ಜಾರ್ಖಂಡ್ ದೋಣಿ ದುರಂತದಲ್ಲಿ 14 ಮಂದಿ ಸಾವು – ಸಿಎಂನಿಂದ 4 ಲಕ್ಷ ಪರಿಹಾರ ಘೋಷಣೆ

Public TV
2 Min Read

ರಾಂಚಿ: ಜಾರ್ಖಂಡ್‍ನ ಜಮ್ತಾರಾ ಜಿಲ್ಲೆಯ ಬಳಿಯ ನದಿಯಲ್ಲಿ ಇತ್ತೀಚೆಗಷ್ಟೇ ಪ್ರಯಾಣಿಕ ದೋಣಿ ಮುಳುಗಡೆಗೊಂಡಿದ್ದು, ಸೋಮವಾರ ಎನ್‌ಡಿಆರ್‌ಎಫ್ ತಂಡ ಆರು ಶವಗಳನ್ನು ಹೊರತೆಗೆದಿದ್ದಾರೆ ಮತ್ತು ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜಾರ್ಖಂಡ್‍ನ ಜಮ್ತಾರಾದ ದಾಮೋದರ್ ನದಿಯ ಬಾರ್ಬೆಂಡಿಯಾ ಸೇತುವೆಯ ಬಳಿ ಶುಕ್ರವಾರ ದೋಣಿ ಮುಳುಗಿ ಈ ದುರಂತ ಸಂಭವಿಸಿದೆ. ಇದನ್ನೂ ಓದಿ:  ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಬಯಲು- 1000 ಕೋಟಿಗೂ ಅಧಿಕ ಅಕ್ರಮ ಪತ್ತೆ

ಸೋಮವಾರ ಆರು ಮೃತದೇಹಗಳು ಪತ್ತೆಯಾಗಿದ್ದು, ಭಾನುವಾರ ಎಂಟು ಮಂದಿ ಶವ ಪತ್ತೆಯಾಗಿತ್ತು. ಇನ್ನೂ ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ. ಒಟ್ಟು ಈವರೆಗೂ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಎಂದು ಜಮ್ತಾರಾ ಉಪ ಆಯುಕ್ತ ಫೈಜ್ ಅಹ್ಮದ್ ಮುಮ್ತಾಜ್ ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಡೈವರ್‌ಗಳ ಹುಡುಕಾಟ ಬಹುತೇಕ ಮುಗಿದಿದೆ ಎಂದು ಅವರು ಹೇಳಿದರು. ಈ ಘಟನೆ ಕುರಿತಂತೆ ವಿಧಾನಸಭೆಯಲ್ಲಿ ನಿರ್ಸಾದ ಬಿಜೆಪಿ ಶಾಸಕಿ ಅಪರ್ಣಾ ಸೇನ್‍ಗುಪ್ತಾ ಅವರು ಕೇಳಿದ ಪ್ರಶ್ನೆಗೆ ಹೇಮಂತ್ ಸೋರೆನ್ ಅವರು, ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬದವರಿಗೆ ವಿಪತ್ತು ನಿರ್ವಹಣಾ ಇಲಾಖೆಯಿಂದ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ

ನದಿಗೆ ಅಡ್ಡಲಾಗಿರುವ ಬಾರ್ಬೆಂಡಿಯಾ ಸೇತುವೆ ಕಾರ್ಯರೂಪಕ್ಕೆ ತಂದಿದ್ದರೆ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ವಿರೋಧ ಪಕ್ಷಗಳ ಹಲವಾರು ನಾಯಕರು ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೇ ಸೇತುವೆಯ ದುರಸ್ತಿ ಕಾರ್ಯಗಳು ಪೂರ್ಣಗೊಳ್ಳದ ಕಾರಣ ಜನರು ನದಿ ದಾಟಲು ನದಿ ಮಾರ್ಗದ ಮೂಲಕ ಹೋಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *