ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ 14 ದಿನ ನ್ಯಾಯಾಂಗ ಬಂಧನ

Public TV
1 Min Read

ಬೆಂಗಳೂರು: ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿಪಡಿಸಿದ ಹಾಗೂ ಶಾಂತಿ ಸುವ್ಯವಸ್ಥೆಗೆ ಭಂಗ ತಂದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ (Puneeth Kerehalli) 14 ದಿನ ನ್ಯಾಯಾಂಗ ಬಂಧನಕ್ಕೆ 5ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.

ಶನಿವಾರ ಕಾಟನ್ ಪೇಟೆ ಪೊಲೀಸರ (Cottonpet Police) ವಿಚಾರಣೆ ವೇಳೆ ಹೊಟ್ಟೆ ನೋವಿನಿಂದ ಏಕಾಏಕಿ ಕುಸಿದು ಬಿದ್ದಿದ್ದ ಪುನೀತ್‌ ಕೆರೆಹಳ್ಳಿಯನ್ನ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ವೇಳೆ ವಿಕ್ಟೋರಿಯಾ ಆಸ್ಪತ್ರೆಯಿಂದ ಕರೆತಂದಿದ್ದ ಪೊಲೀಸರು ಕೋರಮಂಗಲದ ಜ್ಯೂಡಿಷಿಯಲ್ ಬ್ಲಾಕ್ ನಲ್ಲಿರುವ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ಈ ವೇಳೆ 5ನೇ ಎಸಿಎಂಎಂ ಕೋರ್ಟ್ (ACMM Court) ನ್ಯಾಯಾಧೀಶ ಶಿವಕುಮಾರ್‌ ಅವರು 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಸೋಮವಾರ (ಜು.29) ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಪುನೀತ್‌ ಕೆರೆಹಳ್ಳಿ ಅರೆಸ್ಟ್‌ ಆಗಿದ್ದೇಕೆ?
ನಾಯಿ ಮಾಂಸದ ಜೊತೆಗೆ ಕುರಿ ಮಾಂಸವನ್ನು ರಾಜಸ್ಥಾನದಿಂದ ಬೆಂಗಳೂರಿಗೆ (Bengaluru) ತಂದು ಮಾರಾಟ ಮಾಡುತ್ತಿದ್ದಾರೆ ಎಂದು ಪುನೀತ್ ಕೆರೆಹಳ್ಳಿ ಹಾಗೂ ಹಿಂದೂ ಪರ ಕಾರ್ಯಕರ್ತರು ಮೆಜೆಸ್ಟಿಕ್ ರೈಲು ನಿಲ್ದಾಣದ ಬಳಿ ಪ್ರತಿಭಟಿಸಿದ್ದರು. ಈ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಮಧ್ಯರಾತ್ರಿ 12:00 ಗಂಟೆ ವೇಳೆಗೆ ಅವರನ್ನು ಕಾಟನ್ ಪೇಟೆ ಪೊಲೀಸರು (Cottonpet Police) ಬಂಧಿಸಿದ್ದರು.

ಬಂಧನವಾಗುತ್ತಿದ್ದಂತೆ ಪುನೀತ್ ಕೆರೆಹಳ್ಳಿ ಅಸ್ವಸ್ಥಗೊಂಡಿದ್ದರು. ಇನ್ನೂ ಬೆಳಗಿನ ಜಾವ 4:45ರ ವೇಳೆಗೆ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ವೈದ್ಯರು ಆರೋಗ್ಯ ತಪಾಸಣೆ ವೇಳೆ ಎಲ್ಲಾ ನಾರ್ಮಲ್ ಇರುವುದು ತಿಳಿದುಬಂದಿತ್ತು. ಹಾಗಾಗಿ ಸಂಜೆ ವೇಳೆ ಕರೆದೊಯ್ದು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು.

ಪುನೀತ್ ಕೆರೆಹಳ್ಳಿ ವಿರುದ್ಧ ಬಿಎನ್‌ಎಸ್‌ನ 132 ಆಕ್ಟ್ (ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ) 351 (2) ಶಾಂತಿಭಂಗ ಪ್ರಕರಣ ದಾಖಲಿಸಲಾಗಿದೆ.

Share This Article