ಮತ್ತೆ ಪಾಕ್ ಬಣ್ಣ ಬಯಲು: ಗಡಿಯಲ್ಲಿ ಪತ್ತೆ ಆಯ್ತು 14 ಅಡಿ ಉದ್ದದ ಸುರಂಗ

Public TV
2 Min Read

ಶ್ರೀನಗರ: ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಒಳನುಸುಳಿ ಬರಲು ಉಗ್ರರು ತೋಡಿದ್ದ 14 ಅಡಿ ಉದ್ದ ಬೃಹತ್ ಸುರಂಗವೊಂದು ಜಮ್ಮು-ಕಾಶ್ಮೀರದ ಅರ್ನಿಯಾ ಗಡಿ ಪ್ರದೇಶದಲ್ಲಿ ಪತ್ತೆಯಾಗಿದೆ.

ಗಡಿ ಪ್ರದೇಶದಲ್ಲಿ ಭಾರತದ ಸೈನಿಕರ ಕಣ್ಣು ತಪ್ಪಿಸಿ ಭಾರತದ ಒಳಗೆ ಪ್ರವೇಶಿಸಲು ಸುರಂಗ ಮಾರ್ಗಗಳನ್ನು ಬಳಕೆ ಮಾಡಲಾಗುತ್ತಿದ್ದು, ಜಮ್ಮುವಿನಲ್ಲಿ ಹಬ್ಬಗಳ ಸಂದರ್ಭದಲ್ಲಿ ಭಾರೀ ವಿದ್ವಾಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಗಡಿ ಭದ್ರತಾ ಪಡೆಗಳು(ಬಿಎಸ್‍ಎಫ್) ತಿಳಿಸಿವೆ.

ಭಾರತ ಹಾಗೂ ಪಾಕ್ ಗಡಿಯಲ್ಲಿ ಈ ಹಿಂದೆ ಹಲವು ಸುರಂಗ ಮಾರ್ಗಗಳು ಪತ್ತೆಯಾಗಿದ್ದವು. ಕಳೆದ ಬಾರಿ ಸಾಂಭಾ ಜಿಲ್ಲೆಯ ರಾಮ್‍ಗಾರ್ ಪ್ರದೇಶದಲ್ಲಿ ಇಂತದ್ದೆ ಸುರಂಗ ಪತ್ತೆಯಾಗಿತ್ತು. ಈಗ ಮತ್ತೊಂದು ಸುರಂಗ ಪತ್ತೆಯಾದ ಹಿನ್ನೆಲೆಯಲ್ಲಿ ಮತ್ತಷ್ಟು ಸುರಂಗಗಳು ಇರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ.

ಈ ಸುರಂಗ ಮಾರ್ಗ ಪತ್ತೆಯಾಗುವ ಮುನ್ನ ದಿನವೇ ಭಾರತದ ಬಿಎಸ್‍ಎಫ್ ಅಧಿಕಾರಿಗಳು ಪಾಕ್ ರೆಂಜರ್‍ಗಳನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದರು.

ಬಿಎಸ್‍ಎಫ್ ಅಧಿಕಾರಿ ರಾಮ್ ಅವತಾರ್ ತಿಳಿಸುವಂತೆ ಉಗ್ರರು ಕಳೆದ 2-3 ದಿನಗಳ ಹಿಂದೆ ಸುರಂಗವನ್ನು ಕೊರೆಯಲು ಆರಂಭಿಸಿದ್ದು, ಈ ಸುರಂಗ ಮಾರ್ಗವು ಸುಮಾರು 14 ಅಡಿ ಉದ್ದವಿದ್ದು, 3 ಅಡಿ ಎತ್ತರ, 2.5 ಅಡಿ ಅಗಲವನ್ನು ಹೊಂದಿದೆ. ಜಮ್ಮುವಿನಲ್ಲಿ ಭಾರೀ ಪ್ರಮಾಣದ ದಾಳಿ ನಡೆಯುವ ಕುರಿತು ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಈ ಕಾರ್ಯಾಚರಣೆಯನ್ನು ಕೈಗೊಂಡಿರುವುದಾಗಿ ತಿಳಿಸಿದರು.

