2020 ರಲ್ಲಿ 14-1, 2025 ರಲ್ಲಿ 4-11: ರಾಜಧಾನಿ ಹೋರಾಟದಲ್ಲಿ ಎಎಪಿಗೆ ದಕ್ಷಿಣ ದೆಹಲಿ ದೊಡ್ಡ ಹಿನ್ನಡೆ

Public TV
1 Min Read

ನವದೆಹಲಿ: ದೆಹಲಿ ಚುನಾವಣೆಯ (Delhi Election) ಆರಂಭಿಕ ಮತ ಎಣಿಕೆಯಲ್ಲಿ ಎಎಪಿಗಿಂತ (AAP) ಬಿಜೆಪಿ (BJP) ಮುನ್ನಡೆ ಸಾಧಿಸುತ್ತಿದೆ. ದಕ್ಷಿಣ ದೆಹಲಿಯ (South Delhi) 15 ವಿಧಾನಸಭಾ ಕ್ಷೇತ್ರಗಳಲ್ಲಿ, ಬಿಜೆಪಿ 11 ಮತ್ತು ಎಎಪಿ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

ಈ 15 ಸ್ಥಾನಗಳಲ್ಲಿ ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದ 10 ವಿಧಾನಸಭಾ ಕ್ಷೇತ್ರಗಳು ಮತ್ತು ನವದೆಹಲಿ, ಗ್ರೇಟರ್ ಕೈಲಾಶ್, ಮಾಲ್ವಿಯಾ ನಗರ, ಆರ್‌ಕೆ ಪುರಂ ಮತ್ತು ಕಸ್ತೂರ್ಬಾ ನಗರ ಕ್ಷೇತ್ರಗಳು ಸೇರಿವೆ. 2020ರ ವಿಧಾನಸಭಾ ಚುನಾವಣೆಯಲ್ಲಿ, ಎಎಪಿ ಈ 15 ಸ್ಥಾನಗಳಲ್ಲಿ 14 ಸ್ಥಾನಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಎಎಪಿಗೆ ದೊಡ್ಡ ಹಿನ್ನಡೆ ಕಂಡುಬರುತ್ತಿದೆ.

ಬಿಜೆಪಿ ಮುನ್ನಡೆ ಸಾಧಿಸುತ್ತಿರುವ ಪ್ರಮುಖ ಕ್ಷೇತ್ರಗಳಲ್ಲಿ ಕಲ್ಕಾಜಿ ಕೂಡ ಒಂದು. ಅಲ್ಲಿ ಮುಖ್ಯಮಂತ್ರಿ ಅತಿಶಿ ಎಎಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರು ಮಾಜಿ ಬಿಜೆಪಿ ಸಂಸದ ರಮೇಶ್ ಬಿಧುರಿ ಮತ್ತು ಕಾಂಗ್ರೆಸ್‌ನ ಅಲ್ಕಾ ಲಂಬಾ ವಿರುದ್ಧ ಸ್ಪರ್ಧಿಸಿದ್ದಾರೆ.

ದೆಹಲಿ ಸಚಿವ ಮತ್ತು ಎಎಪಿ ನಾಯಕ ಸೌರಭ್ ಭಾರದ್ವಾಜ್ ಅವರ ಭದ್ರಕೋಟೆಯಾದ ಗ್ರೇಟರ್ ಕೈಲಾಶ್ ಎಎಪಿಗೆ ಹಿನ್ನಡೆಯಾಗಿರುವ ಇನ್ನೊಂದು ಪ್ರಮುಖ ಸ್ಥಾನವಾಗಿದೆ. ಎಎಪಿ ನಾಯಕ ಸೋಮನಾಥ್ ಭಾರತಿ ಪ್ರತಿನಿಧಿಸುವ ಮಾಲ್ವಿಯಾ ನಗರ ಈ ಬಾರಿ ಬಿಜೆಪಿ ಕಡೆ ವಾಲುತ್ತಿದೆ.

ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸ್ಪರ್ಧಿಸಿರುವ ನವದೆಹಲಿ ಕ್ಷೇತ್ರದಲ್ಲಿ ನೇರ ಹೋರಾಟ ನಡೆಯುತ್ತಿದೆ. ಹಿಂದಿನ ಸುತ್ತುಗಳಲ್ಲಿ ಹಿಂದುಳಿದಿದ್ದ ಕೇಜ್ರಿವಾಲ್ ಈಗ ಮುನ್ನಡೆ ಸಾಧಿಸಿದ್ದಾರೆ.

ಎಣಿಕೆ ಆರಂಭವಾದ ಎರಡು ಗಂಟೆ ಒಳಗೆ ಅಂದರೆ ಬೆಳಿಗ್ಗೆ 10 ಗಂಟೆಗೆ, 70 ಸ್ಥಾನಗಳಲ್ಲಿ 44 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಎಎಪಿ 25 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಈಗ ಬಿಜೆಪಿ 45, ಎಎಪಿ 25 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

Share This Article