ಆಟವಾಡುತ್ತಿದ್ದಾಗ 13ರ ಬಾಲಕನಿಂದ ಫೈರಿಂಗ್ – 3ರ ಮಗು ಸಾವು

Public TV
1 Min Read

– ಅಸಲಿ ಬಂದೂಕು ಎಂದು ತಿಳಿಯದೇ ಫೈರಿಂಗ್

ಮಂಡ್ಯ: ಆಟವಾಡುತ್ತಿರುವಾಗ ಬಾಲಕನೋರ್ವ ಅಸಲಿ ಬಂದೂಕು ಎಂದು ತಿಳಿಯದೇ ಫೈರಿಂಗ್ ಮಾಡಿದ ಪರಿಣಾಮ 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಮಂಡ್ಯ (Mandya) ಜಿಲ್ಲೆ ನಾಗಮಂಗಲ (Nagamangala) ತಾಲ್ಲೂಕಿನ ದೊಂದೇಮಾದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದವರಾದ ಶಶಾಂಕ್ ಹಾಗೂ ಲಿಪಿಕಾ ದಂಪತಿಯ ಮಗ ಅಭಿಷೇಕ್(3) ಮೃತಪಟ್ಟ ಬಾಲಕ. ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಅವರ ಕೋಳಿ ಫಾರಂನಲ್ಲಿ ಕಳೆದು ಕೆಲವು ವರ್ಷಗಳಿಂದ ಈ ದಂಪತಿ ಕೆಲಸ ಮಾಡುತ್ತಿದ್ದರು. ದಂಪತಿಯನ್ನು ಭೇಟಿಯಾಗಲು ಭಾವಶಂಕರ್ ದಾಸ್ ಹಾಗೂ ಆತನ ಮಗ ಸುದೀಪ್ ದಾಸ್ ಬಂದಿದ್ದರು. ಈ ವೇಳೆ ಮಕ್ಕಳಿಬ್ಬರು ಆಟವಾಡುತ್ತಿದ್ದರು.

ಆಟವಾಡುತ್ತಿದ್ದಾಗ ಪರವಾನಗಿ ಪಡೆದು ಇಟ್ಟುಕೊಂಡಿದ್ದ ನರಸಿಂಹಮೂರ್ತಿ ಅವರ ಬಂದೂಕು ಸುದೀಪ್ ಕೈಗೆ ಸಿಕ್ಕಿದ್ದು, ಅಸಲಿ ಬಂದೂಕು ಎಂದು ತಿಳಿಯದೇ ಫೈರಿಂಗ್ ಮಾಡಿದ್ದಾನೆ. ಪರಿಣಾಮ ಅಲ್ಲಿಯೇ ಇದ್ದ ಅಭಿಷೇಕ್ ಹೊಟ್ಟೆಯೊಳಗೆ ಗುಂಡು ಹೊಕ್ಕಿದ್ದು, ತಾಯಿ ಲಿಪಿಕಾ ಕೂಡ ಗಾಯಗೊಂಡಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಕೂಡಲೇ ನಾಗಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಇನ್ನೂ ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಬಂದೂಕು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

Share This Article