ಎಕೆ 47 ಗನ್, ಉಗ್ರರ ಸೇವಿಸಲು ಸಿದ್ಧವಾಗಿದ್ದ ಆಹಾರ ಉತ್ಪನ್ನಗಳು, ಗ್ರೆನೇಡ್, ನಾಲ್ಕು ಸ್ಲೀಪರ್ ಸೆಲ್‍ಗಳು ಮತ್ತು ಹಲವು ಯುದ್ಧ ಸಾಮಾಗ್ರಿಗಳು ಪತ್ತೆಯಾಗಿವೆ ಎಂದು ರಾಮ್ ತಿಳಿಸಿದರು.

ಅಲ್ಲದೇ ಕಾರ್ಯಾಚರಣೆಯ ವೇಳೆ ಪಾಕಿಸ್ತಾನದ 10-12 ಜನರ ಶಸ್ತ್ರಸಜ್ಜಿತ ಗುಂಪು ಧಾಮ್ಲ ನಲ್ಲಾ ಪ್ರದೇಶದಲ್ಲಿ ನಮ್ಮ ಮೇಲೆ ದಾಳಿಯನ್ನು ಮಾಡಿತು. ಆದರೆ ನಮ್ಮ ಯೋಧರು ದಾಳಿಯನ್ನು ಎದುರಿಸಿ ಅವರನ್ನು ಹಿಮ್ಮೆಟ್ಟಿಸಿದ್ದಾರೆ. ಇದೇ ಸಮಯದಲ್ಲಿ ಪಾಕಿಸ್ತಾನಿ ಯೋಧರು ಮನಬಂದಂತೆ ಗುಂಡು ಹಾರಿಸಿದರು. ಅದರೂ ಬಿಎಸ್‍ಎಫ್ ಯೋಧರು ಸುರಂಗ ಮಾರ್ಗವಿದ್ದ ಸ್ಥಳವನ್ನು ತಲುಪಲು ಯಶಸ್ವಿಯಾಗಿದ್ದಾರೆ ಎಂದು ರಾಮ್ ವಿವರಿಸಿದರು.

ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ವಿಚಾರವನ್ನು ಭಾರತ ಈಗಾಗಲೇ ವಿಶ್ವದ ಮುಂದೆ ಅನಾವರಣಗೊಳಿಸಿದೆ. ಮೋದಿ ಸರ್ಕಾರವು ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಕಾರಣ ನಮ್ಮ ಬಿಎಸ್‍ಎಫ್ ಯೋಧರು ವಿರೋಧಿಗಳ ಪ್ರಯತ್ನಗಳನ್ನು ಸತತವಾಗಿ ಹಿಮ್ಮೆಟಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತೋಮರ್ ಪ್ರತಿಕ್ರಿಯಿಸಿದ್ದಾರೆ.

ಈ ಹಿಂದೆ 2009ರಲ್ಲಿ ಅಕ್ನೋರ್ ವಲಯದಲ್ಲಿ ಹಾಗೂ 2012ರಲ್ಲಿ ಸಾಂಬಾ ವಲಯದಲ್ಲಿ ಸುಮಾರು 400 ಮೀಟರ್ ಉದ್ದದ ಸುರಂಗವನ್ನು ಬಿಎಸ್‍ಎಫ್ ಯೋಧರು ಪತ್ತೆ ಮಾಡಿದ್ದರು.

ಕಳೆದ 15 ದಿನಗಳಲ್ಲಿ ಭಾರತದ ಗಡಿ ಪ್ರದೇಶದಲ್ಲಿ ಪಾಕ್ ದಾಳಿಯಿಂದ ಬಿಎಸ್‍ಎಫ್ ಯೋಧ ಬಹದ್ದೂರ್ ಸೇರಿದಂತೆ 32 ನಾಗರಿಕರು ಮೃತಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *