾರಿಯಲ್ಲಿ ಹನುಮಂತ ಬಿದ್ದು ಪ್ರಾಣ ಬಿಟ್ಟಿದ್ದಾನೆ.
ಬಾಲಕ ಹನುಮಂತ ಮಂಗಳವಾರ ಮಧ್ಯಾಹ್ನ ಸ್ಥಳೀಯ ಬಾಲಕರ ಜೊತೆಗೆ ಆಟವಾಡುತ್ತಿದ್ದ. ಈ ವೇಳೆ ಆಟವಾಡುತ್ತಿದ್ದ ಚೆಂಡು ನಿರ್ಮಾಣ ಹಂತದ ಗುಂಡಿಯಲ್ಲಿ ಬಿದ್ದಿತ್ತು. ಹನುಮಂತ ಬಾಲ್ ತರಲು ಗುಂಡಿಯ ಒಳಗೆ ಇಳಿದಿದ್ದಾಗ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಈ ಘಟನೆಗೆ ಹೊಸಪೇಟೆ ನಗರಸಭೆಯ ಒಳಚರಂಡಿ ಕಾಮಗಾರಿಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾರಣ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೃತ ಬಾಲಕನ ಸಂಬಂಧಿಕರು ಒತ್ತಾಯಿಸಿದ್ದಾರೆ.
ದುರಂತ ಎಂದರೆ ಹನುಮಂತನ ತಂದೆ ರಮೇಶ್ ಆರೋಗ್ಯದಲ್ಲಿ ಏರುಪೇರಾಗಿದ್ದು ಬುಧವಾರ ಶಸ್ತ್ರಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಾಗಬೇಕಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ತಂದೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕಿದ್ದ ಮಗ ವಿಧಿಯಾಟಕ್ಕೆ ಬಲಿಯಾಗಿದ್ದಾನೆ.
ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.